ಕೋಲಾರ: ಬೆಳ್ಳಂಬೆಳಿಗ್ಗೆ ಕಾರು ಪಲ್ಟಿಯಾಗಿ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಕ್ರಾಸ್ ಬಳಿ ನಡೆದಿದೆ. ಶಫಿ (55), ಶಮಾ (50) ಮೃತ ದಂಪತಿಗಳು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಮಗಳನ್ನು ಡ್ರಾಪ್ ಮಾಡಿ ಆಂಧ್ರಪ್ರದೇಶದ ಮದನಪಲ್ಲಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ರಸ್ತೆಯ ಬಲ ಬದಿಯ 20ರಿಂದ 25 ಅಡಿಗಳ ಹಳ್ಳಕ್ಕೆ ಕಾರು ಬಿದ್ದಿದೆ. ಕಾರಿನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕಿತ್ಸೆ ಫಲಿಸದೆ ಕಾಡಾನೆ ಸಾವು
ಧಾರವಾಡ: ಕಲಘಟಗಿ ತಾಲೂಕಿನ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಚಿಕಿತ್ಸೆ ಫಲಿಸದೆ ಕಾಡಾನೆ ಸಾವನ್ನಪ್ಪಿದೆ. ಮುಂಡಗೋಡ ತಾಲೂಕಿನ ಅತ್ತಿವೇರಿ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಕಾಡಾನೆಗೆ ಸೊಂಡಿಲ ಬಳಿ ಗಾಯವಾಗಿತ್ತು. ಬಳಿಕ ಅದನ್ನು ಮಸಳಿಕಟ್ಟಿ ಅರಣ್ಯ ಪ್ರದೇಶಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಸೊಂಡಿಲ ಬಳಿ ಗಾಯವಾಗಿದ್ದ ಕಾರಣ ಆನೆಗೆ ಆಹಾರ ಸೇವಿಸಲಾಗುತ್ತಿರಲಿಲ್ಲ. ಆದರೆ ನಿನ್ನೆ(ಮಾ.16) ರಾತ್ರಿ ಚಿಕಿತ್ಸೆ ಫಲಿಸದೆ ಕಾಡಾನೆ ಸಾವನ್ನಪ್ಪಿದೆ.
ಪ್ರವಾಸಿ ಮಂದಿರದಲ್ಲಿದ್ದ ಶ್ರೀಗಂಧದ ಮರ ಕಳ್ಳತನ
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿದ್ದ ಶ್ರೀಗಂಧದ ಮರವನ್ನ ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ಮರ ಎಂದು ಅಂದಾಜು ಮಾಡಲಾಗಿದೆ. ಬಸವನಬಾಗೇಬಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೊಸಳೆ ಕಾಟಕ್ಕೆ ಬೇಸತ್ತು ಕೊನೆಗೆ ತಾವೇ ಮೊಸಳೆ ಹಿಡಿದ ಗ್ರಾಮಸ್ಥರು
ರಾಯಚೂರು: ಮೊಸಳೆ ಕಾಟಕ್ಕೆ ಬೇಸತ್ತ ರಾಯಚೂರಿನ ಜನ, ಕೊನೆಗೆ ತಾವೇ ಮೊಸಳೆ ಹಿಡಿದಿರುವ ಘಟನೆ
ನೆಲಹಾಳ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಹೊಲಕ್ಕೆ ಹೊರಟಿದ್ದ ಕೆಲ ಗ್ರಾಮಸ್ಥರು, ಈ ವೇಳೆ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಬಳಿಕ ಜೇಮ್ಸ್ ಎನ್ನುವ ಗ್ರಾಮಸ್ಥನ ನೇತೃತ್ವದಲ್ಲಿ ನಾಲ್ಕು ಜನರು ಸೇರಿ ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಮೊಸಳೆ ಹಿಡಿದಿದ್ದಾರೆ. ಹಲವು ಬಾರಿ ಸಾಕು ಪ್ರಾಣಿಗಳ ಮೇಲೆ ಅಟ್ಯಾಕ್ ಮಾಡಿತ್ತು. ಇನ್ನು ಜೀವಂತವಾಗಿ ಹಿಡಿದ ಮೊಸಳೆಯನ್ನ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ನೆಲಹಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Fri, 17 March 23