Dalit: ಸಿದ್ದರಾಮಯ್ಯ ಅವರನ್ನು ಸೋಲಿಸುವಂತೆ ಕರಪತ್ರ ಅಭಿಯಾನ, ಕೋಲಾರದಲ್ಲಿ ಮತ್ತೆ ಚಲಾವಣೆಗೆ ಬಂದ ದಲಿತ ಸಿಎಂ‌ ಕೂಗು

| Updated By: ಸಾಧು ಶ್ರೀನಾಥ್​

Updated on: Jan 21, 2023 | 12:30 PM

Siddaramaiah: ಹುತ್ತದಲ್ಲಿ ನಾಗರಹಾವು ಸೇರಿಕೊಳ್ಳುವ ರೀತಿ ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಬಂದು ಸೇರಿಕೊಂಡು ಮೂಲ ಕಾಂಗ್ರೆಸ್ ನಾಯಕರನ್ನು ಮುಗಿಸುತ್ತಿದ್ದಾರೆ. ದಲಿತ ವಿರೋಧಿ ಸಿದ್ದರಾಮಯ್ಯರನ್ನು ಕೋಲಾರ ಕ್ಷೇತ್ರದಲ್ಲಿ ಸೋಲಿಸಿ, ಅವರಿಗೆ ದಲಿತರ ಶಕ್ತಿಯನ್ನು ತೋರಿಸಿ ಎಂಬ ಸಂದೇಶವಿರುವ ಕರಪತ್ರವನ್ನು ಕ್ಷೇತ್ರದಾದ್ಯಂತ ಹಂಚಲಾಗಿದೆ.

Dalit: ಸಿದ್ದರಾಮಯ್ಯ ಅವರನ್ನು ಸೋಲಿಸುವಂತೆ ಕರಪತ್ರ ಅಭಿಯಾನ, ಕೋಲಾರದಲ್ಲಿ ಮತ್ತೆ ಚಲಾವಣೆಗೆ ಬಂದ ದಲಿತ ಸಿಎಂ‌ ಕೂಗು
ಸಿದ್ದರಾಮಯ್ಯ
Image Credit source: thehindu
Follow us on

ಕೋಲಾರ ವಿಧಾನಸಭಾ ಕ್ಷೇತ್ರದಿಂದ (Karnataka Assembly Election 2023) ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಘೋಷಣೆ ಬೆನ್ನಲ್ಲೇ ಕೋಲಾರದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಸಿದ್ದರಾಮಯ್ಯ ಪರ ಹಾಗೂ ವಿರೋಧ ತಂತ್ರ-ರಣತಂತ್ರಗಳು ಜೋರಾಗಿವೆ. ಈ ನಡುವೆ ಮತ್ತೆ ಕೋಲಾರದಲ್ಲಿ ದಲಿತ ಸಿಎಂ (Dalit CM) ಕೂಗು ಶುರುವಾಗಿದೆ. ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಾದ್ಯಂತ ದಲಿತ ನಾಯಕರನ್ನು ಒಳಸಂಚು ಮಾಡಿ ಸೋಲಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ, ದಲಿತ ಮುಖ್ಯಮಂತ್ರಿ ದಾರಿಯನ್ನು ಸುಗಮಗೊಳಿಸಿ ಎನ್ನುವ ಅಭಿಯಾನ (Pamphlet) ಆರಂಭವಾಗಿದೆ.

ಸಿದ್ದುಗೆ ಕುರುಬ ಸಮುದಾಯದ ನಂತರ ಈಗ ದಲಿತ ಸಮುದಾಯದ ವಿರೋಧಿ ಕೂಗು!

