ಕೋಲಾರ: ತಾಲ್ಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಅಣ್ಣ ತಮ್ಮಂದಿರ ನಡುವೆ ನಡೆದ ಅದೊಂದು ಜಗಳದಿಂದ (Family dispute) ವೃದ್ದ ದಂಪತಿಗಳ ಬದುಕು ಬೀದಿಗೆ ಬಿದ್ದಿದೆ. ಕಳೆದ ಐದು ದಿನಗಳಿಂದ ಬೀದಿಯಲ್ಲೇ ಇರುವ ವೃದ್ಧ ದಂಪತಿ ರಸ್ತೆಯಲ್ಲೇ ಊಟ ರಸ್ತೆಯಲ್ಲೇ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಅವರ ಸ್ಥಿತಿ ನೋಡಿದರೆ ಮಾನವೀಯ ಸಮಾಜ ಇಷ್ಟೊಂದು ಕಟುಕವಾಯಿತಾ ಎಂಬ ಪ್ರಶ್ನೆ ಮಾನವೀಯ ಮನಸ್ಸುಗಳಲ್ಲಿ ಮೂಡದೇ ಇರುವುದಿಲ್ಲ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತ ನೋಡುವುದಾದರೆ, ಹೀಗೆ ಮನೆಯಿಂದ ಹೊರ ಹಾಕಲ್ಪಟ್ಟು ಬೀದಿಯಲ್ಲಿ ಬದುಕು ಸವೆಸುತ್ತಿರುವ ದಂಪತಿ ಹೆಸರು ಪಾಪಣ್ಣ ಹಾಗೂ ಲಕ್ಷ್ಮಮ್ಮ. ಇವರಿಬ್ಬರಿಗೆ ಮಕ್ಕಳಿಲ್ಲ, ಸುಮಾರು ಹದಿನೈದು ವರ್ಷಗಳಿಂದ ತನ್ನ ದೊಡ್ಡಪ್ಪನ ಮಗ ವೆಂಕಟೇಶ್ ಎಂಬುವರ ಮನೆಯಲ್ಲಿಯೇ ವಾಸವಿದ್ದರು.
ಹೊಲದ ಕೆಲಸ, ಮನೆಯ ಕೆಲಸ ಎಲ್ಲವನ್ನೂ ಮಾಡಿಕೊಡುತ್ತಾ ಅವರ ಕಷ್ಟಸುಖಗಳಿಗಾಗುತ್ತಿದ್ದರು ಅನ್ನೋ ಕಾರಣಕ್ಕೆ ವೆಂಕಟೇಶ್ ತನ್ನ ಮನೆಯನ್ನು ಇರುವುದಕ್ಕೆ ಬಿಟ್ಟು ಕೊಟ್ಟಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ವೆಂಕಟೇಶ್ ಹಾಗೂ ಪಾಪಣ್ಣ ಅವರ ನಡುವೆ ಹೊಲದಲ್ಲಿ ಬದು ಹಾಕುವ ವಿಚಾರದಲ್ಲಿ ಜಗಳವಾಗುತ್ತದೆ. ಈ ವೇಳೆ ಪಾಪಣ್ಣ ವೆಂಕಟೇಶ್ಗೆ ಒಂದು ಏಟು ಹೊಡೆದರಂತೆ ಅದೇ ಕಾರಣಕ್ಕೆ ವೆಂಕಟೇಶ್, ತನ್ನ ಅಣ್ಣ ಅತ್ತಿಗೆ ಅನ್ನೋದನ್ನು ನೋಡದೆ ತನ್ನ ಕಷ್ಟ ಸುಖಕ್ಕಾಗಿರುವವರು, ನನಗೆ ಇಷ್ಟು ವರ್ಷ ಸಹಾಯ ಮಾಡಿದವರು ಅನ್ನೋದನ್ನ ನೋಡದೆ ಏಕಾಏಕಿ ಮನೆಯಲ್ಲಿದ್ದ ಸಾಮಾನು ಸರಂಜಾಮಾನುಗಳನ್ನು ಹೊರಕ್ಕೆ ಎಸೆದು ದಂಪತಿಯನ್ನೂ ಮನೆಯಿಂದ ಹೊರ ಹಾಕಿದ್ದಾನೆ.
