ಅದೊಂದು ಕ್ಷೇತ್ರ ಅ ಒಬ್ಬ ಪ್ರಬಲ ನಾಯಕನಿಂದಾಗಿ ಕಳೆದೊಂದು ವರ್ಷದಿಂದ ಸಾಕಷ್ಟು ಸದ್ದು ಮಾಡಿತ್ತು. ಆ ನಾಯಕ ಎಲ್ಲಿಂದ ಸ್ಪರ್ಧೆ ಮಾಡ್ತಾನೆ ಅಂತ ವಿರೋಧ ಪಕ್ಷಗಳಷ್ಟೇ ಅಲ್ಲಾ, ಸ್ವಪಕ್ಷೀಯರು ಕೂಡಾ ಕುತೂಹಲದಿಂದ ಕಾದು ನೋಡುವಂತಾಗಿತ್ತು. ಆದರೆ ಅ ನಾಯಕನೊಬ್ಬನ ಹೆಸರು ಆ ಕ್ಷೇತ್ರದಲ್ಲಿ ಸದ್ದು ಮಾಡಿದ್ದೇ ನೋಡಿ ಇಂದಿಗೂ ಆ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಗೊಂದಲ ಗುಂಡಿಯಲ್ಲೇ ಬಿದ್ದು ಒದ್ದಾಡುವಂತಾಗಿ ಹೋಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು 2023ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲ ಕಳೆದೊಂದು ವರ್ಷದಿಂದ ನಡೆಯುತ್ತಲೇ ಇತ್ತು, ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಬಾದಾಮಿ ಕ್ಷೇತ್ರದಿಂದ ಗೆದ್ದು ಚಾಮುಂಡೇಶ್ವರಿಯಲ್ಲಿ ಸೋತಿದ್ದರು. ಆದರೆ ಈ ಬಾರಿ ಬಾದಾಮಿ ಕ್ಷೇತ್ರ ತುಂಬಾ ದೂರ, ಬೆಂಗಳೂರಿನಿಂದ ಓಡಾಡೋದು ಕಷ್ಟ ಅನ್ನೋ ಕಾರಣಕ್ಕೆ ಈ ಬಾರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡೋದಿಲ್ಲ. ಬೆಂಗಳೂರಿಗೆ ಹತ್ತಿರ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಒಂದು ವರ್ಷದಿಂದ ಸತತವಾಗಿ ಕೇಳಿಬಂದಿತ್ತು. ಅದಕ್ಕೆ ಕಾರಣ ಕೂಡಾ ಇತ್ತು, ಕೋಲಾರ ಕ್ಷೇತ್ರದಲ್ಲಿ ಅಹಿಂದ ಮತಗಳು ಹೆಚ್ಚಾಗಿವೆ ಅನ್ನೋ ಕಾರಣಕ್ಕೆ ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸುಲಭದ ತುತ್ತಾಗುತ್ತದೆ ಎಂಬುದು ಲೆಕ್ಕಾಚಾರವಾಗಿತ್ತು. ಅದರಂತೆ ತೀರಾ ಇತ್ತೀಚೆಗೆ, ನಾಲ್ಕೈದು ತಿಂಗಳಿಂದ ಸಿದ್ದರಾಮಯ್ಯ ಕೋಲಾರದಲ್ಲಿ ಒಂದಷ್ಟು ಓಡಾಡಿ ಕಳೆದ ಮೂರು ತಿಂಗಳ ಹಿಂದಷ್ಟೇ ಅಂದರೆ ಜನವರಿ 09 ರಂದು ತಾನು ಕೋಲಾರದಿಂದಲೇ ಸ್ಪರ್ಧೆ ಮಾಡ್ತೀನಿ ಎಂದು ಘೋಷಣೆ ಮಾಡಿದ್ದರು.