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾಗುತ್ತಿದಂತೆ ಕೋಲಾರದಲ್ಲಿ ಸಮುದಾಯಗಳಿಂದ ಪರ ವಿರೋಧ, ಸಮುದಾಯದ ನಿಲುವುಗಳನ್ನು ಹೇಳುವ ಮೂಲಕ ಸಿದ್ದರಾಮಯ್ಯರಿಗೆ ಚುನಾವಣೆಗೆ ಮೊದಲೇ ಕ್ಷೇತ್ರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನು ತೋರಿಸಲಾಗುತ್ತಿದೆ. ಸದ್ಯ ಕೆಲವು ದಿನಗಳಿಂದ ಸಿದ್ದರಾಮಯ್ಯ ಅವರ ಕುರುಬ ಸಮುದಾಯದಲ್ಲೇ, ಕುರುಬ ಸಂಘದಲ್ಲೇ ಒಡಕು ಮೂಡಿ ಕುರುಬ ಸಮುದಾಯದ ಮುಖಂಡರು ಫೋನ್​ನಲ್ಲಿ ಬೈದಾಡಿಕೊಂಡಿರುವ ಸುದ್ದಿ ಹಳಸುವ ಮೊದಲೇ ಈಗ ದಲಿತರು ಸಿದ್ದರಾಮಯ್ಯ ಅವರ ವಿರುದ್ದ ತಮ್ಮ ನಿಲುವು ಹೊರ ಹಾಕುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಕೋಲಾರ ಕ್ಷೇತ್ರದಾದ್ಯಂತ ಕರಪತ್ರ ಅಭಿಯಾನ ಆರಂಭ ಮಾಡಿದ್ದಾರೆ. ದಲಿತ ನಾಯಕರನ್ನು ಒಳಸಂಚು ಮಾಡಿ ಸೋಲಿಸಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಎಂಬ ಕೂಗು ದಲಿತ ಸಮುದಾಯದಿಂದ ಕೇಳಿ ಬರುತ್ತಿದೆ.

ಕೋಲಾರದಲ್ಲಿ ಮತ್ತೆ ಶುರುವಾಗಿದೆ ದಲಿತ ಮುಖ್ಯಮಂತ್ರಿ ಕೂಗು..!

ಸಿದ್ದರಾಮಯ್ಯ ಅಲ್ಲಲ್ಲಿ ತಾನು ಸಿಎಂ ಅಭ್ಯರ್ಥಿ, ತಾನು ಮತ್ತೊಮ್ಮೆ ಸಿಎಂ ಆಗಬೇಕು ಎನ್ನುವ ಇಂಗಿತ ವ್ಯಕ್ತಪಡಿಸುವುದು ಅವರ ಬೆಂಬಲಿಗರಿಂದ ಸಿದ್ದು ಮುಂದಿನ ಸಿಎಂ ಎಂಬ ಘೋಷಣೆ ಇವೆಲ್ಲದರ ನಡುವೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಈಗ ಕೋಲಾರದಲ್ಲಿ ದಲಿತ ಸಮುದಾಯದ ಕೆಲವರಿಂದ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದಲಿತರನ್ನು ಮತ ಬ್ಯಾಂಕ್​ ಆಗಿ ಮಾಡಿಕೊಂಡಿದೆ. ಆದರೆ ದಲಿತರಿಗೆ ಯಾವುದೇ ಸ್ಥಾನ ಮಾನ ನೀಡಿಲ್ಲ, ಈ ಹಿಂದೆ ಇದೇ ಸಿದ್ದರಾಮಯ್ಯ ಅವರು 2013 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್​ ಅವರನ್ನು ಸೋಲಿಸಿ ದಲಿತರಿಗೆ ಸಿಗಬೇಕಿದ್ದ ಸಿಎಂ ಸ್ಥಾನವನ್ನು ತಾನು ಕಬಳಿಸಿದ್ದಾರೆ.

