ಕೊಪ್ಪಳ: ಗೋವುಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕೊಪ್ಪಳದ ದಿಡ್ಡಿಕೇರಿಯ ಯುವಕರ ತಂಡವೊಂದು ಇತರರಿಗೆ ಮಾದರಿಯಾಗಿದೆ. ಕಳೆದ ಐದು ದಿನಗಳ ಹಿಂದೆ ಕೊಪ್ಪಳದ ವಳಕಲ್ಲು ಪ್ರದೇಶದ ಗುಡ್ಡದ ಇಳಿಜಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ನಗರದ ಗೋಶಾಲೆಗೆ ಸೇರಿದ ನಾಲ್ಕು ಗೋವುಗಳ ರಕ್ಷಣಾ ಕಾರ್ಯವನ್ನು ಈ ಯುವಕರ ತಂಡ ನಡೆಸಿದೆ. ನಗರದ ದಿಡ್ಡಿಕೇರಿಯ ಶುಕೂರ್ ಮತ್ತವರ ತಂಡದ ಮಹ್ಮದ್ ಮಸೂದ್, ಇಬ್ರಾಹಿಂ, ಸುಹೇಲ್, ಗುಲಾಬ್, ಆಬೀದ್, ಸಮೀರ್, ಅಗ್ಗಾಲು ಸೇರಿದಂತೆ 20 ಜನ ಸದಸ್ಯರು ಹಾಗೂ ಗೋಶಾಲೆಯ ರಾಹುಲ್ ಯಾದವ್ ಮತ್ತವರ ತಂಡದ ಹನುಮೇಶ್, ಕೊಟ್ರೇಶ್, ಸೂಗಪ್ಪ, ಜಯಪ್ಪ, ಜಯಪ್ರಕಾಶ, ಡಾ.ಶಂಕ್ರಪ್ಪ, ಬಸವರಾಜ್ ಸೇರಿದಂತೆ 7 ಜನ ಸಿಬ್ಬಂದಿ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಶುದ್ಧ ಆಕಳ ಹಾಲಿಗೆ ಹೆಸರುವಾಸಿಯಾಗಿರುವ ನಗರದ ಮಹಾವೀರ ಗೋಶಾಲೆಯಲ್ಲಿ ಸುಮಾರು 900 ಕ್ಕೂ ಹೆಚ್ಚು ಗೋವುಗಳಿವೆ. 50 ಜನರು ಈ ಗೋವುಗಳ ಆರೈಕೆಯಲ್ಲಿ ತೊಡಗಿದ್ದಾರೆ. ಪ್ರತಿದಿನದಂತೆ ಸೂರ್ಯೋದಯಕ್ಕೂ ಮುನ್ನವೇ ನಾಲ್ಕು ಜನ ದನಗಾಹಿಗಳು ಗೋಶಾಲೆಯ ಎಲ್ಲ ಗೋವುಗಳನ್ನು ಮೇಯಿಸಲು ಇಲ್ಲಿನ ವಳಕಲ್ಲು ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ವಳಕಲ್ಲು ಬೃಹತ್ ಬೆಟ್ಟಗಳಿರುವ ಪ್ರದೇಶ. ಇಲ್ಲಿ ಶಿಲಾಯುಗದ ಮಾನವ ವಾಸವಾಗಿದ್ದ ಎಂಬುದಕ್ಕೆ ನೂರಾರು ಪುರಾವೆಗಳಿವೆ. ಇಲ್ಲಿನ ಬೆಟ್ಟಗಳ ಬಂಡೆಗಳ ಕೆಳಗೆ ಆದಿ ಮಾನವ ರಚಿಸಿದ ಕಲಾಕೃತಿಗಳಿದ್ದು, ಇಲ್ಲಿ ಸಂಚರಿಸುವಾಗ ಆ ಕಾಲಕ್ಕೆ ಸೇರಿದ ಕೈಕೊಡಲಿ ಇತ್ಯಾದಿಗಳು ಸಿಗುತ್ತವೆ.