ಸಿದ್ದರಾಮಯ್ಯ ತಾನು ಕೋಲಾರದಿಂದ ಸ್ಪರ್ಧೆ ಮಾಡ್ತೀನಿ ಎಂದು ಘೋಷಣೆ ಮಾಡಿದ್ರು. ಜೊತೆಗೆ, ಸಿದ್ದರಾಮಯ್ಯ ಅವರು ಪದೇ ಪದೇ ಹೈಕಮಾಂಡ್ ಒಪ್ಪಿದರೆ ಮಾತ್ರ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡ್ತೀನಿ ಅನ್ನೋದಷ್ಟನ್ನೇ ಕಳಿಸಿಕೊಂಡಿದ್ದ ಕೋಲಾರದ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ಹೇಳಿದ ಹೈಕಮಾಂಡ್ ಒಪ್ಪಿದ್ರೆ ಮಾತ್ರ ಎನ್ನುವ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಯಾಕಂದ್ರೆ ಸಿದ್ದರಾಮಯ್ಯ ಅವರೇ ಹೈಕಮಾಂಡ್! ಅವರಿಗೆ ಯಾರು ಅಡ್ಡಿ ಎಂದುಕೊಂಡಿದ್ದರು. ಆದರೆ ಇನ್ನೇನು ಚುನಾವಣೆ ಹತ್ತಿರವಾಗಿ ಟಿಕೆಟ್ ಘೋಷಣೆ ವಿಚಾರ ಬಂದಾಗ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದ ಅದೇ ಹೈಕಮಾಂಡ್, ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರ ದಲ್ಲಿ ಸ್ಪರ್ಧೆ ಮಾಡಿ ಎಂದು ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು.
ಇದಾದ ನಂತರ ಕೋಲಾರದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮನೆಯ ಬಳಿ ಹೋಗಿ ಪ್ರತಿಭಟನೆ ಮಾಡಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಲೇಬೇಕು ಎಂದು ಒತ್ತಾಯ ಮಾಡಿದ್ದರು. ಆಗ ಸಿದ್ದರಾಮಯ್ಯ ಮತ್ತೆ ಹೈಕಮಾಂಡ್ ಒಪ್ಪಿದ್ರೆ ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಹೇಳಿಕೆ ನೀಡಿದ್ದರು. ಇದು ಮತ್ತೆ ಗೊಂದಲವನ್ನು ಮುಂದುವರೆಸಿತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೂ ಎರಡು ಕಡೆ ಸ್ಪರ್ಧೆಗೆ ಅವಕಾಶವಿಲ್ಲ ಎನ್ನುವ ಖಡಕ್ ಸಂದೇಶ ಕೊಟ್ಟ ನಂತರ, ಕೋಲಾರದ ಅಭ್ಯರ್ಥಿಯನ್ನಾಗಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಮೂರನೇ ಪಟ್ಟಿಯಲ್ಲಿ ಘೋಷಣೆ ಮಾಡಿತ್ತು. ಹೈಕಮಾಂಡ್ ಕೊತ್ತೂರು ಮಂಜುನಾಥ್ ಅವರ ಒಪ್ಪಿಗೆ ಪಡೆಯದೆ, ಘೋಷಣೆ ಮಾಡಿದ ಹಿನ್ನೆಲೆ ಸದ್ಯ ಕೊತ್ತೂರು ಮಂಜುನಾಥ್ ಅವರು ಕೂಡಾ ಕೋಲಾರದಿಂದ ಸ್ಪರ್ಧೆ ಮಾಡೋದಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ.
ಹಾಗಾದರೆ ಕೋಲಾರದಲ್ಲಿ ಸಿದ್ದರಾಮಯ್ಯ ಎಡವಿದ್ದೆಲ್ಲಿ..!
