ಅದು ಚಿನ್ನದ ನಾಡಿನಲ್ಲಿ ಏಳು ದಶಕಗಳಿಂದಲೂ ಮೈಸೂರು ಪಾಕ್ ಪ್ರಿಯರ ಅಚ್ಚು ಮೆಚ್ಚಿನ ಕೇಂದ್ರ, ಒಮ್ಮೆ ಅಲ್ಲಿ ಮೈಸೂರ್ ಪಾಕ್ ತಿಂದವರು ಮತ್ತೆ ಮತ್ತೆ ಅಲ್ಲಿ ಅದಕ್ಕಾಗಿ ಹುಡುಕಿಕೊಂಡು ಬಂದೇ ಬರ್ತಾರೆ, ಆ ಬಿಸಿ ಬಿಸಿ ಮೈಸೂರ್ ಪಾಕ್ ಸ್ವಾದ ನಿಮಗೆ ಎಷ್ಟು ವರ್ಷ ಕಳೆದರೂ ನಿಮ್ಮ ನಾಲಿಗೆಯ ಮೇಲೆ ಸ್ವಾದದ ಘಮಲು ಇದ್ದೇ ಇರುತ್ತದೆ. ಅಂಥಾದೊಂದು ಅದ್ಬುತ ಮೈಸೂರ್ ಪಾಕ್ ಸಿಗೋದೆಲ್ಲಿ ಅಂತೀರ? ಇಲ್ಲಿದೆ ಡೀಟೇಲ್ಸ್. ಅಲ್ಲಿ ಎಷ್ಟೋ ಜನರಿಗೆ ಯಾವ ಕಚೇರಿ ಎಲ್ಲಿದೆ, ಯಾವ ಸರ್ಕಲ್ ಎಲ್ಲಿ ಬರುತ್ತೆ ಅನ್ನೋದು ಗೊತ್ತಿರುತ್ತದೋ ಇಲ್ಲವೋ, ಆದರೆ ಅದೊಂದು ಸ್ವಾದಿಷ್ಟವಾದ ಮೈಸೂರ್ ಪಾಕ್ ಸಿಗೋದೆಲ್ಲಿ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತೇ ಗೊತ್ತಿರುತ್ತದೆ. ಅದು 70 ವರ್ಷಗಳಷ್ಟು ಹಳೆಯ ಸುಬ್ಬಣ್ಣ ಸ್ವೀಟ್ ಸ್ಟಾಲ್. ಅಂದರೆ ಇಂದಿನ ವೆಂಕಟೇಶ್ವರ ಸ್ವೀಟ್ ಸ್ಟಾಲ್. ಇದಿರೋದು ಕೋಲಾರ ನಗರದ ಎಂ.ಜಿ ರಸ್ತೆಯಲ್ಲಿ (Kolar Mysore Pak)
ಹೌದು ಕಳೆದ 70 ವರ್ಷಗಳ ಹಿಂದೆ ವೆಂಕಟಸುಬ್ಬಅಯ್ಯರ್ ಎಂಬುವರಿಂದ ಆರಂಭವಾದ ವೆಂಕಟೇಶ್ವರಸ್ವೀಟ್ ಸ್ಟಾಲ್ ನಲ್ಲಿ ಕಳೆದ 70 ವರ್ಷಗಳಿಂದಲೂ ಇಲ್ಲಿ ತಯಾರು ಮಾಡುವ ಮೈಸೂರ್ ಪಾಕ್ ತುಂಬಾ ಪ್ರಸಿದ್ದಿ ಪಡೆದಿದೆ. ಇಲ್ಲಿ ಸಿಗುವ ಮೈಸೂರ್ ಪಾಕ್ ನಲ್ಲಿ ಶುದ್ದವಾದ ತುಪ್ಪ ಜಿನುಗುತ್ತಿರುತ್ತದೆ. ಮೈಸೂರ್ ಪಾಕ್ ತುಪ್ಪದಲ್ಲಿ ತೇಲುತ್ತಿರುತ್ತದೆ. ಜೊತೆಗೆ ಬಿಸಿ ಬಿಸಿಯಾದ ಈ ಮೈಸೂರ್ ಪಾಕ್ ಬಾಯಲ್ಲಿ ಇಟ್ಟರೆ ಸಾಕು ಕರಗಿ ಹೋಗಿರುತ್ತದೆ.
