ಅವರು ಸುಮಾರು 30 ವರ್ಷ ಕಾಲ ಕ್ಲಾಸ್ ಒನ್ ಅಧಿಕಾರಿಯಾಗಿ ಸರ್ಕಾರಿ ಸೇವೆ ಸಲ್ಲಿಸಿದವರು. ತಮ್ಮ ನಿವೃತ್ತಿ ನಂತರ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿದ್ದ ಆ ಅಧಿಕಾರಿ ತನ್ನ ಸ್ವಯಾರ್ಜಿತವಾದ ಎಂಟು ಎಕರೆ ಭೂಮಿಯಲ್ಲಿ ಹಲವಾರು ಕೃಷಿ ಪ್ರಯೋಗಗಳನ್ನು ಮಾಡುತ್ತಾ ಹತ್ತಾರು ರೈತರಿಗೆ ಮಾರ್ಗದರ್ಶಕರಾಗಿದ್ದಾರೆ.
ಸ್ವಯಾರ್ಜಿತ ಭೂಮಿಯಲ್ಲಿ ಸಮಗ್ರ ಕೃಷಿ ಪ್ರಯೋಗ!
ವಿಶಾಲವಾದ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ, ತೋಟದಲ್ಲಿ ಕಂಡು ಬರುವ ಹಲಸು, ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳು ಹಾಗೂ ತರಕಾರಿಗಳು, ಅಲ್ಲೇ ರಾಶಿ ರಾಶಿ ತುಂಬಿ ಇಡಲಾಗಿರುವ ಶುಂಠಿ ಬೆಳೆ ಇಂಥಾದೊಂದು ದೃಷ್ಯಗಳು ನಮಗೆ ಕಂಡು ಬರೋದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಕಣಿವೆನಹಳ್ಳಿ ಗ್ರಾಮದಲ್ಲಿ. ಕಣಿವೇನಹಳ್ಳಿ ಗ್ರಾಮದ ಹನುಮಂತಪ್ಪ ರಾಜ್ಯದ ವಿವಿದ ನಗರಸಭೆಗಳಲ್ಲಿ ಅಯುಕ್ತರಾಗಿ ಕೆಲಸ ಮಾಡಿದ್ದ ಹನುಮಂತಪ್ಪನವರು ತಮ್ಮ ಸೇವೆಯಿಂದ ನಿವೃತ್ತಿಯಾಗಿ ಹತ್ತು ವರ್ಷಗಳು ಕಳೆದಿದೆ. ನಿವೃತ್ತಿ ನಂತರ ತಾವು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿ ಹನುಮಂತಪ್ಪ ಕಣಿವೇನಹಳ್ಳಿ ಬಳಿ ಎಂಟು ಎಕರೆ ಜಮೀನು ಖರೀದಿ ಮಾಡಿ ಅದರಲ್ಲಿ ಸಮಗ್ರ ಕೃಷಿ ಪ್ರಯೋಗ ಮಾಡಲು ಶುರುಮಾಡಿದ್ದಾರೆ ಈ ಮೂಲಕ ಎಂಟು ಎರಕೆಯಲ್ಲಿ ತರಕಾರಿ, ಹಣ್ಣು, ಹಾಗೂ ವಾಣಿಜ್ಯ ಬೆಳೆಯಾಗಿ ಶುಂಠಿಯನ್ನು ಬೆಳೆಯುವ ಮೂಲಕ ತಮ್ಮ ಭೂಮಿಯಲ್ಲಿ ಉತ್ತಮ ಹಾಗೂ ನಷ್ಟವಿಲ್ಲದೆ ಲಕ್ಷ ಲಕ್ಷ ಆದಾಯ ಗಳಿಸುವ ದಾರಿ ಕಂಡುಕೊಂಡಿದ್ದಾರೆ.
ಬೋರ್ ವೆಲ್ ಅಷ್ಟೇ ಅಲ್ಲಾ ಮಳೆಯಾಧರಿತ ಕೃಷಿಯಲ್ಲೂ ಸೈ!
ಹನುಮಂತಪ್ಪರವರು ಕೇವಲ ಬೋರ್ ವೆಲ್ ಆಶ್ರಯದಲ್ಲಿ ಬೆಳೆ ಬೆಳೆಯುವದಲ್ಲ ಇದರ ಜೊತೆಗೆ ಮಳೆಯಾಧಾರಿತ ರಾಗಿ ಬೆಳೆದು, ಕೃಷಿ ವಿಜ್ನಾನಿಗಳ ಅಚ್ಚರಿಯಾಗುವಂತೆ ಎಕರೆಗೆ 32 ರಿಂದ 36 ಕ್ವಿಂಟಾಲ್ ರಾಗಿ ಬೆಳೆದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜೊತೆಗೆ ತೊಗರಿ, ಜೋಳ, ಹುರುಳಿ ಬೆಳೆಗಳನ್ನು ಕಡಿಮೆ ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ.