ಸಿದ್ದರಾಮಯ್ಯ ಕೋಲಾರದ ಮುಖಂಡರು ಹಾಗೂ ಕೆಲವು ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ಕೋಲಾರದಲ್ಲಿನ ಜಾತಿ ಲೆಕ್ಕಾಚಾರವನ್ನು ಕೇಳಿಸಿಕೊಂಡು, ಕೋಲಾರದಲ್ಲಿ ಸುಲಭವಾಗಿ ಗೆಲ್ಲಬಹುದು ಎಂದುಕೊಂಡು, ಹೈಕಮಾಂಡ್ ಗಮನಕ್ಕೂ ತರದೆ, ಕೋಲಾರದ ಮುಖಂಡರುಗಳು ಹೇಳಿದ ಮಾತು ಕೇಳಿ ಕೋಲಾರದಲ್ಲಿ ಸ್ಪರ್ಧೆ ಮಾಡೋದಕ್ಕೆ ನನಗೆ ಮನಸ್ಸಿದೆ ಎಂದು ಹೇಳಿದ್ದೇ ಸಿದ್ದರಾಮಯ್ಯ ಮಾಡಿದ ದೊಡ್ಡ ತಪ್ಪು!
ಪ್ರತಿ ಬಾರಿ ಹೈಕಮಾಂಡ್ ಹೆಸರೇಳುತ್ತಿದ್ದ ಸಿದ್ದರಾಮಯ್ಯ ಜನವರಿ 9 ರಂದು ಕೋಲಾರದಿಂದ ಸ್ಪರ್ಧೆ ಮಾಡೋದಾಗಿ ಕೋಲಾರದಲ್ಲಿಯೇ ಘೋಷಣೆ ಮಾಡುವ ಮುನ್ನ ಅದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಿಲ್ಲ. ಇದು ಹೈಕಮಾಂಡ್ಗೂ ಒಂದು ರೀತಿಯ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದೊಂದು ಪ್ರಮುಖ ಕಾರಣವಾದರೆ ಮತ್ತೊಂದು ಸಿದ್ದರಾಮಯ್ಯ ಅವರು ಯಾವ ಅಹಿಂದ ಮತಗಳು ತಮ್ಮ ಪರವಾಗಿರುತ್ತವೆ ಅಂದುಕೊಂಡಿದ್ದರೋ ಆ ಆಹಿಂದ ಮತಗಳೇ ಇಲ್ಲಿ ಉಲ್ಟಾ ಹೊಡೆಯುವ ಲಕ್ಷಣಗಳು ಗೋಚರವಾಗಿತ್ತು. ಇದರ ಜೊತೆಗೆ ಕೋಲಾರ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ನೆಲೆ ಕಳೆದುಕೊಂಡಿದ್ದ ಕಾಂಗ್ರೆಸ್ ಪರಿಸ್ಥಿತಿ, ಪಕ್ಷದಲ್ಲಿನ ಗೊಂದಲ ಇದೆಲ್ಲವೂ ಕೂಡಾ ಸಿದ್ದರಾಮಯ್ಯ ಅವರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಬಂದಷ್ಟೇ ಸಲೀಸಾಗಿ ವಾಪಸ್ಸಾಗುವಂತೆ ಮಾಡಿತ್ತು.
ಕೋಲಾರ ಅಭ್ಯರ್ಥಿಯಾಗಲು ಅಭ್ಯರ್ಥಿಗಳು ಹಿಂದೇಟು ಹಾಕುತ್ತಿರುವುದೇಕೆ?
ಕಾಂಗ್ರೆಸ್ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ಮುಳಬಾಗಿಲು ಕ್ಷೇತ್ರದ ಆಕಾಂಕ್ಷಿಯಾಗಿದ್ದವರು, ಅವರು ಜಾತಿ ಪ್ರಮಾಣ ಪತ್ರದ ವಿವಾದ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ಅವರು ಮುಳಬಾಗಿಲು ಮೀಸಲು ಕ್ಷೇತ್ರದಿಂದ ಹೊರತಾಗಿ ಅವರನ್ನು ಕೋಲಾರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಆದರೂ ಸದ್ಯ ಕೋಲಾರದಲ್ಲಿನ ಕಾಂಗ್ರೆಸ್ ಪರಿಸ್ಥಿತಿಯಲ್ಲಿ ಯಾರೇ ಬಂದರು ಕಾಂಗ್ರೆಸ್ನಲ್ಲಿರುವ ಗೊಂದಲವನ್ನು ನಿಭಾಯಿಸೋದು ಅಷ್ಟು ಸುಲಭದ ಮಾತಲ್ಲ.