ಅದನ್ನು ನೀವು ಬಿಸಿಯಾರಿದ ಮೇಲೆ ತಿಂದರೆ ತುಪ್ಪದಲ್ಲಿ ತೇಲುತ್ತಿರುವ ಮೈಸೂರ್ ಪಾಕ್ ಗರಿಗರಿಯಾಗಿದ್ದು, ಬಾಯಿಗೆ ಹಾಕಿಕೊಂಡ ಕೆಲವೇ ಕ್ಷಣಗಳಲ್ಲಿ ಕರಗಿಹೋಗುತ್ತದೆ. ಹೀಗೆ 70 ವರ್ಷಗಳಿಂದಲೂ ತನ್ನ ಬೇಡಿಕೆಯನ್ನು ಕಡಿಮೆ ಮಾಡಿಕೊಳ್ಳದೆ ಕಾಲಕ್ಕೆ ತಕ್ಕಂತೆ ಎಲ್ಲಾ ಕಾಲದ ಎಲ್ಲಾ ವಯೋಮಾದನ ಗ್ರಾಹಕರನ್ನೂ ಆಕರ್ಷಿಸಿಕೊಂಡು ಬರುತ್ತಿರುವ ಕೋಲಾರದ ವೆಂಕಟೇಶ್ವರ ಸ್ವೀಟ್ ಸ್ಟಾಲ್ ನಲ್ಲಿ ತಯಾರು ಮಾಡುವ ಮೈಸೂರ್ ಪಾಕ್ ಇಂದಿಗೂ ತನ್ನ ಪ್ರಖ್ಯಾತಿ ಮುಂದುವರೆಸಿದೆ.
ಕಳೆದ ಏಳು ದಶಕಗಳಿಂದಲೂ ಕೂಡಾ ಜನಮನ್ನಣೆ ಕಳೆದುಕೊಳ್ಳದೆ ದಿನದಿಂದ ದಿನಕ್ಕೆ ಕೋಲಾರದ ವೆಂಕಟೇಶ್ವರ ಸ್ವೀಟ್ ಸ್ಟಾಲ್ನ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿನಿತ್ಯ ಇಲ್ಲಿ ಸುಮಾರು 50 ರಿಂದ 100 ಕೆಜಿಯಷ್ಟು ಮೈಸೂರ್ ಪಾಕ್ ಖಾಲಿಯಾಗುತ್ತದೆ. ದಿನಕ್ಕೆ ನಾಲ್ಕೈದು ಬಾರಿ ಬಿಸಿ ಬಿಸಿಯಾದ ಮೈಸೂರ್ ಪಾಕ್ ತಯಾರು ಮಾಡಲಾಗುತ್ತದೆ.
ಕೋಲಾರದಲ್ಲಿ ಸುಬ್ಬಣ್ಣ ಸ್ವೀಟ್ ಸ್ಟಾಲ್ ಎಂದೇ ಖ್ಯಾತಿ ಪಡೆದಿರುವ ಸ್ವೀಟ್ ಸ್ಟಾಲ್ ಎಷ್ಟು ಪ್ರಖ್ಯಾತಿ ಅಂದರೆ ಒಮ್ಮೆ ಇಲ್ಲಿ ಮೈಸೂರ್ ಪಾಕ್ ತಿಂದು ಹೋದವರು ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿರಲಿ, ಬೇರೆ ಯಾವುದೇ ರಾಜ್ಯದಲ್ಲಿರಲಿ, ಅಥವಾ ಬೇರೆ ಯಾವುದೇ ದೇಶದಲ್ಲಿದ್ದರೂ ವೆಂಕಟೇಶ್ವರ ಸ್ಟೀಟ್ ಸ್ಟಾಲ್ ಮಾಲೀಕರನ್ನು ಸಂಪರ್ಕ ಮಾಡಿ ಮೈಸೂರ್ ಪಾಕ್ ತರಿಸಿಕೊಂಡು ತಿಂದು ಖುಷಿ ಪಡುತ್ತಾರೆ. ಈಗಲೂ ಕೂಡಾ ರಾಜ್ಯದ ಹಲವು ಜಿಲ್ಲೆಗಳಿಗೆ, ದೇಶದ ಬೇರೆ ಬೇರೆ ರಾಜ್ಯಗಳಿಗೆ ಹಾಗೂ ಬೇರೆ ದೇಶಗಳಿಗೂ ಕಳಿಸಿಕೊಡುತ್ತೇವೆ ಅನ್ನೋದು ಮಾಲೀಕರಾದ ಶ್ರೀಧರ್ ಅವರ ಸಿಹಿಸಿಹಿ ಮಾತು.
