ಕೋಲಾರ: ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ, ಜನರನ್ನು ಸೇರಿಸಿ ಅವರನ್ನು ಖುಷಿ ಪಡಿಸಲು ಸಿಗುವ ಸಣ್ಣದೊಂದು ಅವಕಾಶವನ್ನು ಬಿಡದ ರಾಜಕೀಯ ಮುಖಂಡರು, ತಮ್ಮ ಹುಟ್ಟುಹಬ್ಬದಲ್ಲೂ ತಮ್ಮ ಬಲಪ್ರದರ್ಶನ ಮಾಡುವ ಮೂಲಕ ತಮ್ಮ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.
ಹುಟ್ಟು ಹಬ್ಬದ ಹೆಸರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಬಲ ಪ್ರದರ್ಶನ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ಸಿಗುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವ ರಾಜಕೀಯ ನಾಯಕರುಗಳು ಇಂದು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ತಮ್ಮ ಹುಟ್ಟುಹಬ್ಬದಲ್ಲೂ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಇವತ್ತು ಕೆಜಿಎಫ್ ಮಾಜಿ ಶಾಸಕ ವೈ ಸಂಪಂಗಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಸಚಿವ ಮುನಿರತ್ನ ಸೇರಿದಂತೆ ತಮ್ಮ ನೆಚ್ಚಿನ ನಾಯಕರುಗಳನ್ನು ತಮ್ಮ ಕ್ಷೇತ್ರಕ್ಕೆ ಕರೆಸಿಕೊಂಡು ಜನರೊಟ್ಟಿಗೆ ಸಂಭ್ರಮಿಸಿದ್ದಾರೆ. ಹುಟ್ಟುಹಬ್ಬ ಆಚರಣೆಗಾಗಿಯೇ ಕೆಜಿಎಫ್ ತಾಲ್ಲೂಕು ನಾಗಶೆಟ್ಟಿಹಳ್ಳಿ ಗ್ರಾಮದ ತಮ್ಮ ತೋಟದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಸಾವಿರಾರು ಜನರಿಗೆ ಮುದ್ದೆ ಹಾಗೂ ಮಟನ್, ಚಿಕನ್ ಊಟ ಹಾಕಿಸುವ ಜೊತೆಗೆ ಅದ್ದೂರಿ ಆರ್ಕೆಸ್ಟ್ರಾ ಆಯೋಜನೆ ಮಾಡಿ ಜನರನ್ನು ರಂಜಿಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ 739 ಹೊಸ ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 1,081ಕ್ಕೆ ಏರಿಕೆ
ಸ್ವಪಕ್ಷೀಯರಿಗೆ ಎಚ್ಚರಿಕೆ, ವಿರೋಧ ಪಕ್ಷದವರಿಗೆ ಬಲ ಪ್ರದರ್ಶನ
ಹುಟ್ಟುಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ್ದ ಬೃಹತ್ ವೇದಿಕೆಯಲ್ಲಿ ಸಚಿವ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರ್ ಪ್ರಕಾಶ್, ಮಂಜುನಾಥಗೌಡ ಸೇರಿದಂತೆ ಹಲವರನ್ನ ಕಾರ್ಯಕ್ರಮಕ್ಕೆ ಕರೆಸಿಕೊಂಡು ತಮ್ಮ ತಮ್ಮ ಶಕ್ತಿ ಪ್ರದರ್ಶನ ಮಾಡುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಗೆಲ್ಲುತ್ತೇನೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ. ಇನ್ನು ವೇದಿಕೆಯಲ್ಲಿ ತಮ್ಮ ವಿರುದ್ದ ಕತ್ತಿ ಮಸೆಯುತ್ತಿರುವ ಸ್ವಪಕ್ಷೀಯರಿಗೂ ಎಚ್ಚರಿಕೆ ಕೊಡುವ ಜೊತೆಗೆ ವಿರೋಧ ಪಕ್ಷದವರಿಗೆ ತಮ್ಮ ಬಲ ಪ್ರದರ್ಶನ ಮಾಡುವ ಮೂಲಕ ಮುಂದಿನ ಚುನಾವಣೆ ತಯಾರಿಯನ್ನು ತೋರಿಸಿಕೊಟ್ಟಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮಾಜಿ ಶಾಸಕ ಸಂಪಂಗಿ ಬೆನ್ನಿಗೆ ನಿಲ್ಲುವುದಾಗಿ ಭರವಸೆ ಕೊಟ್ಟ ಸಚಿವ ಮುನಿರತ್ನ
