ಕೋಲಾರ: ಆಕೆ ಕಗ್ಗತ್ತಲು ಆವರಿಸಿರಲಿ, ಮಳೆ ಸುರಿಯುತ್ತಿರಲಿ, ಗರ್ಭಿಣಿಯ ನರಳಾಟ ಸುದ್ದಿ ಕೇಳಿದ್ರೆ ಸಾಕು ಅಲ್ಲಿ ಹಾಜರು. ಕತ್ತಲಾಗಿದ್ರು ಕೈಯಲ್ಲಿ ಬುಡ್ಡಿ ದೀಪದ ಲಾಟೀನು ಹಿಡಿದು ಪ್ರಸವ ಮಾಡಿಸುವ ಸೂಲಗಿತ್ತಿ. ನಾಟಿ ವೈದ್ಯ, ಸಾಂತ್ವನದ ಮೂಲಕ ಸುಲಭವಾಗಿ ಹೆರಿಗೆ ಮಾಡಿಸಬಲ್ಲ ಕೋಲಾರ ಗಡಿ ಸಂಚಾರಿ ಆಸ್ಪತ್ರೆಯಂತೆ ಕೆಲಸ ಮಾಡುವ ಸೂಲಗಿತ್ತಿ ಬ್ಯಾಟಮ್ಮ.
ಹೆರಿಗೆ ಮಾಡಿಸೋದ್ರಲ್ಲಿ ಎತ್ತಿದ ಕೈ!
ಸುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾದ, ಕಾಡಿಗೆ ಹೊಂದಿಕೊಂಡಿರುವ ಗ್ರಾಮ ಗುಂಡ್ಲಪಾಳ್ಯ. ಯಾವುದೇ ನಾಗರಿಕ ಪ್ರಪಂಚದ ಸೌಲಭ್ಯವನ್ನು ಕಾಣದ, ಇಲ್ಲಿನ ಜನರು ನಾಟಿ ವೈದ್ಯ, ಗಂಗಮ್ಮ-ಮಾರಮ್ಮ ಗ್ರಾಮ ದೇವತೆಗಳೆ ನಿರ್ಧಾರ ಮಾಡುವ ಹಣೆಬರಹವನ್ನು ನಂಬಿಕೊಂಡಿರುವ ಜನ. ಈ ಸುತ್ತಮುತ್ತ ಇರುವ ಹಳ್ಳಿಗಳು ಬಸ್, ವಿದ್ಯುತ್, ಆಸ್ಪತ್ರೆ ಮತ್ತಿತರ ಸೌಲಭ್ಯಗಳನ್ನೆ ಕಂಡಿಲ್ಲದ ಗ್ರಾಮಗಳ ಪಾಲಿಗೆ ಬ್ಯಾಟಮ್ಮಳೆ ಎಲ್ಲವೂ ಆಗಿದ್ದಾಳೆ.
ಅತ್ತೆಯ ಪ್ರೇರಣೆಯಿಂದ ಕೆಲಸ ಕಲಿತ ನರಸಮ್ಮ
ನೂರಾರು ಕುರಿ, ದನಕರುಗಳ ಸಾಕಣೆ ಮಾಡುತ್ತಿದ್ದ ಬ್ಯಾಟಮ್ಮ, ತನ್ನ ಅತ್ತೆ ಸಾದಮ್ಮ ಅವರ ಪ್ರೇರಣೆಯಿಂದ ಸೂಲಗಿತ್ತಿಯಾದವರು. ತನ್ನ ಮೊದಲ ಹೆರಿಗೆಗೆ ತವರಿಗೂ ಕಳುಹಿಸದೆ ಹೆರಿಗೆ ಬೇನೆಗೆ ಬಿಸಿ ನೀರಿಗೆ ಒಂದಷ್ಟು ಸೊಪ್ಪಿನ ಪುಡಿ ಬೆರೆಸಿ, ಕುಡಿಸಿ ನೋವಿಲ್ಲದಂತೆ ಕ್ಷಣಾರ್ಧದಲ್ಲಿ ಹೆರಿಗೆ ಮಾಡಿದ್ದ, ಸಾಂತ್ವನದ ಮಾತಿನ ಮೂಲಕ ತಾಯ್ತನದ ಹಾರೈಕೆ ಮಾಡಿದ ಅತ್ತೆ ಸಾದಮ್ಮ ಅವರೇ ಬ್ಯಾಟಮ್ಮಗೆ ಮಾದರಿ. ಮಹಿಳೆಯರು ಹೆರಿಗೆ ಸಮಯದಲ್ಲಿ ನೋವು ಅನುಭವಿಸಬಾರದೆಂಬ ಆಶಯವನ್ನು ಹೊಂದಿದ ಬ್ಯಾಟಮ್ಮ, ಅತ್ತೆಯ ಸೂಲಗಿತ್ತಿ ಕಾಯಕದ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅದೇ ಹಾದಿಯನ್ನು ಹಿಡಿದಿದ್ದಾರೆ.
ಮೊದಲು ತನ್ನ ಮನೆಯಲ್ಲಿ ಹೆರಿಗೆ ಮಾಡಿಸುತ್ತಾ, ನಂತರ ಗ್ರಾಮದಲ್ಲಿ ಅದಾದ ಬಳಿಕ ಸುತ್ತಮುತ್ತಲಿನ ಎಂತಹ ಕಷ್ಟದ ಹೆರಿಗೆಯಾದರೂ ತನ್ನ ಅನುಭವದಿಂದ ಮಾಡಿಸುವ ಕಾಯಕ ಈಕೆಯದ್ದು. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸುಮಾರು 60 ವರ್ಷದಿಂದ ಸುತ್ತಮುತ್ತಲ ಸುಮಾರು 40 ಗ್ರಾಮಗಳಲ್ಲಿ ಸಾವಿರಾರು ಹೆರಿಗೆಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮಾಡಿಸಿದ ಕೀರ್ತಿ ಈಕೆಗಿದೆ. ಅವರ ಸೇವೆಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಕೂಡ ಒಲಿದುಬಂದಿದೆ.
ಒಟ್ಟಾರೆ ನಿರ್ಲಕ್ಷ್ಯಕ್ಕೊಳಗಾದ ಸುತ್ತಮುತ್ತಲ ಗಡಿ ಗ್ರಾಮಗಳಲ್ಲಿ ನಿಸ್ವಾರ್ಥ, ಪ್ರತಿಫಲಾಪೇಕ್ಷೆ ಇಲ್ಲದೆ ಸಂಚಾರಿ ಆಸ್ಪತ್ರೆಯಾಗಿ, ವೈದ್ಯಳಾಗಿ ಮಹಿಳೆಯರು ಮಕ್ಕಳ ಪಾಲಿನ ಅಚ್ಚುಮೆಚ್ಚಾಗಿರುವ ಸೂಲಗಿತ್ತಿ ಬ್ಯಾಟಮ್ಮ ಸೇವೆ ನಿಜಕ್ಕೂ ಗ್ರೇಟ್. ಈಕೆಯ ಸುದೀರ್ಘ ಸೇವೆ ಪರಿಗಣಿಸಿ ಮತ್ತಷ್ಟು ಗೌರವಗಳು ಸಿಗುವಂತಾಗಲಿ ಎಂಬುದು ನಮ್ಮ ಆಶಯ.
Published On - 6:37 pm, Fri, 26 June 20