ಮಹಿಳಾ ಉಪ ತಹಶೀಲ್ದಾರ್​ ಮೇಲೆ ಕಬ್ಬಿಣದ ರಾಡ್​​ನಿಂದ ದಾಳಿ: ಬೆಚ್ಚಿಬಿದ್ದ ಕಚೇರಿ ಸಿಬ್ಬಂದಿ

| Updated By: ರಮೇಶ್ ಬಿ. ಜವಳಗೇರಾ

Updated on: Nov 13, 2024 | 6:26 PM

ವ್ಯಕ್ತಿಯೋರ್ವ ಕೊಪ್ಪಳದ ತಹಶೀಲ್ದಾರ್ ಕಚೇರಿಗೆ ನುಗ್ಗಿ ಏಕಾಏಕಿ ಉಪ ತಹಶೀಲ್ದಾರ್​ ಮೇಲೆ ಕಬ್ಬಿಣದ ರಾಡ್​ನಿಂದ ದಾಳಿ ಮಾಡಿರುವ ಘಟನೆ ನಡೆದಿದೆ. ಅಚ್ಚರಿ ಅಂದ್ರೆ ಪರಿಚಯಸ್ಥನೇ ಮಹಿಳಾ ಅಧಿಕಾರಿ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮಹಿಳಾ ಉಪ ತಹಶೀಲ್ದಾರ್​ ಮೇಲೆ ಕಬ್ಬಿಣದ ರಾಡ್​​ನಿಂದ ದಾಳಿ: ಬೆಚ್ಚಿಬಿದ್ದ ಕಚೇರಿ ಸಿಬ್ಬಂದಿ
Follow us on

ಕೊಪ್ಪಳ, (ನವೆಂಬರ್ 13): ವ್ಯಕ್ತಿಯೋರ್ವ ತಹಶೀಲ್ದಾರ್ ಕಚೇರಿಗೆ ನುಗ್ಗಿ ಏಕಾಏಕಿ ಉಪ ತಹಶೀಲ್ದಾರ್​ ಮೇಲೆ ಕಬ್ಬಿಣದ ರಾಡ್​ನಿಂದ ದಾಳಿ ಮಾಡಿರು ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಕೊಪ್ಪಳ ನಗರದ ಉಪ ತಹಶೀಲ್ದಾರ್​ ರೇಖಾ ದೀಕ್ಷಿತ್ ಎನ್ನುವರ ಮೇಲೆ ವ್ಯಕ್ತಿಯೋರ್ವ ರಾಡ್​ನಿಂದ ಹಲ್ಲೆ ಮಾಡಿದ್ದಾನೆ. ಪ್ರಭು ಚೆನ್ನದಾಸರ್ ಎನ್ನುವನೇ ರೇಖಾ ಅವರ ಮೇಲೆ ದಾಳಿ ಮಾಡಿದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಉಪತಹಶೀಲ್ದಾರ್ ರೇಖಾ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದಡೆ ಈ ಘಟನೆಯಿಂದ ಕಚೇರಿ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

ಪ್ರಭು ಚೆನ್ನದಾಸರ್ ರೇಖಾಳ ಅತ್ಯಾಪ್ತ. ನಿನ್ನೆ (ನವೆಂಬರ್ 12) ಸಂಜೆ 5 ಗಂಟೆ ಸುಮಾರಿಗೆ ಕಚೇರಿಯಲ್ಲಿ ರೇಖಾ ಬ್ಯುಸಿಯಾಗಿದ್ರು. ಈ ವೇಳೆ ಪ್ರಭು, ಕಬ್ಬಿಣದ ರಾಡ್ ಹಿಡಿದು ಕಚೇರಿಗೆ ನುಗ್ಗಿ ಏಕಾಏಕಿ ರೇಖಾ ಮೇಲೆ ದಾಳಿ ಮಾಡಿದ್ದು, ರಾಡ್​ನಿಂದ ರೇಖಾಳ ತಲೆಗೆ 3 ಬಾರಿ ಹೊಡೆದಿದ್ದಾನೆ. ರೇಖಾ ಕುಸಿದು ಬಿದ್ದರೂ ಸಹ ರಾಕ್ಷಸನಂತೆ ಥಳಿಸಿದ್ದಾನೆ. ಕೂಡಲೇ ಕಚೇರಿ ಸಿಬ್ಬಂದಿ ರೇಖಾರನ್ನ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ ದಲಿತರ ಮೇಲೆ ದೌರ್ಜನ್ಯ: 97 ಅಪರಾಧಿಗಳಿಗೆ ಜಾಮೀನು ಮಂಜೂರು

ಇನ್ನು ಹಲ್ಲೆ ಮಾಡಿದ ಪ್ರಭು ಮೂರು ವರ್ಷದಿಂದ ರೇಖಾಗೆ ಪರಿಚಯಸ್ಥ. ಪ್ರತಿದಿನ ಈತನೇ ರೇಖಾಳನ್ನ ಕಚೇರಿಗೆ ಕರ್ಕೊಂಡು ಬರೋದು, ಕರ್ಕೊಂಡ್ ಹೋಗೋದ್ ಮಾಡ್ತಿದ್ನಂತೆ. ಜತೆಗೆ ಮನೆ ಕೆಲಸಗಳನ್ನ ನೋಡಿಕೊಳ್ತಿದ್ನಂತೆ. ಇನ್ನು ರೇಖಾ ಈತನಿಗೆ ಹಣಕಾಸಿನ ನೆರವನ್ನೂ ನೀಡಿದ್ರಂತೆ. ಆದ್ರೆ, ಇವರ ಮಧ್ಯೆ ಅದೇನಾಯ್ತೋ ಏನೋ, ನಿನ್ನೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಸದ್ಯ, ಪ್ರಭುನನ್ನು ಕೊಪ್ಪಳ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಹಲ್ಲೆ ಹಿಂದಿನ ಕಾರಣ ಬಾಯ್ಬಿಡಿಸುತ್ತಿದ್ದಾರೆ.

ಇನ್ನು ಆಪ್ತನಾಗಿದ್ದವನು ಕಿರಾತಕನಾಗಿದ್ದೇಗೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಹಣದ ಕಾರಣವೋ, ವೈಯಕ್ತಿಕ ವಿಚಾರದಿಂದ ಇದೆಲ್ಲ ನಡೆದಿದ್ಯಾ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