ಕೋಲಾರದ ಮಟ್ಟಿಗೆ ಕೋಲಾರಕ್ಕೆ ಬರುವ ಯಾರಾದರೂ ಪ್ರಮುಖ ಅತಿಥಿಗಳು ಅಥವಾ ಸ್ನೇಹಿತರು ಇದ್ದರೆ ಅಂಥವರಿಗೆ ವೆಂಕಟೇಶ್ವರ ಸ್ವೀಟ್ ಸ್ವಾಲ್ ನಲ್ಲಿ ತಯಾರು ಮಾಡುವ ಈ ಸೂಪರ್ ಪಾಕ್ ತೆಗೆದುಕೊಂಡು ಹೋಗಿ ಕೊಡೋದೆ ದೊಡ್ಡ ವಿಚಾರವಾಗಿ ಪರಿಗಣಿಸುತ್ತಾರೆ. ಕಾರಣ ಇಲ್ಲಿನ ಮೈಸೂರ್ ಪಾಕ್ ತಿಂದವರಿಗೆ ಅಷ್ಟು ಖುಷಿಯಾಗುತ್ತದೆ.
ಇದನ್ನೂ ಓದಿ: ಅಯೋಧ್ಯೆ ಬಾಲರಾಮನ ಕಣ್ಣುಗಳನ್ನು ಕೆತ್ತಿದ ಬೆಳ್ಳಿ ಸುತ್ತಿಗೆ, ಚಿನ್ನದ ಉಳಿ ಫೋಟೋ ಹಂಚಿಕೊಂಡ ಶಿಲ್ಪಿ ಅರುಣ್ ಯೋಗಿರಾಜ್
ಹಾಗಾಗಿ ಮೈಸೂರ್ ಪಾಕ್ ಕೊಟ್ಟವರಿಗೂ ಸಂತೋಷ ಅದನ್ನು ತಿಂದವರಿಗೆ ಖುಷಿ ಹಾಗಾಗಿ ಬಹುತೇಕ ಜನರು ಕೋಲಾರಕ್ಕೆ ಬರುವ ಪ್ರಮುಖ ಗಣ್ಯವ್ಯಕ್ತಿಗಳನ್ನು ಕರೆತಂದು ಮೈಸೂರ್ ಪಾಕ್ ತಿನ್ನಿಸುತ್ತಾರೆ. ಅದು ಸಿನಿಮಾ ತಾರೆಯರಿರಲಿ, ರಾಜಕೀಯ ವ್ಯಕ್ತಿಗಳಿರಲಿ, ಅಥವಾ ಬೇರೆ ಬೇರೆ ಕ್ಷೇತ್ರಗಳ ಗಣ್ಯರಿರಲಿ ಎಲ್ಲರಿಗೂ ಕೋಲಾರದ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಮೈಸೂರ್ ಪಾಕ್ ಅಷ್ಟರಮಟ್ಟಿಗೆ ಮೆಚ್ಚುಗೆಯಾಗುತ್ತದೆ.
ಇನ್ನು ವೆಂಕಟೇಶ್ವರ ಸ್ವೀಟ್ ಸ್ಟಾಲ್ ನಲ್ಲಿ ಮೈಸೂರ್ ಪಾಕ್ ಬಹಳ ಪ್ರಸಿದ್ದಿ ಪಡೆದಿದೆ. ಅಷ್ಟೇ ಅಲ್ಲದೆ ಇಲ್ಲಿ ಮಾಡುವ ಬೂದುಕುಂಬಳಕಾಯಿ ಹಲ್ವಾ(ದಮ್ರೋಟ್), ಕ್ಯಾರೆಟ್ ಹಲ್ವಾ ಸೇರಿದಂತೆ ಹಲವು ತುಪ್ಪದಿಂದ ಮಾಡಿದ ಸ್ವೀಟ್ ಗಳು ಸಹ ಪ್ರಸಿದ್ದಿ ಪಡೆದಿವೆ. ಕೋಲ್ಡ್ ಬಾದಾಮಿ ಹಾಲು, ಜೊತೆಗೆ ಕರಿದ ಅವರೆಕಾಳು, ಖಾರಾ ಸೇವ್, ಪಕೋಡ, ವಿವಿಧ ಬಗೆಯ ಖಾರಾ ತಿಂಡಿಗಳನ್ನು ಜನ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. ನೀವು ಕೂಡಾ ಕೋಲಾರಕ್ಕೆ ಬಂದಾಗ ಒಮ್ಮೆ ವೆಂಕಟೇಶ್ವರ ಸ್ವೀಟ್ ಸ್ಟಾಲ್ಗೆ ಭೇಟಿ ಕೊಟ್ಟು ಸ್ವಾದಿಷ್ಟವಾದ, ಬಿಸಿ ಬಿಸಿಯಾದ, ಶುಚಿಯಾದ ಮೈಸೂರ್ ಪಾಕ್ ಸವಿಯಿರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Sat, 10 February 24