ನೂರಾರು ವರ್ಷಗಳಿಂದ ಇದ್ದರೂ ಸಿಗದ ಹಕ್ಕು ಪತ್ರಗಳು; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 09, 2024 | 7:53 PM

ದೇಶಾದ್ಯಂತ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿದೆ. ಆದ್ರೆ, ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಒಂದು ಮತ್ತು ಚಿಕ್ಕರಾಂಪುರ ಎರಡು, ಗ್ರಾಮಗಳ ಜನರು, ನಮ್ಮ ಸಮಸ್ಯೆ ಪರಿಹಾರವಾಗದೇ ಇದ್ರೆ ನಾವು ಓಟು ಹಾಕಲ್ಲ ಎಂದು ಹೇಳುತ್ತಿದ್ದಾರೆ. ಹೌದು, ದಶಕಗಳಿಂದ ಆ ಪ್ರದೇಶದಲ್ಲಿ ಜನ ವಾಸವಾಗಿದ್ದಾರೆ. ಗ್ರಾಮ ಪಂಚಾಯತಿಯಿಂದ ಅನೇಕ ಸೌಲಭ್ಯಗಳನ್ನು ಕೂಡ ನೀಡಲಾಗಿದೆ. ಆದ್ರೆ, ಅವರು ವಾಸವಾಗಿರುವ ಮನೆಗಳು ಅವರ ಹೆಸರಲ್ಲಿ ಇಲ್ಲ. ಹೀಗಾಗಿ ಹಕ್ಕು ಪತ್ರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನೂರಾರು ವರ್ಷಗಳಿಂದ ಇದ್ದರೂ ಸಿಗದ ಹಕ್ಕು ಪತ್ರಗಳು; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು
ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು
Follow us on

ಕೊಪ್ಪಳ, ಏ.09: ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಚಿಕ್ಕರಾಂಪುರ ಒಂದು ಮತ್ತು ಚಿಕ್ಕರಾಂಪುರ ಎರಡು, ಗ್ರಾಮಗಳ ಜನರು ಬ್ಯಾನರ್ ಹಿಡಿದು ನಿಂತಿದ್ದಾರೆ. ಈ ಎರಡು ಗ್ರಾಮಗಳು ಅಂಜನಾದ್ರಿಯಿಂದ ಕೂಗಳತೆ ದೂರದಲ್ಲಿದ್ದು, ಒಟ್ಟು ಆರು ನೂರಕ್ಕೂ ಹೆಚ್ಚು ಜನರು ಇದ್ದಾರೆ. ಇನ್ನೂರಕ್ಕೂ ಹೆಚ್ಚು ಮನೆಗಳಿವೆ. ಗ್ರಾಮದಲ್ಲಿ ಗ್ರಾಮ ಪಂಚಾಯತಿಯಿಂದ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಶಾಲೆ, ವಿದ್ಯುತ್ ಸೌಲಭ್ಯ ಕೂಡ ಇದೆ. ಆದರೂ ಕೂಡ ಈ ಜನರು ಇದೀಗ ಲೋಕಸಭಾ ಚುನಾವಣೆಯಲ್ಲಿ ನಾವು ಮತ ಹಾಕಲ್ಲಾ ಎಂದು ಹೇಳುತ್ತಿದ್ದಾರೆ.

ಹೌದು, ಅನೇಕ ತೆಲೆಮಾರುಗಳಿಂದ ಚಿಕ್ಕರಾಂಪುರ 1 ಮತ್ತು 2 ರಲ್ಲಿ ನೂರಾರು ಜನರು ದಶಕಗಳಿಂದ ಈ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು  ವಾಸಮಾಡಿದ್ದಾರೆ. ಆದ್ರೆ, ಇಲ್ಲಿನ ಜನರ ಮನೆಗಳು, ಭೂಮಿಯೂ ಇವರ ಹೆಸರಲ್ಲಿ ಇಲ್ಲ. ಹೀಗಾಗಿ ಮನೆಗಳು ಇದ್ದರೂ ಕೂಡ ತಮ್ಮ ಸ್ವಂತದ ಹೆಸರಲ್ಲಿ ಇಲ್ಲ. ಹೀಗಾಗಿ ನಮಗೆ ನಮ್ಮ ಹೆಸರಲ್ಲಿ ಹಕ್ಕು ಪತ್ರ ನೀಡಬೇಕು ಎನ್ನುವುದು ಈ ಎರಡು ಗ್ರಾಮಗಳ ಜನರ ಆಗ್ರಹವಾಗಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ: ಯತೀಂದ್ರರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು

ಇನ್ನು ಹಕ್ಕು ಪತ್ರ ಇಲ್ಲದೇ ಇರೋದರಿಂದ, ಜಮೀನು ಖಾತೆ ಪುಸ್ತಕದಲ್ಲಿ ಇವರು ಹೆಸರು ಇಲ್ಲ, ತಮ್ಮದೆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಕೂಡ ಇದೀಗ ಆಗುತ್ತಿಲ್ಲ. ಬ್ಯಾಂಕ್​ನಿಂದ ಯಾವುದೇ ಸಾಲ ಸೌಲಭ್ಯಗಳು ಕೂಡ ಸಿಗದಂತಾಗಿದೆ. ಇತ್ತೀಚೆಗೆ ಈ ಗ್ರಾಮದ ಯುವಕರಿಗೆ ಯಾರು ಹೆಣ್ಣು ಕೂಡ ಕೊಡುತ್ತಿಲ್ಲವಂತೆ. ನಿಮ್ಮ ಮನೆಗಳೇ ನಿಮ್ಮ ಹೆಸರಲ್ಲಿ ಇಲ್ಲ, ಹೀಗಾಗಿ ಹೆಣ್ಣು ಕೊಡೋದಿಲ್ಲಾ ಎಂದು ಅನೇಕರು ಹೇಳುತ್ತಿದ್ದಾರಂತೆ. ಇನ್ನು ಗ್ರಾಮದ ಜನರು ಗ್ರಾಮ ಪಂಚಾಯತ್ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರ್, ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಜನಪ್ರತಿನಿಧಿಗಳಿಗೂ ತಮಗೆ ಹಕ್ಕುಪತ್ರ ನೀಡಬೇಕು, ದಾಖಲಾತಿಗಳಲ್ಲಿ ನಮ್ಮ ಜಾಗವನ್ನು ನಮ್ಮ ಹೆಸರಲ್ಲಿ ನಮೂದಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ಕಚೇರಿಗೆ ನೂರಾರು ಬಾರಿ ಅಲೆದಾಡಿದ್ದಾರೆ. ಆದ್ರೆ, ಇಲ್ಲಿವರೆಗೆ ಹಕ್ಕುಪತ್ರ ನೀಡುವ ಕೆಲಸವಾಗಿಲ್ಲ. ಇನ್ನು ಈ ಎರಡು ಗ್ರಾಮಗಳು ಹಂಪಿ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿವೆ. ಜೊತೆಗೆ ದಾಖಲಾತಿಗಳಲ್ಲಿ ಈ ಎರಡು ಗ್ರಾಮಗಳ ಹೆಸರು ಇದ್ದರೂ ಕೂಡ ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ ಜಮೀನಾಗಿದೆಯಂತೆ. ನಿಮ್ಮ ಜಮೀನು ಅರಣ್ಯ ಇಲಾಖೆಗೆ ಸೇರಿದ ಜಮೀನಾಗಿದೆ. ನಿಮಗೆ ಯಾವುದೇ ಹಕ್ಕುಪತ್ರ ನೀಡಲು ಬರೋದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರಂತೆ. ಜೊತೆಗೆ ಇತ್ತೀಚೆಗೆ ಮನೆ ಕಟ್ಟಲು ಕೂಡ ಪರವಾನಗಿಯನ್ನು ಗ್ರಾಮ ಪಂಚಾಯತ್​ನವರು ನೀಡುತ್ತಿಲ್ಲವಂತೆ.

ಆದ್ರೆ, ನಮ್ಮ ಪೂರ್ವಜರ ಕಾಲದಿಂದ ನಾವು ಇಲ್ಲೇ ವಾಸವಾಗಿದ್ದೇವೆ. ನಮಗೆ ಹಕ್ಕು ಪತ್ರ ನೀಡಬೇಕು ಎನ್ನವುದು ಗ್ರಾಮದ ಜನರ ಆಗ್ರಹವಾಗಿದೆ. ದಶಕಗಳಿಂದ ವಾಸವಾಗಿರುವ ನೂರಾರು ಜನರು ಹಕ್ಕುಪತ್ರಗಳಿಲ್ಲದೇ ಅತಂತ್ರರಾಗಿದ್ದಾರೆ. ಹೀಗಾಗಿ ಯಾವಾಗ ಯಾರಾದರೂ ನಮ್ಮನ್ನು ಒಕ್ಕಲೆಬ್ಬಿಸಬಹುದು ಎನ್ನುವ ಆತಂಕದಲ್ಲಿಯೇ ಇಲ್ಲಿನ ಜನರು ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ತಮಗೆ ಹಕ್ಕುಪತ್ರ ನೀಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ. ಹೀಗಾಗಿ ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