ಕೋಲಾರ: ಬೆಂಗಳೂರು, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಕೋಲಾರ ಸಾಮಾಜಿಕ ಅರಣ್ಯ DFO ವೆಂಕಟೇಶ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಕೋಲಾರ ನಗರದ ಕ್ಲಾಕ್ ಟವರ್ ಬಳಿ ಇರುವ ಕ್ವಾಟ್ರಸ್ ಹಾಗೂ ಬೆಂಗಳೂರು ವಿಜಯನಗರದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
ಒಟ್ಟು ಎಂಟು ಸ್ಥಳಗಳಲ್ಲಿ ದಾಳಿ ನಡೆದಿದ್ದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಒಟ್ಟು 4 ಡಿವೈಎಸ್ಪಿಗಳ ನೇತೃತ್ವದಲ್ಲಿ 5 ಇನ್ಸ್ ಪೆಕ್ಟರ್ಗಳು ಸೇರಿದಂತೆ 25ಕ್ಕೂ ಅಧಿಕ ಸಿಬ್ಬಂದಿಗಳಿಂದ ದಾಳಿ ನಡೆದಿದೆ.
ಇನ್ನು ಕೋಲಾರ ಡಿಸಿಎಫ್ ವೆಂಕಟೇಶ್ ಫಾರ್ಮ್ಹೌಸ್ ಮೇಲೂ ರೇಡ್ ಆಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚಿಕ್ಕಮುದುಡೆ ಗ್ರಾಮದಲ್ಲಿರುವ ಫಾರ್ಮ್ಹೌಸ್, ಮಾಗಡಿ ತಾಲೂಕಿನ ಗುಡ್ಡಳ್ಳಿ ಬಳಿ ಇರುವ ಚೇತನ್ ಫಾರ್ಮ್ಹೌಸ್ ಮೇಲೆ ರಾಮನಗರ ಲೋಕಯುಕ್ತ ಎಸ್ ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ದಾಳಿ ನಡೆದಿದ್ದು ಪರಿಶೀಲನೆ ಮಾಡಲಾಗುತ್ತಿದೆ.
ಇನ್ನು ಕೋಲಾರ DCF ವೆಂಕಟೇಶ್ ಮನೆ, ಕಚೇರಿ ಮೇಲೆ ದಾಳಿ ನಡೆದಿದ್ದು ದಾಳಿ ವೇಳೆ ಕೃಷಿ ಭೂಮಿ ಹೊಂದಿರುವ ದಾಖಲೆ, ಚಿನ್ನಾಭರಣ ಪತ್ತೆಯಾಗಿದೆ. ರಿಯಲ್ ಎಸ್ಟೇಟ್ನಲ್ಲೂ ಪಾಲುದಾರಿಕೆ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವೆಂಕಟೇಶ್ ಸಹೋದರಿ, ಸ್ನೇಹಿತನ ಹೆಸರಲ್ಲಿ ಪ್ರಾಪರ್ಟಿ ಹಾಗೂ ಹಣದ ವಹಿವಾಟು ನಡೆಸಿರುವ ಬಗ್ಗೆ ಲೊಕಾಯುಕ್ತಗೆ ಮಾಹಿತಿ ಸಿಕ್ಕಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಚಿನ್ನಾಭರಣ ತೂಕ ಮಾಡಲಿದ್ದಾರೆ.
ಇದನ್ನೂ ಓದಿ: ರೋಗಿಗೆ ಅವಧಿ ಮುಗಿದ ಔಷಧಿ ನೀಡಿದ ತುಮಕೂರಿನ ಖಾಸಗಿ ಆಸ್ಪತ್ರೆ: ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರ ನೀಡಿದ ವೈದ್ಯ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾ.ಪಂ ಪಿಡಿಒ ಶ್ರೀನಿವಾಸ್ ಮತ್ತು ಕಂಪ್ಯೂಟರ್ ಆಪರೇಟರ್ ಚನ್ನಬಸಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಾಲಾ ಕಾಂಪೌಂಡ್ ಕಾಮಗಾರಿಗೆ 4 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಭೀಮಪ್ಪ ಎಂಬುವವರ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರೂ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ DySP ಎನ್.ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:12 am, Fri, 10 February 23