ವಳಕಲ್ಲಿಗೆ ಗೋವು ತಂದು ಬಿಡುವುದೇ ತಡ ಗೋವುಗಳು ಸುತ್ತಲಿನ ಬೆಟ್ಟಗಳನ್ನು ಹತ್ತಿ ಮೇಯಲು ಶುರು ಮಾಡುತ್ತವೆ. ಮಧ್ಯಾಹ್ನದವರೆಗೂ ಅಲ್ಲಿ ಮೇಯ್ದ ದನಗಳು ಬಿಸಿಲೇರಿದಂತೆ ನೆರಳಿನಾಶ್ರಯದ ಅಲ್ಲಿಯೇ ವಿಶ್ರಾಂತಿ ಪಡೆಯುತ್ತವೆ. ಅದೇ ಸಮಯದಲ್ಲಿ ಈ ನಾಲ್ಕು ಗೋವುಗಳು ಒಣ ಹುಲ್ಲನ್ನು ಅರಸಿ ಕಡಿದಾದ ಇಳಿಜಾರಿನ ಪ್ರದೇಶವೊಂದರಲ್ಲಿ ಸಿಕ್ಕಿಹಾಕಿಕೊಂಡಿವೆ. ಇಳಿ ಸಂಜೆಯಾಗುತ್ತಿದ್ದಂತೆ ದನಗಾಹಿಗಳು ಇವುಗಳನ್ನು ಗಮನಿಸದೇ ಉಳಿದ ಗೋವುಗಳನ್ನು ಹೊಡೆದುಕೊಂಡು ಗೋಶಾಲೆಗೆ ಬಂದಿದ್ದಾರೆ. ವಾಡಿಕೆಯಂತೆ ಎಲ್ಲ ಗೋವುಗಳನ್ನು ಕೊಟ್ಟಿಗೆಗಳಲ್ಲಿ ಕಟ್ಟಿ, ಹಾಲು ಕರೆದುಕೊಂಡಿದ್ದಾರೆ. ಈ ನಾಲ್ಕು ಗೋವುಗಳ ಕಾಣೆಯಾದ ವಿಷಯ ಸ್ವತಃ ಗೋಶಾಲೆಯವರಿಗೂ ತಿಳಿದಿರಲಿಲ್ಲ. ಏಕೆಂದರೆ ಮೇಯ್ದು ಬಂದ ಗೋವುಗಳನ್ನು ಎಣಿಸುವ ಪರಿಪಾಠ ಗೋಶಾಲೆಯಲ್ಲಿ ಇಲ್ಲ.
ಗೋವುಗಳು ಸಿಕ್ಕಿಕೊಂಡಿರುವ ಸುದ್ದಿ ತಿಳಿದದ್ದು ಹೇಗೆ?
ವಳಕಲ್ಲಿಗೆ ಹೊಂದಿಕೊಂಡೇ ಐತಿಹಾಸಿಕ ಹುಲಿಕೆರೆ ಇದೆ. ಈ ಕೆರೆಯಲ್ಲಿ ಮೀನು ಹಿಡಿಯಲು ತೆಪ್ಪದ ಮೂಲಕ ತೆರಳುವಾಗ ಶುಕೂರ್ ಮತ್ತು ಇಬ್ರಾಹೀಂ ಅವರ ಕಣ್ಣಿಗೆ ಈ ಗೋವುಗಳು ಮೊದಲು ಕಂಡಿವೆ. ಮೊದಲ ದಿನ ದೂರದಿಂದ ನೋಡಿದ ಅವರಿಗೆ ಇವು ಗೋವುಗಳು ಹೌದೋ ಅಲ್ಲವೋ ಅನ್ನಿಸಿದೆ. ತಮ್ಮ ಮೀನು ಹಿಡಿಯುವ ಕಾರ್ಯ ಮುಗಿಸಿಕೊಂಡು ಸಂಜೆಯಾಗುತ್ತಿದ್ದಂತೆ ಮನೆಗೆ ಮರಳಿದ್ದಾರೆ. ಮಾರನೇ ದಿನ ಮೀನು ಬೇಟೆ ಬಿಟ್ಟು ಪರಿಶೀಲನೆಗಾಗಿ ಬೆಟ್ಟ ಹತ್ತಿದ್ದಾರೆ. ಆಗ ಅವರಿಗೆ ಗೋವುಗಳು ಇಳಿಜಾರಿನಲ್ಲಿ ಸಿಕ್ಕಿಹಾಕಿಕೊಂಡಿರುವುದು ಖಾತ್ರಿಯಾಗಿದೆ.
