Kolar News: ಕಲ್ಲು ಕ್ವಾರಿ ಸ್ಫೋಟ, ಓರ್ವ ವ್ಯಕ್ತಿ ಸಾವು; ಕ್ವಾರಿ ಮಾಲೀಕ ಸೇರಿ 7 ಜನರ ಬಂಧನ

|

Updated on: May 26, 2023 | 9:28 AM

ಅದು ಹಲವು ವಿವಾದಗಳ ನಡುವೆ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಗೆಯಲ್ಲಿ ಕಳೆದ(ಮೇ.24) ರಾತ್ರಿ ಬ್ಲಾಸ್ಟಿಂಗ್ ವೇಳೆ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ. ಈ ಹಿನ್ನಲೆ 11ಜನರ ವಿರುದ್ದ ಪ್ರಕರಣ ದಾಖಲಾಗಿದೆ.

Kolar News: ಕಲ್ಲು ಕ್ವಾರಿ ಸ್ಫೋಟ, ಓರ್ವ ವ್ಯಕ್ತಿ ಸಾವು; ಕ್ವಾರಿ ಮಾಲೀಕ ಸೇರಿ 7 ಜನರ ಬಂಧನ
ಕೋಲಾರ ಕಲ್ಲು ಕ್ವಾರಿ ಸ್ಪೋಟ
Follow us on

ಕೋಲಾರ: ತಾಲೂಕಿನ ಕೆ.ಬಿ ಹೊಸಹಳ್ಳಿ ಗ್ರಾಮದ ಬಳಿ ಇರುವ ಕಲ್ಲುಕ್ವಾರಿಯಲ್ಲಿ ನಿನ್ನೆ(ಮೇ.24) ನಡೆದಿದ್ದ ಬ್ಲಾಸ್ಟಿಂಗ್​ನಲ್ಲಿ ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ವಾರಿ ಮಾಲೀಕ ಸೇರಿ 7 ಜನರನ್ನ ಬಂಧನ ಮಾಡಲಾಗಿದ್ದು, ಜೊತೆಗೆ ಕ್ವಾರಿ ಮಾಲೀಕ ಸೇರಿ 11 ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಹೌದು ನಿನ್ನೆ ಬ್ಲಾಸ್ಟ್​ವೇಳೆ ಯಾದಗಿರಿ(Yadagiri) ಮೂಲದ‌ ಕಾರ್ಮಿಕ ಸೋಮು ಜಾದವ್ ಸಾವನ್ನಪ್ಪಿ, ಗೋಪಿ ಎಂಬುವರಿಗೆ ಗಾಯವಾಗಿತ್ತು. ಈ ಹಿನ್ನಲೆ ಕ್ವಾರಿ ಮಾಲೀಕ ಅಬ್ದುಲ್ ರೆಹಮಾನ್, ಮ್ಯಾನೇಜರ್ ದೇವರಾಜ್ ಸೇರಿ ಒಟ್ಟು 7 ಜನರನ್ನ ಬಂಧಿಸಲಾಗಿದ್ದು, ಉಳಿದವರಿಗಾಗಿ ವೇಮಗಲ್ ಪೊಲೀಸರಿಂದ ಶೋಧ ನಡೆಸಿದ್ದಾರೆ.

ಇನ್ನು ಮುಜೀಬ್​​, ಬೈಯಣ್ಣ, ನಂದೀಶ್​ಗೌಡ, ಎಂಬ ಮೂರು ಜನರಿಗೆ ಕೆ.ಬಿ.ಹೊಸಹಳ್ಳಿ ಗ್ರಾಮದ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಲ್ಲುಗಣಿ ಗುತ್ತಿಗೆ ನೀಡಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರದೇಶ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಬಿ.ಹೊಸಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಕಾರಣ ಮಾರಕವಾಗಿದೆ. ಇಲ್ಲಿ ಗಣಿಗಾರಿಕೆ ನಡೆಯದಂತೆ ಹಲವು ವಿರೋಧ ವ್ಯಕ್ತವಾಗುತ್ತಲೇ ಇದೆ. ಇದರ ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ ಅನ್ನೋ ಆರೋಪ ಗ್ರಾಮಸ್ಥರದ್ದು. ಈ ನಡುವೆ ಕಳೆದ ರಾತ್ರಿ ಇಲ್ಲಿನ ಮುಜೀಬ್​ ಎಂಬುವರಿಗೆ ಸೇರಿದ ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಬ್ಲಾಸ್ಟಿಂಗ್ ವೇಳೆಯಲ್ಲಿ ಕಲ್ಲು ಸಿಡಿದು ಯಾದರಿಗಿ ಮೂಲದ ಸೋಮು ಯಾದವ್ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಗೋಪಿ ಎಂಬಾತನಿಗೆ ಗಂಭೀರ ಗಾಯಗಳಾಗಿತ್ತು.