ಮಾರುಕಟ್ಟೆ ಅಧ್ಯಯನದೊಂದಿಗೆ ಕೃಷಿ ಮಾಡಿ ಯಶಸ್ಸು!
ಇನ್ನು ಇವರ ಜೊತೆಗೆ ವಕೀಲ ವೃತ್ತಿ ಮಾಡುತ್ತಿರುವ ಅಣ್ಣನ ಮಗ ಪ್ರಸಾದ್ ಚಂದ್ರ ಕೃಷಿಯಲ್ಲಿ ತೊಡಗಿದ್ದಾರೆ, ಮಾರುಕಟ್ಟೆಯನ್ನು ಅಧ್ಯಯನ ಮಾಡಿಕೊಂಡು ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು ಅನ್ನೋದನ್ನ ನಿರ್ಧಾರ ಮಾಡಿ ಬೆಳೆ ಬೆಳೆಯುತ್ತಿದ್ದಾರೆ ಹಾಗಾಗಿ ಕೃಷಿಯಲ್ಲಿ ನಷ್ಟ ಅನ್ನೋದಿಲ್ಲದೆ ಒಳ್ಳೆಯ ಲಾಭದ ಕೃಷಿ ಮಾಡುತ್ತಿದ್ದಾರೆ. ವರ್ಷಕ್ಕೆ ಎಲ್ಲಾ ಖರ್ಚು, ಕೂಲಿ ಕಳೆದರೆ ನಿರಾಯಾಸವಾಗಿ 18 ರಿಂದ 20 ಲಕ್ಷ ರೂ ಸಂಪಾದನೆ ಮಾಡಬಹುದು ಅನ್ನೋದು ಅವರ ಮಾತು. ಒಂದೆಡೆ ತರಕಾರಿಯಿಂದ ತಿಂಗಳ ಆದಾಯ ಬಂದರೆ, ಇನ್ನೊಂದೆಡೆ ಹಲಸು, ಮಾವಿನ ಹಣ್ಣಿನಿಂದ ವಾರ್ಷಿಕ ಆಧಾಯ, ಇದರ ಜೊತೆಗೆ ಶುಂಠಿಯಿಂದ ಅರ್ಧವಾರ್ಷಿಕ ಆಧಾಯ, ಗಳಿಸುತ್ತಿದ್ದೇವೆ. ಇನ್ನು ತೋಟದ ಸುತ್ತಲೂ ಬೆಲೆಬಾಳುವ ಶ್ರೀಗಂಧ, ಟೀಕ್, ಮಗರಳಿದ್ದು ಇದು ಹತ್ತು ಹದಿನೈದು ವರ್ಷಗಳ ನಂತರ ನಮಗೆ ಆದಾಯ ತರುವ ಮೂಲವಾಗಿದ್ದು ಹಂತ ಹಂತವಾಗಿ ಲಾಭ ತಂದುಕೊಡುವಂತೆ ಪ್ಲಾನ್ ಮಾಡಿ ಕೃಷಿ ಮಾಡುತ್ತಿದ್ದೇವೆ ಅಂತಾರೆ.
ಒಟ್ಟಾರೆ ಕೃಷಿ ಅಂದರೆ ಅಯ್ಯೋ ನಮ್ಮಕೈಲಿ ಸಾಧ್ಯವಿಲ್ಲ ಎಂದು ಮೂಗು ಮುರಿಯುವ ಕಾಲವೊಂದಿತ್ತು ಆದರೆ ಈಗ ಕಾಲ ಬದಲಾಗಿದೆ ವೈಜ್ನಾನಿಕ ಕೃಷಿ ಹಾಗೂ ಮಾರುಕಟ್ಟೆಯ ಆಧಾರಿತ ಕೃಷಿ ಮೂಲಕ ಯಾರು ಬೇಕಾದರೂ ಲಾಭದಾಯಕ ಕೃಷಿ ಮಾಡಬಹುದು ಅನ್ನೋದಕ್ಕೆ ಈ ನಿವೃತ್ತ ಸರ್ಕಾರಿ ಅಧಿಕಾರಿಯ ಕೃಷಿ ಪದ್ದತಿಯೇ ನಮಗೆ ಮಾದರಿ.
-ರಾಜೇಂದ್ರ ಸಿಂಹ