ಕೋಲಾರ: ಜಿಲ್ಲೆಯ ಮಾಲೂರು ತಾಲೂಕು ದೊಡ್ಡಕಡತೂರು ಗ್ರಾಮದ ರಘು ಮತ್ತು ದಿವ್ಯಾ ಎಂಬ ದಂಪತಿ 8 ವರ್ಷದ ಹಿಂದೆ ಹೆತ್ತವರ ವಿರೋಧದ ನಡುವೆಯೂ ಮದುವೆಯಾಗಿದ್ರು. ನೂರಾರು ಕನಸು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ರು. ಪತ್ನಿಗಾಗಿ ಪತಿ ರಘು ಎಲ್ಲವನ್ನೂ ತ್ಯಾಗ ಮಾಡಿದ್ದ. ಪತ್ನಿಯನ್ನ ಅಂದುಕೊಂಡಂತೆ ಓದಿಸಿದ್ದ ಕೂಡ. ಆದ್ರೆ ಆಸ್ಪತ್ರೆ ಸಿಬ್ಬಂದಿ ಮಾಡಿದ್ದ ಎಡವಟ್ಟಿನಿಂದ ರಘು ಪತ್ನಿ ದಿವ್ಯಾ ಸುಮಾರು 4 ವರ್ಷದಿಂದಲೂ ಕೋಮಾದಲ್ಲಿ ನರಳುವಂತಾಗಿದೆ.
2013 ಮೇ 24 ರಂದು ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ದಿವ್ಯಾ ಮತ್ತು ರಘು ಬೆಂಗಳೂರಿನ ವರ್ತೂರಿನಲ್ಲಿ ಸಂಸಾರ ನಡೆಸುತ್ತಿದ್ದರು. ನಂತರ ದಿವ್ಯಾಳ ಆಸೆಯಂತೆ ಚೆನ್ನಾಗಿ ಓದಿಸಬೇಕೆಂದು ರಘು ಕಾಲೇಜಿಗೆ ಕಳಿಸಿದ್ರು. ಬಿಎಸ್ಸಿ ಮುಗಿಸಲು ಬೆಂಬಲವಾಗಿ ನಿಂತಿದ್ರು. ಈ ವೇಳೆ ಗರ್ಭಿಣಿಯಾದ ದಿವ್ಯಾಳ ಸಂಸಾರದಲ್ಲಿ ಮತ್ತಷ್ಟು ಸಂತಸ ಹೆಚ್ಚಾಗಿತ್ತು, 2017 ರ ಮಾರ್ಚ್ 31 ರಂದು ದಿವ್ಯಾ ಹೆರಿಗೆಗೆ ಅಂತಾ ಮಾಲೂರಿನ ಸೇಂಟ್ ಮೇರಿಸ್ ಆಸ್ಪತ್ರೆಗೆ ದಾಖಲಾಗಿದ್ರಂತೆ. ಆದರೆ ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟು ದೊಡ್ಡ ಗಂಡಾಂತರ ಸೃಷ್ಟಿಸಿದೆ. ಅರವಳಿಕೆಯನ್ನ ನೀಡುವಾಗ ಮಾಡಿದ ಎಡವಟ್ಟಿನಿಂದ ಅಂದು ಕೋಮಾ ಸ್ಥಿತಿ ತಲುಪಿದ ದಿವ್ಯಾಗೆ ಇಂದಿಗೂ ಪ್ರಜ್ಞೆ ಬಂದಿಲ್ಲ.
4 ವರ್ಷಗಳ ಹಿಂದೆ ಕೋಮಾ ಸ್ಥಿತಿಗೆ ತಲುಪಿದ ದಿವ್ಯಾಳಿಗಾಗಿ ರಘು ಹಾಗೂ ದಿವ್ಯಾಳ ಪೊಷಕರು ಮಾಡದ ಕೆಲಸವಿಲ್ಲ, ಬೇಡದ ದೇವರಿಲ್ಲ, ಸುತ್ತದ ಆಸ್ಪತ್ರೆಗಳಿಲ್ಲ ಆದರೂ ಪ್ರಯೋಜನವಾಗಿಲ್ಲ. ಹೀಗಿದ್ದರೂ ಪತ್ನಿ ದಿವ್ಯಾಳನ್ನು ಮಗುವಂತೆ ನೋಡಿಕೊಳ್ಳುತ್ತಿರುವ ರಘು ಕಾರ್ಯಕ್ಕೆ ಅಕ್ಕಪಕ್ಕದವರು ಕಂಬನಿ ಮಿಡಿಯುತ್ತಾರೆ.
ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ ದಂಪತಿ ದಿನವೂ ನರಳುವಂತಾಗಿದೆ. ಒಂದು ಕಡೆ ಪ್ರಜ್ಞೆ ಇಲ್ಲದೆ ನಿತ್ಯವೂ ಒದ್ದಾಡುತ್ತಿರುವ ಪತ್ನಿ. ಮತ್ತೊಂದ್ಕಡೆ ಪತ್ನಿಗೆ ಎದುರಾದ ಸ್ಥಿತಿ ಕಂಡು ಕೊರಗುತ್ತಿರುವ ಪತಿ. ಆದಷ್ಟು ಬೇಗ ದಿವ್ಯಾ ಗುಣಮುಖರಾಗಲಿ, ಮತ್ತೆ ಹಿಂದಿನಂತೆ ಓಡಾಡಲಿ ಎಂಬುದೇ ಎಲ್ಲರ ಆಶಯ.
ಇದನ್ನೂ ಓದಿ: ಎಲ್ಲರಿಗೂ ಮಾದರಿ ಈ ದಂಪತಿ; ಮದುವೆಯ ದಿನವೇ ಇವರು ಮಾಡಿದ್ದೇನು ಗೊತ್ತಾ?
Published On - 2:47 pm, Sun, 14 February 21