ಅಷ್ಟೇ ಅಲ್ಲದೆ ಉಮೇಶ್​ ಜಾಧವ್​ ಅವರನ್ನು ಪಕ್ಷ ಬಿಟ್ಟು ಬಿಜೆಪಿಗೆ ಕಳಿಸಿ ಖರ್ಗೆ ವಿರುದ್ದ ಸ್ಪರ್ಧೆ ಮಾಡುವಂತೆ ಕಳಿಸಿ ಖರ್ಗೆ ಅವರ ಸೋಲಿಗೂ ಸಿದ್ದರಾಮಯ್ಯ ಹಾಗೂ ಆಗ ಸ್ಪೀಕರ್​ ಆಗಿದ್ದ ರಮೇಶ್​ ಕುಮಾರ್​ ಅವರೇ ಕಾರಣಕರ್ತರಾಗಿದ್ದಾರೆ. ಅಲ್ಲದೆ ಶ್ರೀನಿವಾಸ್​ ಪ್ರಸಾದ್​, ಕೆ.ಹೆಚ್​. ಮುನಿಯಪ್ಪ, ಹೆಚ್​.ಸಿ. ಮಹದೇವಪ್ಪ, ಧೃವನಾರಾಯಣ್ ಸೇರಿದಂತೆ ಹಲವು ಮುಖಂಡರುಗಳಿಗೆ ಮುಖ್ಯಮಂತ್ರಿಯಾಗುವ ಅರ್ಹತೆಗಳಿದ್ದರೂ ಕೂಡಾ ಎಲ್ಲರನ್ನು ಸೋಲಿಸುವಲ್ಲಿ ಸಿದ್ದರಾಮಯ್ಯ ಪಾತ್ರ ಇತ್ತು. ಹಾಗಾಗಿ ಅವರನ್ನು ಸೋಲಿಸಿ ಎಂಬ ಒಕ್ಕಣೆಯ ಕರಪತ್ರ ಹಂಚಲಾಗಿದೆ.

ಸಿದ್ದರಾಮಯ್ಯ ಸೋಲಿಸಿ, ದಲಿತ ಸಿಎಂ ದಾರಿ ಸುಗಮಗೊಳಿಸಿ..!

ಇನ್ನು 2006 ರಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್​ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ ನಂತರದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಪಕ್ಷದಲ್ಲಿದ್ದ ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕರನ್ನು ಒಬೊಬ್ಬರನ್ನಾಗಿ ಮುಗಿಸುತ್ತಾ, ಹಲವು ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ ನಾಯಕರನ್ನು ರಾಜಕೀಯವಾಗಿ ದುರ್ಬಲಗೊಳಿಸಿ, ಗೆದ್ದಲು ಹುಳ ಕಟ್ಟಿದ ಹುತ್ತದಲ್ಲಿ ನಾಗರಹಾವು ಬಂದು ಸೇರಿಕೊಳ್ಳುವ ರೀತಿಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್​ನಲ್ಲಿ ಬಂದು ಸೇರಿಕೊಂಡು ಮೂಲ ಕಾಂಗ್ರೆಸ್ ನಾಯಕರನ್ನು ಮುಗಿಸುತ್ತಿದ್ದಾರೆ. ಹಾಗಾಗಿ ದಲಿತ ವಿರೋಧಿ ಸಿದ್ದರಾಮಯ್ಯ ಅವರನ್ನು ಕೋಲಾರ ಕ್ಷೇತ್ರದಲ್ಲಿ ಸೋಲಿಸಿ ಅವರಿಗೆ ದಲಿತರ ಶಕ್ತಿಯನ್ನು ತೋರಿಸಿ ಎಂಬ ಸಂದೇಶವಿರುವ ಕರಪತ್ರವನ್ನು ಕ್ಷೇತ್ರದಾದ್ಯಂತ ಹಂಚುವ ಮೂಲಕ ಸಿದ್ದು ವಿರುದ್ದ ದಲಿತರು ಕರಪತ್ರ ಅಭಿಯಾನ ಶುರುಮಾಡಿದ್ದಾರೆ.

ಒಟ್ಟಾರೆ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಸಿದ್ದು ವಿರೋಧಿ ಅಲೆ ಜೋರಾಗಿದ್ದು ಇದೆಲ್ಲವೂ ಸಿದ್ದರಾಮಯ್ಯ ಅವರನ್ನು ಬೆದರಿಸುವ ತಂತ್ರವಾ ಅಥವಾ ಸಿದ್ದರಾಮಯ್ಯ ವಿರುದ್ದ ಹೆಣೆಯುತ್ತಿರುವ ರಣತಂತ್ರವಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.​

ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ 

Published On - 10:39 am, Sat, 21 January 23