ಶುಕೂರ್ ಗೋಶಾಲೆಯವರಿಗೆ ಈ ಸುದ್ದಿ ಮುಟ್ಟಿಸಿದ್ದಾರೆ. ಆಗ ಗೋಶಾಲೆಯವರು ಮಾಲೀಕರಿಗೆ ಈ ವಿಷಯ ತಿಳಿಸಿ ರಕ್ಷಣಾ ಕಾರ್ಯ ಕೈಗೊಳ್ಳಲು ಆರು ಜನರ ತಂಡದೊಂದಿಗೆ ಬೆಳಿಗ್ಗೆ ಬೆಟ್ಟಕ್ಕೆ ತೆರಳಲು ಸಜ್ಜಾಗಿದ್ದಾರೆ. ಈ ಆರು ಜನರಿಂದ ಗೋವುಗಳ ರಕ್ಷಣೆ ಅಸಾಧ್ಯದ ಮಾತು. ಏಕೆಂದರೆ, ವಯಸ್ಕ ಗೋವು ಸುಮಾರು 200 ಕೆಜಿ ತೂಗುತ್ತದೆ. ಅದೂ ಅಷ್ಟು ದೊಡ್ಡ ಬೆಟ್ಟದ ಮೇಲೆ ಅವುಗಳನ್ನು ಪ್ರಪಾತದಿಂದ ಮೇಲಕ್ಕೆ ಸಾಗಿಸುವುದು ಸುಲಭದ ಮಾತಾಗಿರಲಿಲ್ಲ.
ಇದನ್ನು ಮನಗಂಡ ಶುಕೂರ್ ದಿಡ್ಡಿಕೇರಿ ಓಣಿಯ ಸುಮಾರು 20 ಜನ ಯುವಕರನ್ನು ಈ ಕಾರ್ಯಕ್ಕಾಗಿ ಆಯ್ಕೆಮಾಡಿಕೊಂಡಿದ್ದಾರೆ. ಬಳಿಕ ಹಗ್ಗ, ಗೂಟ, ನೀರು, ದನಗಳಿಗೆ ಕೊಡಲು ಹಿಂಡಿ ಇತ್ಯಾದಿಗಳನ್ನು ಸಂಗ್ರಹಿಸಿ ಸಜ್ಜುಗೊಂಡಿದ್ದಾರೆ. ಗೋಶಾಲೆಯ ಮತ್ತು ದಿಡ್ಡಿಕೇರಿಯ ಯುವಕರ ತಂಡ ಮೊದಲೇ ಮಾತನಾಡಿಕೊಂಡಂತೆ ತೆಪ್ಪದ ಮೂಲಕ ಗೋವುಗಳು ಸಿಕ್ಕಿಹಾಕಿಕೊಂಡಿರುವ ಪ್ರದೇಶಕ್ಕೆ ತೆರಳಿದ್ದಾರೆ.
ರಕ್ಷಣಾ ಕಾರ್ಯ ಕೈಗೊಂಡಿದ್ದು ಹೇಗೆ?
ವಳಕಲ್ಲಿನ ಆ ಬೆಟ್ಟ ನೆಲಮಟ್ಟದಿಂದ ಸುಮಾರು 350 ಅಡಿ ಎತ್ತರವಿದೆ. ಗೋವುಗಳ ಸಿಕ್ಕಿಹಾಕಿಕೊಂಡಿದ್ದ ಪ್ರದೇಶ ಸುಮಾರು 300 ಅಡಿ ಎತ್ತರದಲ್ಲಿದೆ. ಕಡಿದಾದ ಇಳಿಜಾರಿನ ಆ ಪ್ರದೇಶದಲ್ಲಿ ಗೋವುಗಳು ಇಳಿದಿದ್ದು ವಿಪರ್ಯಾಸ.