ಇದನ್ನೂ ಓದಿ:Vijayapura News: ಬೈಕ್​ಗೆ ಡಿಕ್ಕಿ ಹೊಡೆದ ಟಿಪ್ಪರ್: ಸ್ಥಳದಲ್ಲೇ ಅತ್ತೆ, ಅಳಿಯ ಸಾವು, ಮಕ್ಕಳಿಬ್ಬರಿಗೆ ಗಾಯ

ಸುಮಾರು 250 ಮೀಟರ್​ಗೂ ದೂರದಲ್ಲಿದ್ದ ಕಾರ್ಮಿಕರ ಮೇಲೆ ಬಿದ್ದ ಕಲ್ಲು

ಕಲ್ಲುಕ್ವಾರಿ ಬ್ಲಾಸ್ಟ್​ ಮಾಡಿದ ಸುಮಾರು 250 ಮೀಟರ್​ಗೂ ದೂರದಲ್ಲಿದ್ದ ಕಾರ್ಮಿಕರ ಮೇಲೆ ಕಲ್ಲು ಬಂದು ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಯಾದಗಿರಿ ಮೂಲದ ಸೋಮು ಜಾದವ್​ ಮೃತಪಟ್ಟಿದ್ದಾನೆ. ಇನ್ನು ಸ್ಥಳಕ್ಕೆ ಬಂದ ಕ್ವಾರಿ ಮಾಲೀಕರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿ ಶವವನ್ನು ಅಲ್ಲಿಂದ ತೆಗೆದು ಗಾಯಾಳುವನ್ನು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಮೃತಪಟ್ಟ ಜಾಗದ ರಕ್ತ ಮಿಶ್ರಿತ ಮಣ್ಣನ್ನು ತೆಗೆದು ಎಸೆಯಲಾಗಿದೆ. ಮುಂಜಾನೆ ವೇಳೆಗೆ ಸ್ಥಳಕ್ಕೆ ಕುಟುಂಬಸ್ಥರು ಹಾಗೂ ವೇಮಗಲ್​ ಪೊಲೀಸರು ಬಂದ ನಂತರ ಪ್ರಕರಣ ಬಯಲಾಗಿದೆ. ವಿಷಯ ತಿಳಿದು ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇದರಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಇನ್ನು ಈ ಕುರಿತು ವೇಮಗಲ್​ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ನಾರಾಯಣ್​ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಮೇಲ್ನೋಟಕ್ಕೆ ಅಲ್ಲಿ ಬ್ಲಾಸ್ಟಿಂಗ್​ ವೇಳೆ ನಿಯಮ ಮೀರಿ ಬ್ಲಾಸ್ಟಿಂಗ್ ಮಾಡಿರುವುದು ಕಂಡು ಬಂದಿದೆ. ಇದಕ್ಕೆ ಸಂಬಂಧ ಪಟ್ಟಂತೆ ಕ್ವಾರಿ ಗಣಿಗುತ್ತಿಗೆ ಪಡೆದಿರುವ ಮಾಲೀಕರು ಹಾಗೂ ಬ್ಲಾಸ್ಟಿಂಗ್​ ಎಂಜಿನಿಯರ್ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಕೆ.ಬಿ.ಹೊಸಹಳ್ಳಿ ಗ್ರಾಮದ ಗ್ರಾಮಸ್ಥರು ಕ್ವಾರಿ ನಡೆಸುವವರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಐಸಿಸ್‌ಗೆ ಸೇರಿದ್ದ ಎನ್ನಲಾದ 48ರ ವರ್ಷದ ಕೇರಳದ ವ್ಯಕ್ತಿ ಪಾಕಿಸ್ತಾನ ಜೈಲಿನಲ್ಲಿ ಸಾವು

ಅಲ್ಲದೆ, ಕಳೆದ 20 ವರ್ಷಗಳಿಂದ ಇಲ್ಲಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದ್ದು, ಗ್ರಾಮಕ್ಕೆ ಈ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ, ಇಲ್ಲಿ ನಡೆಯುವ ಅಕ್ರಮ ಬ್ಲಾಸ್ಟಿಂಗ್​ನಿಂದ ಗ್ರಾಮದ ಮನೆಗಳು ಬಿರುಕು ಬಿಟ್ಟಿವೆ, ನಿಯಮ ಮೀರಿ ಟನ್​ ಗಟ್ಟಲೆ ಜೆಲ್ಲಿ ತುಂಬಿಸಿಕೊಂಡು ಓಡಾಡುವ ಟಿಪ್ಪರ್​ಗಳಿಂದ ರಸ್ತೆ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗಾಗಿ ಕೂಡಲೇ ಅಧಿಕಾರಿಗಳು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.​

ಒಟ್ಟಾರೆ ಗ್ರಾಮಸ್ಥರ ವಿರೋಧದ ನಡುವೆಯೂ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದು, ಸದ್ಯ ಕಲ್ಲು ಗಣಿಗಾರಿಕೆಯಿಂದ ನಿಯಮ ಮೀರಿ ನಡೆಯುವ ಬ್ಲಾಸ್ಟಿಂಗ್​ನಿಂದಾಗಿ ಒಂದು ಜೀವ ಹೋಗಿದ್ದು, ಗಣಿಗಾರಿಕೆ ಗ್ರಾಮಕ್ಕೆ ಕಂಟಕ ತಂದಿಟ್ಟ ಕೂಡಲೇ ಗ್ರಾಮದ ಬಳಿ ನಡೆಯುವ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Fri, 26 May 23