ಇದನ್ನೂ ಓದಿ: ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಗಿಫ್ಟ್; ಪ್ರತಿ ಲೀಟರ್ ಹಾಲಿನ ದರ 2.10 ರೂ. ಹೆಚ್ಚಳ
ಮನೆಯಿಂದ ಹೊರ ಹಾಕಿ ಅವರ ಪಾತ್ರೆ ಸಾಮಾನುಗಳನ್ನು ಹೊರ ಹಾಕಿರುವ ಹಿನ್ನಲೆಯಲ್ಲಿ ಈ ವೃದ್ಧ ದಂಪತಿ ಕಳೆದ ಐದು ದಿನಗಳಿಂದಲೂ ಹೀಗೆ ಮನೆಯ ಹೊರಗೆ ಬೀದಿಯಲ್ಲೇ ಅಡುಗೆ ಮಾಡಿಕೊಂಡು ಅಲ್ಲೇ ಮನೆಯ ಪಾತ್ರೆ ಸಾಮಾನುಗಳನ್ನು ಹಾಕಿಕೊಂಡು ರಸ್ತೆ ಬದಿಯಲ್ಲೇ ಜೀವನ ಮಾಡುತಿದ್ದಾರೆ. ಅಷ್ಟೇ ಅಲ್ಲದೆ ಲಕ್ಷ್ಮಮ್ಮ ಅವರು ಕೂಡಾ ಇಷ್ಟು ವಯಸ್ಸಾದ ಕಾಲದಲ್ಲಿ ಮನೆಯಿಂದ ಹೊರಗೆ ಮಲಗುವ ಸ್ಥಿತಿ ಬಂದಿದೆ. ಅಲ್ಲದೆ ಹಾವು ಇನ್ನಿತರ ಜಂತುಗಳು ಓಡಾಡುವ ಸ್ಥಳದಲ್ಲಿ ಅವರು ಭಯದಲ್ಲೇ ಬದುಕು ಸವೆಸುತ್ತಿದ್ದಾರೆ. ಇನ್ನು ದೌರ್ಜನ್ಯ ಮಾಡಿದವರ ಮೇಲೆ ಧ್ವನಿ ಎತ್ತುವ ಧ್ವನಿಯೂ ಇಲ್ಲದ ಸ್ಥಿತಿ ಅವರದ್ದು.
ವೆಂಕಟೇಶ್ ತುಂಬಾ ಅನುಕೂಲಸ್ಥ ಸರ್ಕಾರಿ ಉದ್ಯೋಗದಲ್ಲಿದ್ದವನು, ಅದರಲ್ಲೂ ಜಿಲ್ಲಾಧಿಕಾರಿಗಳ ವಾಹನ ಚಾಲಕನಾಗಿ ಇದ್ದುಕೊಂಡು ಈಗ ನಿವೃತ್ತಿಯಾಗಿರುವ ವೆಂಕಟೇಶ್ ಆರ್ಥಿಕವಾಗಿಯೂ ಸಭಲನಾಗಿದ್ದಾನೆ. ಕೋಲಾರ ನಗರದಲ್ಲಿ ಮನೆ ಇದೆ, ಜನ್ನಘಟ್ಟ ಗ್ರಾಮದಲ್ಲಿ ಜಮೀನು, ಮನೆ ಇದೆ, ಜೊತೆಗೆ ಈ ಹಿಂದೆ ವೆಂಕಟೇಶ್ ಪತ್ನಿ ತಾಯಮ್ಮ ಅವರು ಜನ್ನಘಟ್ಟ ಗ್ರಾಮ ಪಂಚಾಯ್ತಿಯ ಅಧ್ಯಕ್ಷರೂ ಆಗಿದ್ದರು. ಇಷ್ಟೆಲ್ಲಾ ಇದ್ದರು ಕೂಡಾ ಯಾವುದೇ ವೈಯಕ್ತಿಕ ದ್ವೇಷ ಹಾಗೂ ಕೋಪಕ್ಕೆ ಮನಸ್ಸು ಕೊಟ್ಟು ಹೀಗೆ ವಯಸ್ಸಾದ ವೃದ್ಧ ದಂಪತಿಗಳನ್ನು ಏಕಾಏಕಿ ಮನೆಯಿಂದ ಹೊರಹಾಕಿದ್ದಾನೆ. ನಮ್ಮ ದೇಶದ ಕಾನೂನಿನಲ್ಲಿ ಎಂಥಹ ತಪ್ಪು ಮಾಡಿದವರಿಗೂ ಕೊನೆ ಪಕ್ಷ ನೈಸರ್ಗಿಕ ಕಾನೂನು ಅಂತಲಾದರೂ ಒಂದು ಅವಕಾಶ ಕೊಡುತ್ತಾರೆ. ಆದರೆ ಇಲ್ಲಿ ವೆಂಕಟೇಶ್ ಅವರಿಗೆ ಅದಕ್ಕೂ ಅವಕಾಶ ನೀಡದೆ ಅಮಾನವೀಯತೆ ಪ್ರದರ್ಶಿಸಿದ್ದಾನೆ.