ಸ್ಥಳ ಮುಟ್ಟಿದ ತಂಡಗಳಲ್ಲಿನ 6 ಜನ ಮೊದಲು ಗೋವುಗಳು ಇರುವ ಕಡೆ ತೆವಳುತ್ತಾ ನಿಧಾನವಾಗಿ ಇಳಿದರು. ನಾಲ್ಕು ಹಸುಗಳನ್ನು ಹತ್ತಿರಕ್ಕೆ ಕರೆದು ತಾವು ಕೊಂಡೊಯ್ದಿದ್ದ ಹಿಂಡಿ ತಿನ್ನಿಸಿ, ನೀರು ಕುಡಿಸಿದರು. ಮೊದಲೇ ಐದು ದಿನದಿಂದ ಆಹಾರ, ನೀರಿಲ್ಲದೇ ನಿತ್ರಾಣಗೊಂಡಿದ್ದ ಗೋವುಗಳು ಸ್ವಲ್ಪ ಚೇತರಿಕೆಕೊಂಡವು.
ಬಳಿಕ ಗೋವೊಂದಕ್ಕೆ ಹಗ್ಗ ಕಟ್ಟಿ ತಂಡದ ಉಳಿದೆಲ್ಲ ಸದಸ್ಯರು ಮೆಲಕ್ಕೆಳೆಯಲು ಪ್ರಾರಂಭಿಸಿದರು. ಕೆಲ ಜನ ಗೋವಿಗೆ ಬಂಡೆಯ ಘರ್ಷಣೆಯಿಂದ ಹಾನಿಯಾಗದಂತೆ ಆಗಾಗ ಮೇಲಕ್ಕೆ ಎತ್ತುತ್ತಿದ್ದರು. ಹೀಗೆ ಮೊದಲ ಗೋವು ಸಣ್ಣ ಪುಟ್ಟ ಗಾಯಗಳೊಂದಿಗೆ ಮೇಲೆ ಬಂತು. ಅದೇ ತೆರನಾಗಿ ಎರಡನೇ ಗೋವನ್ನು ಸಹ ಮೇಲಕ್ಕೆ ತರಲಾಯಿತು. ಕಾಪಾಡಲಾದ ಗೋವುಗಳು ನೆಗೆಯುತ್ತ ತಮ್ಮ ಸಂತಸ ವ್ಯಕ್ತಪಡಿಸಿದವು. ಅಷ್ಟರಲ್ಲಾಗಲೇ ಮಧ್ಯಾಹ್ನ 1 ಗಂಟೆಯಾಗಿತ್ತು. ಇನ್ನೊಂದು ಗಂಟೆಯಲ್ಲಿ ಉಳಿದ ಎರಡೂ ಗೋವುಗಳನ್ನು ಮೇಲಕ್ಕೆ ತರಬಹುದು ಎಂಬುದು ಆ ತಂಡಗಳ ಯೋಜನೆಯಾಗಿತ್ತು. ಮೊದಲ ಹಂತವಾಗಿ ಎರಡು ಗೋವುಗಳು ಮೇಲೆ ಬಂದಾಗ ತಂಡದ ಎಲ್ಲ ಸದಸ್ಯರ ಮುಖದಲ್ಲಿ ಸಂತೋಷ ಮನೆಮಾಡಿತ್ತು. ಆದರೆ ಈ ಸಂತೋಷ ಬಹಳ ಕಾಲ ಇರಲಿಲ್ಲ.
