ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

ಕೋಲಾರ ತಾಲೂಕಿನ ವೇಮಗಲ್‌ನಲ್ಲಿ ಭಾರತದ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ಟಾಟಾ ಏರ್‌ಬಸ್ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಘಟಕದಿಂದ 2027ಕ್ಕೆ ಮೊದಲ H125 ಹೆಲಿಕಾಪ್ಟರ್ ಹೊರಬರುವ ನಿರೀಕ್ಷೆ ಇದೆ. ರಕ್ಷಣಾ ಇಲಾಖೆಗೆ ಸಹಾಯಕವಾಗಲಿರುವ ಈ ಯೋಜನೆ ದೇಶದ ಏರೋಸ್ಪೇಸ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಎಂದೇ ಪರಿಗಣಿಸಲಾಗಿದೆ.

ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
Image Credit source: Google
Edited By:

Updated on: Feb 17, 2026 | 6:17 PM

ಕೋಲಾರ, ಫೆಬ್ರವರಿ 17: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮುಂಬೈನಿಂದ ವರ್ಚುವಲ್ ಮೂಲಕ​​ ಉದ್ಘಾಟಿಸಿದ್ದಾರೆ. ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್ ಇಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ.

ಕೋಲಾರ ತಾಲೂಕಿನ ವೇಮಗಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ನಮ್ಮ ಆರ್ಥಿಕ ನೀತಿಯ ಮೂಲಾಧಾರಗಳಾಗಿವೆ. ಖಾಸಗಿ ವಲಯವು ರಕ್ಷಣಾ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ನಾವು ಅನೇಕ ಸುಧಾರಣೆಗಳನ್ನು ತಂದಿದ್ದೇವೆ. ಹಿಂದೆ ರಕ್ಷಣಾ ಉತ್ಪಾದನೆಯು ಕೇವಲ ಸಾರ್ವಜನಿಕ ವಲಯಕ್ಕೆ ಸೀಮಿತವಾಗಿತ್ತು. ಆದರೆ ಈಗ ಒಟ್ಟು ಉತ್ಪಾದನೆಯಲ್ಲಿ ಸುಮಾರು ಕಾಲು ಭಾಗದಷ್ಟು ಖಾಸಗಿ ವಲಯದಿಂದ ಬರುತ್ತಿದೆ. ನಮ್ಮ ರಕ್ಷಣಾ ರಫ್ತು ಕೂಡ ಗಣನೀಯವಾಗಿ ಹೆಚ್ಚಾಗಿದ್ದು, ಭಾರತವು ಇಂದು ವಿಶ್ವದ ಅಗ್ರ ರಫ್ತುದಾರರ ಪಟ್ಟಿಯಲ್ಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

ಈ  ಕಾರ್ಯಕ್ರಮದಿಂದ ಸುಮಾರು 1000 ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆಯಾಗುವ ನಿರೀಕ್ಷೆಯಿದೆ. ಇದು ನಮ್ಮ ಯುವ ಪೀಳಿಗೆಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವಿಶ್ವಾಸಾರ್ಹವೆಂದು ಹೆಸರುವಾಸಿಯಾಗಿರುವ ಈ ಹೆಲಿಕಾಪ್ಟರ್‌ಗಳು ಈಗ ಭಾರತದಲ್ಲಿ ತಯಾರಾಗುತ್ತಿರುವುದು ಹೆಮ್ಮೆಯ ವಿಷಯ. ಟಾಟಾ ಮತ್ತು ಏರ್‌ಬಸ್ ಈಗಾಗಲೇ C-295 ಸಾರಿಗೆ ವಿಮಾನ ಯೋಜನೆಯಲ್ಲಿ ಯಶಸ್ವಿಯಾಗಿ ಸಹಕರಿಸುತ್ತಿವೆ. ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧಕ್ಕೆ ಯಾವುದೇ ಮಿತಿಯಿಲ್ಲ. ಆಕಾಶವೇ ಈ ಸ್ನೇಹಕ್ಕೆ ಮಿತಿ ಎಂದು ನಾನು ಭಾವಿಸುತ್ತೇನೆ. ಈ ಸಹಯೋಗವು ‘ಮೇಕ್ ಇನ್ ಇಂಡಿಯಾ’ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 16 ಎಕರೆ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ ಈ ಘಟಕ ನಿರ್ಮಾಣಗೊಂಡಿದ್ದು, ಇದು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಜೋಡಣಾ ಘಟಕ ಎನ್ನಲಾಗಿದೆ. ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ಮೊದಲ ಹಂತದಲ್ಲಿ ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ರಕ್ಷಣಾ ಇಲಾಖೆಗೆ ಸೇರಿದ ಹೆಲಿಕಾಪ್ಟರ್​​ಗಳು ಇಲ್ಲಿ ತಯಾರಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಪ್ಲ್ಯಾನ್​​ ಸಿದ್ಧವಾಗಿರುವ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:35 pm, Tue, 17 February 26