ಕೋಲಾರ, ಸೆ.28: ಈದ್ ಮಿಲಾದ್ (Eid Milad) ಪ್ರಯುಕ್ತ ದೇವರ ಆಶೀರ್ವಚನ ಪದಗಳನ್ನು ಬರೆಯಲಾಗಿರುವ ಬೃಹತ್ ಕತ್ತಿಯನ್ನು ಕೋಲಾರದ (Kolar) ಕ್ಲಾಕ್ ಟವರ್ನಲ್ಲಿ ಅಳವಡಿಸಲಾಗಿತ್ತು. ದ್ವಾರ ಬಾಗಿಲಲ್ಲಿ ನಿರ್ಮಿಸಿದ್ದ ಬೃಹದಾಕಾರದ ಈ ಕತ್ತಿ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಸಂಸದ ಎಸ್. ಮುನಿಸ್ವಾಮಿ (S.Muniswamy) ಅವರು ತೀವ್ರವಾಗಿ ವಿರೋಧಿಸಿದ್ದರು.
ಕತ್ತಿ ತೆರವುಗೊಳಿಸದಿದ್ದರೆ ತ್ರೀಶೂಲ ಹಾಕುವುದಾಗಿ ಕೋಲಾರ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಜಿಲ್ಲಾಧಿಕಾರಿ ಹಾಗೂ ಎಸ್ಪಿ, ಅರ್ಧ ಗಂಟೆಗೂ ಹೆಚ್ಚು ಕಾಲ ಕ್ಲಾಕ್ ಟವರ್ ವೃತ್ತ ಬಂದ್ ಮಾಡಿಸಿ ತೆರವುಗೊಳಿಸಿದರು. ಪೊಲೀಸರ ಸೂಚನೆ ಮೇರೆಗೆ ಮುಸ್ಲಿಂ ಯುವಕರು ಕ್ರೇನ್ ಮೂಲಕ ಕತ್ತಿ ತೆರವು ಮಾಡಿದರು.
ಇದನ್ನೂ ಓದಿ: ವಿಜಯಪುರ: ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಯುವಕರಿಂದ ಶಾಂತಿ ಸೌಹಾರ್ದತೆ ಕದಡಲು ಯತ್ನ
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೋಲಾರ ಸಂಸದ ಎಸ್. ಮುನಿಸ್ವಾಮಿ, ಪುಂಡರ ಒತ್ತಾಯಕ್ಕೆ ಮಣಿದು ನಗರಸಭೆ ದ್ವಾರ ಬಾಗಿಲು ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದರು. ಜಿಲ್ಲಾ ಎಸ್ಪಿ ನಾರಾಯಣ ಅವರನ್ನು ಕೇಳಿದಾಗ ನಾವು ಅನುಮತಿ ಕೊಟ್ಟಿಲ್ಲ ಅಂತ ಹೇಳಿದ್ದರು. ಹೀಗಾಗಿ ಬೆಳಗ್ಗೆ ಮಾಧ್ಯಮದ ಮೂಲಕ ನಾವು ತ್ರಿಶೂಲ ಹಾಕುತ್ತೇವೆ ಅಂತ ಹೇಳಿದ್ದೆ. ಅದಕ್ಕೆ ಎಚ್ಚೆತ್ತುಕೊಂಡ ಡಿಸಿ ಅಕ್ರಮ್ ಪಾಷಾ ಮತ್ತು ಎಸ್ಪಿ ನಾರಾಯಣ ಸೇರಿ ತಲವಾರು ದ್ವಾರ ಬಾಗಿಲು ತೆರವು ಮಾಡಿದ್ದಾರೆ ಎಂದರು.
ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಶಾಂತಿಯುತವಾದ ಕ್ಲಾಕ್ ಟವರ್ನಲ್ಲಿ ದ್ವಾರ ಬಾಗಿಲು ನಿರ್ಮಾಣ ಮಾಡಿದ್ದು ಎಷ್ಟು ಸರಿ? ಇವರಿಗೆ ದ್ವಾರ ಬಾಗಿಲು ಹಾಕಲು ಹೇಳಿದ್ಯಾರು?ನಾವು ಗಣೇಶ ಹಬ್ಬ ಮಾಡಬೇಕು ಅಂದರೆ ಅನುಮತಿ ಕೊಡಬೇಕು ಅಂತಾರೆ. ಇದಕ್ಕೆ ಯಾವ ರೀತಿಯಲ್ಲಿ ಅವಕಾಶ ಕೊಟ್ಟರು? ಕಾಂಗ್ರೆಸ್ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