ಇನ್ನು ಮಾಜಿ ಶಾಸಕ ವೈ.ಸಂಪಂಗಿ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕೋಲಾರದಲ್ಲಿ ಈ ಬಾರಿ ಕೆಜಿಎಫ್ ಕ್ಷೇತ್ರದಲ್ಲಿ ವೈ.ಸಂಪಂಗಿ ಗೆದ್ದೇ ಗೆಲ್ಲುತ್ತಾರೆ ಅವರ ಬೆನ್ನಹಿಂದೆ ನಾವಿದ್ದೇವೆ ಅವರ ಗೆಲುವಿಗೆ ಬೇಕಾದ ಸಹಕಾರವನ್ನು ನಾವು ನೀಡಲಿದ್ದೇವೆ ಅವರು ಈಭಾಗದ ಅಭಿವೃದ್ದಿ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೆಜಿಎಫ್ ಕ್ಷೇತ್ರ ಸೇರಿ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದರು. ಇದನ್ನೂ ಓದಿ: ಮುಸ್ಲಿಮರ ಪ್ರಾರ್ಥನಾ ಸ್ಥಳದಲ್ಲಿ ಹಿಂದೂಗಳ ವಿರುದ್ಧ ಮಾತು ಕೇಳಿಬಂದಿದ್ದು ಗಂಗಾವತಿ ಬಳಿಯ ಒಂದು ಕ್ಯಾಂಪ್ನಲ್ಲಿ
ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅದ್ದೂರಿ ಬರ್ತಡೇ
ಅತ್ತ ಕೆಜಿಎಫ್ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಹುಟ್ಟುಹಬ್ಬ ಕೂಡಾ ಇತ್ತು ಅವರು ಕೂಡಾ ತಾವೇನು ಕಡಿಮೆ ಇಲ್ಲ ಎನ್ನುವಂತೆ ಸಾವಿರಾರು ಜನರೊಂದಿಗೆ ಬಂಗಾರಪೇಟೆಯ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆ ಯುದ್ದಕ್ಕೂ ಹೂವಿನ ಮಳೆ ಸುರಿಸುತ್ತಾ ಜಯಘೋಷಗಳನ್ನು ಕೂಗುತ್ತಾ ಸಾವಿರಾರು ಕಾರ್ಯಕರ್ತರೊಂದಿಗೆ ಹತ್ತಾರು ಕೇಕ್ಗಳನ್ನು ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡರು, ನಾರಾಯಣಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಒಡೆತನದ ಎಸ್.ಎನ್.ರೆಸಾರ್ಟ್ ಬಳಿ ಬೃಹತ್ ವೇದಿಕೆ ಹಾಕಿ ಬಂದಿದ್ದ ಸಾವಿರಾರು ಜನರೊಂದಿಗೆ ಬೆರೆತು ಹಬ್ಬ ಆಚರಣೆ ಮಾಡಿಕೊಂಡರು. ಕಾರ್ಯಕರ್ತರು ತಮ್ಮ ನೆಚ್ಚಿನ ಶಾಸಕನಿಗೆ ಬೃಹತ್ ಸೇಬಿನ ಹಾರ ಹಾಗೂ ದೊಡ್ಡ ಹೂವಿನ ಹಾರಗಳನ್ನು ಹಾಕಿ ಖುಷಿಪಟ್ಟರು. ಇದನ್ನೂ ಓದಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣ; ಮುತ್ತಿಗೆ ಹಾಕಿದ್ದ ಕೆಲ NSUI ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು
ಒಟ್ಟಾರೆ ಕಾಂಗ್ರೆಸ್ ಶಾಸಕ ಹಾಗೂ ಬಿಜೆಪಿ ಮಾಜಿ ಶಾಸಕರ ಹುಟ್ಟುಹಬ್ಬ ಅನ್ನೋದು ನೆಪ ಮಾತ್ರವಷ್ಟೇ, ಆದರೆ ಇಲ್ಲಿ ಚುನಾವಣೆಗೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲು ಇದೊಂದು ಅವಕಾಶ ಅನ್ನೋ ನಿಟ್ಟಿನಲ್ಲಿ ತಮ್ಮ ಬಲಾಬಲ ಪ್ರದರ್ಶನದ ಮೂಲಕ ತಮ್ಮ ವಿರೋದಿಗಳಿಗೆ ಸಂದೇಶ ರವಾನಿಸಿರೋದಂತು ಸುಳ್ಳಲ್ಲ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕನ್ನಡ, ಕೋಲಾರ
Published On - 8:57 pm, Wed, 1 June 22