ಎರಡನೇ ಹಂತ ಕಾರ್ಯಾರಂಭ ಮಾಡಲು ತಂಡದ 6 ಜನ ಗೋವುಗಳಿರುವ ಕಡೆ ಇಳಿದರು. ಹರೆಯದ ಆ ಗೋವುಗಳು ಏಕಾಏಕಿ ಗಾಬರಿಗೊಂಡು ಮತ್ತಷ್ಟು ಕಡಿದಾದ ಪ್ರದೇಶಕ್ಕೆ ತೆರಳಿದವು. ನೋಡ ನೋಡುತ್ತಿದ್ದಂತೆ ಕಾಲು ಜಾರಿ ಅಲ್ಲಿಂದ ಸುಮಾರು 300 ಅಡಿ ಪ್ರಪಾತಕ್ಕೆ ಬಿದ್ದವು. ಇದನ್ನು ನೋಡಿದ ಸದಸ್ಯರು ಕೆಳಕ್ಕೆ ಧಾವಿಸಿದರು. ಅಷ್ಟರಲ್ಲಾಗಲೇ ಒಂದು ಗೋವು ಅಸು ನೀಗಿತ್ತು. ಮತ್ತೊಂದು ಒದ್ದಾಡುತ್ತಿತ್ತು. ಪ್ರಾಣ ಉಳಿಸಲು ಸದಸ್ಯರು ಅದಕ್ಕೆ ನೀರು ಕುಡಿಸುವ ಪ್ರಯತ್ನ ಮಾಡಿದರೂ ಅದು ಫಲ ಕೊಡಲಿಲ್ಲ. ಕೆಳಗಿಳಿದಿದ್ದ 6 ಜನರು ಹತಾಶೆಗೊಂಡು ಮೇಲಕ್ಕೆ ಬಂದರು. ಎರಡು ಗೋವುಗಳನ್ನು ಕಾಪಾಡಿದ ತೃಪ್ತಿಗಿಂತ ಎರಡು ಗೋವುಗಳನ್ನು ಕಳೆದುಕೊಂಡೆವಲ್ಲ ಎಂಬ ದುಖಃ ಎರಡೂ ತಂಡಗಳ ಸದಸ್ಯರಲ್ಲಿ ಮನೆ ಮಾಡಿತ್ತು.
ನಾವು ಮೀನು ಹಿಡಿಯಲು ಹೋದಾಗ ಆಕಳು ಬಿದ್ದಿರೋದನ್ನು ನೋಡಿದ್ದೆವು. ಹೇಗಾದರೂ ಮಾಡಿ ಅವುಗಳನ್ನು ಕಾಪಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಸ್ನೇಹಿತರು ಕೂಡಿಕೊಂಡು ಆಕಳು ಮೇಲೆತ್ತಿದ್ದೇವೆ. ಮೂಕ ಪ್ರಾಣಿಗಳ ರೋಧನೆ ನೋಡಲಾಗದೆ ನಾವು ಹೇಗಾದರೂ ಮಾಡಿ ಗೋವುಗಳನ್ನು ಮೇಲೆತ್ತಲು ಮುಂದಾಗಿದ್ದೇವು. ಆದರೆ ಎರಡು ಗೋವುಗಳು ಸಾವನ್ನಪ್ಪಿದ್ದು ನಮಗೆ ತುಂಬಾ ನೋವಾಗಿದೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.
ಗೋಶಾಲೆಯ ತಂಡದ ಸದಸ್ಯರು ಮೃತಪಟ್ಟ ಆ ಎರಡು ಗೋವುಗಳನ್ನು ಅಲ್ಲೇ ಗುಂಡಿ ತೋಡಿ ಸಮಾಧಿ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ರಕ್ಷಣಾ ಕಾರ್ಯದಲ್ಲಿ ಎರಡೂ ತಂಡಗಳ ಸದಸ್ಯರು ಗೋವುಗಳ ರಕ್ಷಣೆಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟಿದ್ದು ಮಾತ್ರ ಪ್ರಶಂಸನೀಯ. ಧರ್ಮ, ಜಾತಿ, ಮತಗಳ ಬೇಧವಿಲ್ಲದೆ ಎಲ್ಲರೂ ಇಂತಹ ಕೆಲಸದಲ್ಲಿ ಭಾಗವಹಿಸಿದ್ದು, ಈ ಭಾಗದ ಸೌಹಾರ್ದ, ಸಾಮರಸ್ಯಕ್ಕೆ ಸಾಕ್ಷಿಯಾಯಿತು.
ಇದನ್ನೂ ಓದಿ:
ಜಿಲ್ಲೆಯ ಕಾವಿಧಾರಿಯೊಬ್ಬರು ದೇಶಿ ಗೋವುಗಳನ್ನ ಸಾಕಿ, ಅವುಗಳ ಮಹತ್ವವನ್ನ ತಿಳಿಸಿ ಕೊಡುತ್ತಿದ್ದಾರೆ
ಅನಾಥ ಗೋವುಗಳಿಗೆ ಆಪ್ತರಕ್ಷಕರಾದ ಕುಟುಂಬ; ತಂದೆಯ ಕೊನೆಯ ಆಸೆ ಈಡೇರಿಸಲು ಗೋವುಗಳ ಆರೈಕೆ