ಕೋಲಾರ: ಅದೊಂದು ಅದ್ದೂರಿ ಬೀಳ್ಕೊಡುಗೆ ಸಮಾರಂಭ. ಆ ಸಭೆಯಲ್ಲಿ ಅಂದಿನ ಸಿಇಒ ಆಗಿದ್ದ ಅಧಿಕಾರಿಗೆ ಬೆಳ್ಳಿ ಗದೆ, ಬೆಳ್ಳಿ ಕಿರೀಟ ನೀಡಿ ಅಭಿನಂದಿಸಲಾಗಿತ್ತು. ಈ ಸಮಾರಂಭದಿಂದ ಇಬ್ಬರು ಡಿಸಿಗಳು ಸೇರಿದಂತೆ 9 ಜನ ಪಿಡಿಒಗಳ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ವಿರುದ್ದ FIR?
ಅಂದು ಕೋಲಾರ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದವರು ಇದೀಗ ಉಡುಪಿ ಜಿಲ್ಲಾಧಿಕಾರಿಯಾಗಿರುವ ಜಗದೀಶ್ಗೆ ಬೆಳ್ಳಿ ಗದೆ, ಕಿರೀಟ ಹಾಗೂ ಚಿನ್ನದ ಉಂಗುರ ನೀಡಿ ಪಿಡಿಒಗಳು ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿದ್ರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗದೀಶ್ ಸೇರಿದಂತೆ ತಾ.ಪಂ ಇಒ ಮತ್ತು 9 ಮಂದಿ ಗ್ರಾ.ಪಂ ಪಿಡಿಒಗಳ ಮೇಲೆ FIR ದಾಖಲಾಗಿದೆ. ಕೋಲಾರ ಜಿ.ಪಂ ಸಭಾಂಗಣದಲ್ಲಿ ಆಗಸ್ಟ್ 23, 2019 ರಂದು ಸಮಾರಂಭ ನಡೆದಿತ್ತು. ಈ ಸಂಬಂಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988ರ ಅನ್ವಯ ತನಿಖೆ ನಡೆಸಿ ವರದಿ ನೀಡುವಂತೆ ಕೋಲಾರ ACBಗೆ ಆದೇಶ ನೀಡಿದೆ.
ಘಟನೆಗೆ ಸಂಬಂಧಪಟ್ಟಂತೆ ಕೋಲಾರದ ಎಸ್.ನಾರಾಯಣಸ್ವಾಮಿ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಅಕ್ರಮ ಸಂಭಾವನೆ ರೂಪದಲ್ಲಿ ನಿರ್ಗಮಿತ ಅಧಿಕಾರಿಗೆ ಬೀಳ್ಕೊಡುಗೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಈ ಹಿಂದೆಯೂ ಕೆಲವರು ಈ ಬಗ್ಗೆ ಆರೋಪ ಮಾಡಿದ್ದಾಗ ಪಿಡಿಒ ಸಂಘದ ವತಿಯಿಂದ ಸುದ್ದಿಗೋಷ್ಠಿ ನಡೆಸಿ ನಿರ್ಗಮಿತ ಸಿಇಒಗೆ ಬಾಡಿಗೆ ಬೆಳ್ಳಿ ಗದೆ, ಕಿರೀಟ ತಂದು ಸನ್ಮಾನ ಮಾಡಿದ್ದಾಗಿ ವಿವರಣೆ ನೀಡಿದ್ದರು. ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿರುವುದು ಕುತೂಹಲ ಕೆರಳಿಸಿದೆ.
ನ್ಯಾಯಾಲಯ ಹೇಳಿರೋದೇನು?
ಒಟ್ಟಾರೆ ಅವತ್ತಿನ ಸನ್ಮಾನವೇ ಇಂದಿಗೆ ಎಲ್ಲರ ಮುಂದೆ ಅವಮಾನವಾಗಿ ಕಂಡುಬರುವಂತಾಗಿ ಒಬ್ಬ ಜಿಲ್ಲಾಧಿಕಾರಿಗೆ ಸಂಕಷ್ಟ ಎದುರಾಗಿದ್ರೆ, ಇತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮತ್ತೊಬ್ಬ ಜಿಲ್ಲಾಧಿಕಾರಿಯನ್ನ ಸಾಕ್ಷಿಯಾಗಿ ಮಾಡಿದ್ದಾರೆ. ಇದು ಇಬ್ಬರು ಜಿಲ್ಲಾಧಿಕಾರಿಗಳಿಗೆ ಮುಜುಗರ ಉಂಟಾಗಿದೆ. ಒಟ್ಟಾರೆ ಜಿಲ್ಲೆಯ ಪಿಡಿಒಗಳಿಗೂ ಇದು ನುಂಗಲಾರದ ತುತ್ತಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ.
Published On - 7:25 pm, Mon, 29 June 20