ಕೋಲಾರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಅಂತರಗಂಗೆಯ ಬೆಟ್ಟದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಕೋತಿಗಳದ್ದು ಹೇಳತೀರದ ಪರಿಸ್ಥಿತಿಯಾಗಿದೆ. ಬಿಸಿಲ ಬೇಗೆ ಬರಗಾಲದಿಂದ ಇಲ್ಲಿನ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಹಸಿವಿನಿಂದ ಸಾಯುವ ಸ್ಥಿತಿ ತಲುಪಿವೆ. ಅಲ್ಲಿ ವರ್ಷದ 365 ದಿನಗಳು ಗಂಗೆ ನಿರಂತರವಾಗಿ ಹರಿಯುತ್ತಾಳೆ, ಆದ್ರೂ ಅಲ್ಲಿನವರ ಹಸಿವು ಮಾತ್ರ ತೀರಿಲ್ಲ. ದಾಹವೂ ನೀಗುತ್ತಿಲ್ಲ, ಪರಿಣಾಮ ಹಸಿವು ನೀಗಿಸಿಕೊಳ್ಳಲು ಇಲ್ಲಿರುವ ಕೋತಿಗಳು ಬಂದವರ ಬಳಿ ಕಾಡಿ ಬೇಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂತರಗಂಗೆ ಬೆಟ್ಟದಲ್ಲಿ ಕೋತಿಗಳು ಅನ್ನ ನೀರಿಲ್ಲದೆ ಪರದಾಟ
ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಕೋಲಾರದ ಅಂತರಗಂಗೆಯಲ್ಲಿ ಹನಿ ನೀರನ್ನಾದರು ಕುಡಿದು ದಣಿವಾರಿಸಿಕೊಳ್ಳಲು ಕೋತಿಗಳು ಪರಿದಾಡುತ್ತಿರುವಂತಹ ಸ್ಥಿತಿ ಕಂಡು ಬಂದಿದೆ. ಬರದ ಜಿಲ್ಲೆ ಕೋಲಾರದಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರು ನೆರಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಬಿರು ಬಿಸಿಲು ನೆತ್ತಿ ಸುಡುತ್ತಿರುವ ಪರಿಣಾಮ ಆರಂಭದಲ್ಲೇ ಮಿತಿ ಮೀರಿದ ತಾಪಮಾನದಿಂದ ಮರಗಿಡಗಳು ಒಣಗಿಹೋಗಿದ್ದು ಜನರು ಹಾಗೂ ಪ್ರಾಣಿ ಪಕ್ಷಿಗಳಿಗೆ ಕೂರಲು ನೆರಳಿಲ್ಲ ಕುಡಿಯಲು ನೀರಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅಂಗರಗಂಗೆಯ ಬೆಟ್ಟದಲ್ಲಿರುವ ಪ್ರಾಣಿಗಳ ಪರಿಸ್ಥಿತಿಯಂತು ಊಹಿಸಿಕೊಳ್ಳೋದು ಕಷ್ಟ.
ಬರುವ ಪ್ರವಾಸಿಗರು ಕಡಿಮೆ! ಅರಣ್ಯ ಇಲಾಖೆಯೂ ಗಮನ ಹರಿಸಿಲ್ಲ..!
ಕೋಲಾರದ ಪ್ರಸಿದ್ಧ ಯಾತ್ರಾಸ್ಥಳವಾದ ಅಂತರಗಂಗೆಯ ಬೆಟ್ಟದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಕೋತಿಗಳದ್ದೂ ಹೇಳತೀರದ ಪರಿಸ್ಥಿತಿ. ಬಿಸಿಲ ಬೇಗೆ ಬರಗಾಲ ಇಲ್ಲಿನ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಹಸಿವೆಯಿಂದ ಸಾಯುವ ಸ್ಥಿತಿ ತಲುಪಿವೆ. ಕಾರಣ ಅರಣ್ಯ ಇಲಾಖೆ ಬೆಟ್ಟದಲ್ಲಿ ಬೆಳೆಸಿರುವ ಮರಗಳು ಯಾವುದೇ ಪ್ರಾಣಿ ಪಕ್ಷಿಗಳಿಗೆ ಪ್ರಯೋಜನಕ್ಕೆ ಬಾರದ ಮರಗಳು ಯಾವುದೇ ಹಣ್ಣು ಹಂಪಲುಗಳನ್ನು ಬಿಡೋದಿಲ್ಲ ಹಾಗಾಗಿ ಇಲ್ಲಿರುವ ಸಾವಿರಾರು ಕೋತಿಗಳಿಗೆ ಇಲ್ಲಿಗೆ ಬರುವ ಪ್ರವಾಸಿಗರು ಹಾಕುವ ಕಡಲೆ ಪುರಿ, ಬ್ರೆಡ್, ಬನ್, ಬಾಳೆಹಣ್ಣನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ದುರಂತ ಅಂದ್ರೆ ಸರಿಯಾದ ನಿರ್ವಹಣೆ ಇಲ್ಲದೆ ಈ ಯಾತ್ರಾ ಸ್ಥಳಕ್ಕೆ ಇತ್ತೀಚೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ.
