
ಕೋಲಾರ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೋಮು ಸೌಹಾರ್ದತೆ ಕದಡುವಂತ ಹತ್ತಾರು ಘಟನೆಗಳು ನಡೆಯುತ್ತಿವೆ. ಮಸೀದಿಯೊಳಗೆ ದೇವಸ್ಥಾನ ಇದೆ, ದೇವಸ್ಥಾನದೊಳಗೆ ಮಸೀದಿ ಎಂದು ಹತ್ತು ಹಲವು ಗೊಂದಲಗಳು ಸಮಾಜದಲ್ಲಿ ಕಾಡುತ್ತಿರುವಾಗ ಇಲ್ಲೊಂದು ಮುಸ್ಲಿಂ ಸಂಘಟನೆ, ಹಿಂದೂ ದೇವಾಲಯ ನಿರ್ಮಾಣ ಮಾಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ವ್ಯಕ್ತಿಯಿಂದ ನಿರ್ಮಾಣವಾದ ಗಣೇಶ ದೇವಾಲಯ
ಕೋಲಾರದಲ್ಲೊಂದು ಕೋಮು ಸೌಹಾರ್ದತೆಯ ಉಳಿಸುವ ಬೆಳೆಸುವ ಘಟನೆಯೊಂದು ನಡೆದಿದೆ. ಕೋಲಾರ ತಾಲೂಕು ಸೂಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಟಿಪ್ಪು ಸೆಕ್ಯುಲರ್ ಸೇನೆ ರಾಜ್ಯಾಧ್ಯಕ್ಷ ಆಸೀಫ್ ಎಂಬಾತ ಸರ್ಕಾರಿ ಶಾಲೆಯಲ್ಲಿ ಗಣೇಶ ದೇವಾಲಯವೊಂದನ್ನು ನಿರ್ಮಾಣ ಮಾಡಿ ಶಾಲೆಗೆ ಕೊಡುಗೆಯಾಗಿ ಕೊಡುವ ಮೂಲಕ ಹಿಂದೂ ಮುಸ್ಲಿಂ ಎಲ್ಲಾ ಧರ್ಮಗಳು ಒಂದೇ ಎನ್ನುವ ಭಾವನೆಗೆ ಪುಷ್ಠಿ ನೀಡುವಂತ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್ಡೇಟ್ ನೀಡಿದ ಶಿವರಾಜ್ಕುಮಾರ್
ಟಿಪ್ಪು ಆಶಯದಂತೆ ನಡೆಯುತ್ತಿದ್ದೇವೆ ಎಂದ ಅಧ್ಯಕ್ಷ
ಈಗಾಗಲೇ ಸೂಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸುಮಾರು 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಪುಟ್ಟದೊಂದು ಗಣೇಶ ದೇವಾಲಯ ನಿರ್ಮಾಣ ಮಾಡಿಸುತ್ತಿದ್ದಾರೆ ಈ ಬಗ್ಗೆ ಮಾತನಾಡಿದ ರಾಜ್ಯಾಧ್ಯಕ್ಷ ಆಸೀಫ್ ಟಿಪ್ಪು ಕೂಡಾ ಹಲವು ಹಿಂದೂ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ ಅವರ ಆಶಯದಂತೆ ನಾವು ಹಿಂದೂ ದೇವಾಲಯ ನಿರ್ಮಾಣ ಮಾಡುತ್ತಿದ್ದೇವೆ ಎಂದಿದ್ದಾರೆ.
ಸೂಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ
ಕಾರ್ಯಕ್ರಮದ ಅಥಿತಿಯಾಗಿ ಹೋದಾಗ ಗಣೇಶ ದೇವಾಲಯ ನಿರ್ಮಾಣ ಮಾಡಿಕೊಡುವ ಭರವಸೆ
ಇನ್ನು ಸೂಲೂರು ಗ್ರಾಮದಲ್ಲಿ ಆಸೀಫ್ ಅವರಿಗೆ ಗಣೇಶ ದೇವಾಲಯ ನಿರ್ಮಾಣ ಮಾಡಬೇಕೆಂಬ ಇರಾದೆ ಬಂದಿದ್ದಾದರು ಹೇಗೆ ಅಂದರೆ, ಶಾಲಾ ಅಭಿವೃದ್ದಿ ಮಂಡಳಿಯವರು ಆಯೋಜನೆ ಮಾಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆಸೀಫ್ ಅವರ ಮುಂದೆ ಸೂಲೂರು ಸರ್ಕಾರಿ ಶಾಲೆಯ ಸಿಬ್ಬಂದಿ ಶಾಲೆಯ ಆವರಣದಲ್ಲಿ ಒಂದು ಗಣೇಶ ದೇವಾಲಯ ನಿರ್ಮಾಣ ಮಾಡಬೇಕೆನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಸೀಫ್ ದೇವಾಲಯ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ತಾನೇ ವಹಿಸುವುದಾಗಿ ಹೇಳಿದ್ದಾರೆ. ಅದರಂತೆ ಕಳೆದ ಮೂರು ವರ್ಷಗಳ ಹಿಂದೆಯೇ ದೇವಾಲಯ ನಿರ್ಮಾಣ ಕೆಲಸ ಶುರುಮಾಡಿದ್ದರು, ಆದರೆ ಕೊರೊನಾ ಹಿನ್ನೆಲೆ ಶಾಲೆಗಳು ತೆರೆಯದ ಕಾರಣ ಈಗ ಮತ್ತೆ ದೇವಸ್ಥಾನ ಕಾಮಗಾರಿ ಮಾಡುತ್ತಿದ್ದು ಇನ್ನೇನು ಕಾಮಗಾರಿ ಅಂತಿಮ ಹಂತ ತಲುಪಿದೆ. ಈಗಾಗಲೇ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪನ ವಿಧಿವಿಧಾನದಂತೆ ಜಲಾಧಿವಾಸದಲ್ಲಿರಿಸಿ ನಿತ್ಯ ಪೂಜೆ ಮಾಡಲಾಗುತ್ತಿದೆ, ಶೀಘ್ರವಾಗಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಕೆಲಸ ನಡೆಯಲಿದೆ ಅನ್ನೋದು ಇಲ್ಲಿನ ಶಿಕ್ಷಕ ರಾಜಣ್ಣ ಅವರ ಮಾತು.
ಕೋಲಾರದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ನಡುವೆ ಏನೇ ವಿವಾದಗಳು ಸಾಕಷ್ಟು ಚರ್ಚೆಗೆ ಅವಕಾಶ ಮಾಡಿ ಕೊಟ್ಟಿರಬಹುದು. ಆದರೆ ನಮ್ಮ ಭಾರತ ದೇಶದ ಮೂಲದಲ್ಲೇ ಇದೊಂದು ಜಾತ್ಯಾತೀತತೆ ಹಾಗೂ ಬಾವೈಕ್ಯತೆಯ ರಾಷ್ಟ್ರ ಅನ್ನೋದನ್ನ ಮಾತ್ರ ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದು ನಮ್ಮ ದೇಶದ ಮೂಲ ನೆಲೆಯಲ್ಲೇ ಅಡಗಿದೆ ಅದನ್ನು ಎಂದಿಗೂ ಹೋಗಲಾಡಿಸಲು ಸಾಧ್ಯವಿಲ್ಲ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕನ್ನಡ, ಕೋಲಾರ