ವೆಂಕಟೇಶ್ ತನ್ನ ಅಣ್ಣ ಅನ್ನೋದನ್ನು ನೋಡದೆ ಹೀಗೆ ಅಮಾನವೀಯತೆ ತೋರಿದ್ದಾನೆ, ಕುಳಿತುಕೊಂಡರೆ ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ, ನಿಂತರೆ ಕುಳಿತುಕೊಳ್ಳಲು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿರುವ ಈ ದಂಪತಿಯ ಸ್ಥಿತಿ ಹೇಳಲಾಗದು. ಕೊನೆ ಪಕ್ಷ ಮಕ್ಕಳಾದರು ಇದ್ದಿದ್ದರೆ ಇವರಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ, ಆದರೆ ದುರಾದೃಷ್ಟ ಅವರಿಗೆ ಮಕ್ಕಳೂ ಇಲ್ಲ, ತನ್ನ ಇಡೀ ಜೀವನವನ್ನು ವೆಂಕಟೇಶ್ ಅವರ ಕುಟುಂಬಕ್ಕೆ ಸವೆಸಿರುವ ಈ ದಂಪತಿಯನ್ನು ಚೆನ್ನಾಗಿ ದುಡಿಸಿಕೊಂಡು ವಯಸ್ಸಾದ ಕಾಲದಲ್ಲಿ ಹೀಗೆ ಮಾಡುವುದು ಸರಿಯೇ ಎಂದು ವೆಂಕಟೇಶ್ ಅವರನ್ನು ಕೇಳಿದರೆ, ಅವರಿಗೆ ಬೇರೆ ಮನೆ ಇದೆ, ಅಲ್ಲಿಗೆ ಹೋಗಲಿ ಎಂದು ಕುರಿ ಶೆಡ್ ಅನ್ನು ತೋರಿಸಿ, ಬಿದ್ದು ಹೋಗಿರುವ ಮನೆಯನ್ನು ತೋರಿಸುತ್ತಾರೆ. ಅಷ್ಟೇ ಅಲ್ಲದೆ ನಾನು ಕಳೆದ ನಾಲ್ಕೈದು ತಿಂಗಳಿಂದ ಅವರಿಗೆ ಹೇಳಿದ್ದೆ. ಆದರೂ ಅವರು ಖಾಲಿ ಮಾಡಿಲ್ಲ ಎಂದು ಅವರ ಮೇಲೆಯೇ ಬೊಟ್ಟು ಮಾಡಿ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಒಟ್ಟಾರೆ ವೆಂಕಟೇಶ್ ಅವರ ಕ್ರಮಕ್ಕೆ ಗ್ರಾಮದಲ್ಲೂ ಕೂಡಾ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅಲ್ಲದೆ ಗ್ರಾಮದ ಹಲವು ಜನರು ಈಗಾಗಲೇ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಅವರಿಗೆ ನ್ಯಾಯ ಸಿಕ್ಕಿಲ್ಲ, ಸದ್ಯ ಈಗಲಾದರೂ ಈ ವೃದ್ಧ ದಂಪತಿಯ ಸಂಕಷ್ಟಕ್ಕೆ ನೆರವು ಸಿಗಲಿ. ಬೀದಿಗೆ ಬಿದ್ದ ಬದುಕಿಗೆ ನೆಲೆ ಸಿಗಲಿ, ಸಮಾಜದಲ್ಲಿ ಇನ್ನು ಮಾನವೀಯತೆ ಅನ್ನೋದು ಇದೇ ಅನ್ನೋದನ್ನ ಸಾಭೀತು ಪಡಿಸಲಿ ಅನ್ನೋದು ನಮ್ಮ ಆಶಯ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Tue, 14 March 23