ಮುಜರಾಯಿ ಇಲಾಖೆ ದೇವಾಲಯದ ಸರಿಯಾದ ನಿರ್ವಹಣೆ ಇಲ್ಲದೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ತೀರಾ ವಿರಳ ಇಂಥ ಪರಿಸ್ಥಿತಿಯಲ್ಲಿ, ಇಲ್ಲಿರುವ ಕೋತಿಗಳು ಬೆಟ್ಟದಲ್ಲಿ ಅನಾಥವಾಗಿ ಉಪವಾಸದಿಂದ ಸಾಯುವ ಪರಿಸ್ಥಿತಿ ಇದೆ. ಊಟ ಇಲ್ಲದೆ ಸಿಕ್ಕ ಎಲೆ ಕಾಳು ಕಡ್ಡಿಯನ್ನು ಹುಡುಕುತ್ತಿದ್ರೆ ಮತ್ತೆ ಕೆಲವು ಮಂಗಗಳು ಹತ್ತಿರದ ಗ್ರಾಮಗಳಿಗೆ ದಾಳಿ ಇಡುತ್ತವೆ. ಮತ್ತೆ ಕೆಲವು ಕೋತಿಗಳಂತೋ ಇಲ್ಲಿಗೆ ಬರುವ ಪ್ರವಾಸಿಗರ ಕೈಕಾಲು ಹಿಡಿದು ಕೊಟ್ಟ ತಿಂಡಿ ತಿನಿಸು ತಿಂದು ಬದುಕುತ್ತಿವೆ. ಇನ್ನು ಅರಣ್ಯ ಇಲಾಖೆ ಕಾಡುಪ್ರಾಣಿಗಳಿಗಾಗಿ ಮಾಡಿದ ಕೋಟ್ಯಾಂತರ ರೂಪಾಯಿ ಯೋಜನೆಗಳು ಮಾತ್ರ ಕೇವಲ ಪುಸ್ತಕದಲ್ಲಿ ಮಾತ್ರ ಇದೆ, ಈವರೆಗೂ ಬೆಟ್ಟದಲ್ಲಿ ಕನಿಷ್ಠ ಕುಡಿಯುವ ನೀರನ ವ್ಯವಸ್ಥೆಯನ್ನೂ ಮಾಡಿಲ್ಲ. ಬದಲಾಗಿ ಇಲ್ಲಿನ ಕೆಲವು ಪ್ರಾಣಿಪ್ರಿಯರು ಈ ಕೋತಿಗಳ ಪರಿಸ್ಥಿತಿಯನ್ನು ನೋಡಲಾಗದೆ ಆಗಾಗ ಮುದ್ದೆ, ತರಕಾರಿ, ಹಣ್ಣುಗಳನ್ನು ತಂದು ಹಾಕುತ್ತಾರೆ. ಅದನ್ನು ಹೊರತು ಪಡಿಸಿದ್ರೆ ಕೋತಿಗಳಿಗೆ ಹೊಟ್ಟೆಗೆ ತಣ್ಣೀರು ಬಟ್ಟೆನೆ ಗತಿ ಎನ್ನುವಂತಾಗಿದ್ದು ಯಾರಾದ್ರು ಕೋತಿಗಳಿಗೆ ಆಹಾರದ ವ್ಯವಸ್ಥೆ ಮಾಡಬೇಕು ಅಂತಾರೆ ಇಲ್ಲಿನ ಸ್ಥಳೀಯ ನಿವಾಸಿ ಮಂಜುಳ.
ಒಟ್ಟಾರೆ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಿ ಹನುಮಂತನಿಗೆ ಪೂಜೆ ಮಾಡುವ ನಮ್ಮ ಜನರು, ಹನುಮಂತನ ಪ್ರತಿರೂಪ ಎಂದು ಹೇಳಲಾಗುವ ಈ ಕೋತಿಗಳಿಗೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ತಂದಿಟ್ಟಿದ್ದಾರೆ. ಇನ್ನಾದ್ರು ಪ್ರಾಣಿ ಪ್ರಿಯರು, ಅರಣ್ಯ ಇಲಾಖೆಯವರು ಈ ಕೋತಿಗಳ ಹಸಿವು ನೀಗಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ.
ವರದಿ: : ರಾಜೇಂದ್ರ ಸಿಂಹ, ಕೋಲಾರ
ಇದನ್ನೂ ಓದಿ: ‘ದಳಪತಿ’ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ? ಬಾಲಿವುಡ್ ನಟಿಯರನ್ನು ಹಿಂದಿಕ್ಕಿದ ಕೊಡಗಿನ ಹುಡುಗಿ
ಕಾರ್ಮಿಕರು ಸಿಗದೆ ಕಂಗಾಲಾಗಿದ್ದಾಗ ಎಸ್ಎಸ್ಎಲ್ಸಿ ಓದಿದ ರೈತ ಮಾಡಿದ್ದೇನು ಗೊತ್ತಾ?