ಇದರ ಜೊತೆಗೆ ಕೋಲಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು ಎಂದು ಮುಸ್ಲಿಂ ಮುಖಂಡರು ಕಾಂಗ್ರೆಸ್ಗೆ ಒತ್ತಾಯ ಮಾಡುತ್ತಿದ್ದಾರೆ, ಅಲ್ಲದೆ ಒಕ್ಕಲಿಗ ಅಭ್ಯರ್ಥಿಯನ್ನಾಗಿ ಮಾಡಿದರೆ ಬಿಜೆಪಿಗೆ ಅನುಕೂಲ ಅನ್ನೋ ಕಾರಣಕ್ಕೆ ಒಕ್ಕಲಿಗ ಅಭ್ಯರ್ಥಿಯನ್ನೂ ಕಣಕ್ಕಿಳಿಸಲು ಕಾಂಗ್ರೆಸ್ ಹಿಂದೆ ಮುಂದೆ ನೋಡುತ್ತಿದೆ.
ಈ ಎಲ್ಲಾ ಕಾರಣದಿಂದ ನಾಮಪತ್ರ ಸಲ್ಲಿಸಲು ಗುರುವಾರವೇ (ಏ. 20) ಕೊನೆಯ ದಿನವಾಗಿದ್ದರೂ ಕೂಡಾ ಕೋಲಾರ ಕ್ಷೇತ್ರದ ಅಭ್ಯರ್ಥಿ ಯಾರೂ ಅನ್ನೋದು ಇನ್ನೂ ಅಂತಿಮವಾಗಿಲ್ಲ, ಇಷ್ಟೆಲ್ಲಾ ಗೊಂದಲಗಳು ಕ್ಷೇತ್ರದಲ್ಲಿ ನಡೆಯುತ್ತಿರುವಾಗಲೂ ಸಿದ್ದರಾಮಯ್ಯ ಈಗಲೂ ಹೈಕಮಾಂಡ್ ಒಪ್ಪಿದರೆ ಕೋಲಾರದಿಂದ ಸ್ಪರ್ಧೆಗೆ ಸಿದ್ದ ಅನ್ನೋ ಮಾತನ್ನು ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯನಸ್ವಾಮಿ ಹೇಳುವ ಮೂಲಕ ಕೊನೆ ಕ್ಷಣದ ಕೂತೂಹಲವನ್ನೂ ಉಳಿಸಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಮುಖಂಡರುಗಳ ಈ ಹೇಳಿಕೆಯನ್ನು ನೋಡಿದ್ರೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಸಿದ್ದರಾಮಯ್ಯರಿಂದ ಶುರುವಾಗಿರುವ ಗೊಂದಲವನ್ನು ಸಿದ್ದರಾಮಯ್ಯ ಅವರೇ ಅಭ್ಯರ್ಥಿಯಾಗುವ ಮೂಲಕ ಈ ಎಲ್ಲಾ ಗೊಂದಲಕ್ಕೆ ಪರಿಹಾರ ಕೊಡ್ತಾರಾ ಅನ್ನೋ ಕೊನೆ ಕ್ಷಣದ ಕುತೂಹಲವನ್ನು ತಳ್ಳಿಹಾಕುವಂತಿಲ್ಲ.
ವರದಿ : ರಾಜೇಂದ್ರ ಸಿಂಹ, ಟಿವಿ9, ಕೋಲಾರ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Tue, 18 April 23