ಸಿದ್ದರಾಮಯ್ಯ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ: ಯತೀಂದ್ರರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು
ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಟೊಂಕ ಕಟ್ಟಿರುವ ಸಿಎಂ ಸಿದ್ದರಾಮಯ್ಯಗೆ ಈಗ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಭೀತಿ ಎದುರಾಗಿದೆ. ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೊಸ್ ಗೆಲುವಿಗಾಗಿ ಮತಯಾಚನೆಗೆ ತೆರಳಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು, ಏಪ್ರಿಲ್ 8: ಲೋಕಸಭೆ ಚುನಾವಣೆಗೆ (Lok Sabha Elections) ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ (Sunil Bose) ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ (Yathindra Siddaramaiah) ಪ್ರತಿಭಟನೆಯ ಬಿಸಿ ತಟ್ಟಿದೆ. ಚುನಾವಣಾ ಬಹಿಷ್ಕಾರದ ಬೆದರಿಕೆ ಹಾಕಿರುವ ಪ್ರತಿಭಟನಾಕಾರರು, ಯತೀಂದ್ರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಇದರೊಂದಿಗೆ ಮುಖ್ಯಮಂತ್ರಿಗಳ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಕೇಳಿಬಂದಂತಾಗಿದೆ.
ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಬಳಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಈ ಮಧ್ಯೆ, ಚುನಾವಣಾ ಪ್ರಚಾರಕ್ಕಾಗಿ ಮಲ್ಲುಪುರಕ್ಕೆ ಭೇಟಿ ನೀಡಿದ ಯತೀಂದ್ರ ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಿ ಮತ ಯಾಚಿಸಿದರು. ಈ ವೇಳೆ, ಬೇಡಿಕೆಗಳನ್ನು ಈಡೇರಿಸುವಂತೆ ಯತೀಂದ್ರರನ್ನು ರೈತರು ಒತ್ತಾಯಿಸಿದರು.
ಚುನಾವಣೆಗೋಸ್ಕರ ಬಂದಿದ್ದೀರಿ: ರೈತರ ಆಕ್ರೋಶ
ಪ್ರತಿಭಟನಾ ನಿರತ ರೈತರು ಸಿಟ್ಟಾಗುತ್ತಿದ್ದಂತೆಯೇ ಅವರನ್ನು ಓಲೈಸಲು ಯತೀಂದ್ರ ಮುಂದಾದರು. ಆದರೆ, ಇದನ್ನು ಲೆಕ್ಕಿಸದ ರೈತರು, ಚುನಾವಣೆಗೋಸ್ಕರ ಇಲ್ಲಿಗೆ ಬಂದಿದ್ದೀರಿ. ಇಲ್ಲದಿದ್ದರೆ ನೀವು ಯಾವುದೇ ಕಾರಣಕ್ಕೂ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ರೈತರು ಹೇಳಿದರು. ಇದಕ್ಕುತ್ತರಿಸಿದ ಯತೀಂದ್ರ, ಇದನ್ನು ನಮ್ಮ ತಂದೆಯವರ ಗಮನಕ್ಕೆ ತರುತ್ತೇನೆ ಎಂದರು. ಇದನ್ನು ಕೇಳುತ್ತಿದ್ದಂತೆಯೇ ಕುಪಿತಗೊಂಡ ಪ್ರತಿಭಟನಾಕಾರರು, ‘ಇನ್ನೂ ಈ ವಿಚಾರವನ್ನು ನಿಮ್ಮ ತಂದೆಯವರ ಗಮನಕ್ಕೆ ತಂದಿಲ್ಲವೇ’ ಎಂದು ವಾಗ್ದಾಳಿ ನಡೆಸಿದರು. ನಮ್ಮ ಬೇಡಿಕೆಯನ್ನು ಈಗಲೇ ಈಡೇರಿಸಿ. ಇಲ್ಲದಿದ್ದರೆ, ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು. ಪ್ರತಿಭಟನಕಾರರಿಗೆ ಉತ್ತರಿಸಲಾಗದೆ ಬಂದ ದಾರಿಗೆ ಸುಂಕವಿಲ್ಲದಂತೆ ಯತೀಂದ್ರ ಅಲ್ಲಿಂದ ವಾಪಸಾದರು.
ಇದನ್ನೂ ಓದಿ: ನೋಟಾಗೆ ಮತ ಹಾಕಿದರೆ ಏನಾಗುತ್ತದೆ, ನಿಯಮಗಳು ಹೇಳುವುದೇನು? ಇಲ್ಲಿದೆ ಮಾಹಿತಿ
ಈ ಬಾರಿ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಖುದ್ದು ಅಖಾಡಕ್ಕಿಳಿದಿರುವ ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರಗೂ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿಯುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಯತೀಂದ್ರ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ನೇಹಿತ ಸುನೀಲ್ ಬೊಸ್ ಗೆಲುವಿಗಾಗಿ ಹಗಲಿರುಳು ಓಡಾಟ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