ತುಂಗಭದ್ರೆಯಲ್ಲಿ ಅಪಾಯಕಾರಿ ತೆಪ್ಪದಾಟ: ಹಂಪಿ ಅಂಜನಾದ್ರಿ ಪ್ರವಾಸಿಗರ ಸುರಕ್ಷತೆ, ವನ್ಯಜೀವಿ ಸಂರಕ್ಷಣೆ ಕುರಿತು ಕಳವಳ

ವಿಶ್ವವಿಖ್ಯಾತ ಹಂಪಿ ಅಂಜನಾದ್ರಿ ಸಮೀಪದ ತುಂಗಭದ್ರಾ ನದಿಯಲ್ಲಿ ಅಪಾಯಕಾರಿ ರೀತಿಯಲ್ಲಿ ತೆಪ್ಪ ಸಂಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ನಿಷೇಧವಿದ್ದರೂ ವಿಜಯನಗರ ಜಿಲ್ಲೆಯ ಹಂಪಿ ಭಾಗದಲ್ಲಿ ತೆಪ್ಪ ಸಂಚಾರ ಮುಂದುವರಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರವಾಸಿಗರ ಸುರಕ್ಷತೆ ಮತ್ತು ನೀರುನಾಯಿಗಳ ಸಂರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ತುಂಗಭದ್ರೆಯಲ್ಲಿ ಅಪಾಯಕಾರಿ ತೆಪ್ಪದಾಟ: ಹಂಪಿ ಅಂಜನಾದ್ರಿ ಪ್ರವಾಸಿಗರ ಸುರಕ್ಷತೆ, ವನ್ಯಜೀವಿ ಸಂರಕ್ಷಣೆ ಕುರಿತು ಕಳವಳ
ತುಂಗಭದ್ರಾ ನದಿಯಲ್ಲಿ ಅಪಾಯಕಾರಿ ತೆಪ್ಪ ಸಂಚಾರ
Edited By:

Updated on: Nov 16, 2026 | 7:52 AM

ಮುಖ್ಯಾಂಶಗಳು

  • ತುಂಗಭದ್ರೆಯಲ್ಲಿ ಅಪಾಯಕಾರಿ ತೆಪ್ಪ ಸಂಚಾರ ಆರೋಪ
  • ಅನುಮತಿ ಇಲ್ಲದೆ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ಆರೋಪ
  • ನೀರುನಾಯಿಗಳ ಆವಾಸಸ್ಥಾನಕ್ಕೂ ಎದುರಾದ ಆತಂಕ

ಕೊಪ್ಪಳ, ನವೆಂಬರ್ 16: ವಿಶ್ವವಿಖ್ಯಾತ ಹಂಪಿ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗೆ ಬೆಲೆಯೇ ಇಲ್ಲವೇ? ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ ನಡೆಯುತ್ತಿದೆಯೇ? ಇಂತಹ ಗಂಭೀರ ಪ್ರಶ್ನೆಗಳು ಇದೀಗ ಕೇಳಿಬಂದಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ತಳವಾರಘಟ್ಟ ಪ್ರದೇಶದಲ್ಲಿ ತುಂಗಭದ್ರಾ ನದಿಯಲ್ಲಿ ಅನಧಿಕೃತವಾಗಿ ಅಪಾಯಕಾರಿ ರೀತಿಯಲ್ಲಿ ತೆಪ್ಪದ ಮೂಲಕ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹಂಪಿ ಹಾಗೂ ಅಂಜನಾದ್ರಿ ಸುತ್ತಮುತ್ತಲಿನ ತುಂಗಭದ್ರಾ ನದಿಯ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ತೆಪ್ಪದ ಸವಾರಿ ಪ್ರಮುಖ ಆಕರ್ಷಣೆಯಾಗಿದೆ. ವಾರಾಂತ್ಯದಲ್ಲಿ ನೂರಾರು ಪ್ರವಾಸಿಗರು ತೆಪ್ಪಗಳ ಮೂಲಕ ನದಿಯಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಆದರೆ, ಈ ಸಂಚಾರಕ್ಕೆ ಅಧಿಕೃತ ಅನುಮತಿ ಇಲ್ಲದಿದ್ದರೂ, ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಪ್ರವಾಸಿಗರನ್ನು ನದಿಯಲ್ಲಿ ಕರೆದೊಯ್ಯಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Loading...

ಪ್ರವಾಸಿಗರ ಸುರಕ್ಷತೆಗೆ ಅಗತ್ಯವಾದ ಲೈಫ್ ಜಾಕೆಟ್ ಸೇರಿದಂತೆ ಮೂಲಭೂತ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ತೆಪ್ಪ ಸಂಚಾರ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ನದಿಯ ಅಪಾಯಕಾರಿ ಪ್ರದೇಶಗಳಲ್ಲಿ ಈ ರೀತಿ ಸಂಚಾರ ನಡೆಸುವುದು ಪ್ರವಾಸಿಗರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಹಣದ ಆಸೆಗೆ ಪ್ರವಾಸಿಗರ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದೇ ತುಂಗಭದ್ರಾ ನದಿ, ಎರಡು ಜಿಲ್ಲೆಗಳಲ್ಲಿ ಬೇರೆ ಬೇರೆ ನಿಯಮ!

ಈ ಪ್ರಕರಣದಲ್ಲಿ ಮತ್ತೊಂದು ಗಂಭೀರ ಪ್ರಶ್ನೆ ಎದುರಾಗಿದೆ. ತುಂಗಭದ್ರಾ ನದಿಯಲ್ಲಿ ತೆಪ್ಪ ಸಂಚಾರಕ್ಕೆ ಕೊಪ್ಪಳ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ವಿಜಯನಗರ ಜಿಲ್ಲೆಯ ಹಂಪಿ ಭಾಗದಲ್ಲಿ ತೆಪ್ಪ ಸಂಚಾರ ನಡೆಯುತ್ತಿದೆ. ಹಾಗಾದರೆ ಒಂದೇ ನದಿಯಲ್ಲಿ ಎರಡು ಜಿಲ್ಲೆಗಳಿಗೆ ಬೇರೆ ಬೇರೆ ನಿಯಮಗಳಿವೆಯೇ? ಒಂದು ಜಿಲ್ಲೆಯಲ್ಲಿ ನಿಷೇಧವಿದ್ದಾಗ ಮತ್ತೊಂದು ಜಿಲ್ಲೆಯಲ್ಲಿ ಯಾವ ಆಧಾರದ ಮೇಲೆ ತೆಪ್ಪ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ನೀರುನಾಯಿ ಸಂರಕ್ಷಿತ ಪ್ರದೇಶದಲ್ಲೂ ನಿಯಮ ಉಲ್ಲಂಘನೆ ಆರೋಪ

ತುಂಗಭದ್ರಾ ನದಿಯ ಈ ಭಾಗ ನೀರುನಾಯಿಗಳ ಆವಾಸಸ್ಥಾನವಾಗಿದ್ದು, ಅವುಗಳ ಸಂರಕ್ಷಣೆ ದೃಷ್ಟಿಯಿಂದಲೂ ಸೂಕ್ಷ್ಮ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ಪ್ರವಾಸಿಗರನ್ನು ತೆಪ್ಪಗಳ ಮೂಲಕ ಕರೆದೊಯ್ಯುವುದರಿಂದ ನೀರುನಾಯಿಗಳ ಆವಾಸಸ್ಥಾನಕ್ಕೆ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ. ವನ್ಯಜೀವಿಗಳ ಸಂರಕ್ಷಣೆಗಾಗಿ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ ತೆಪ್ಪ ಸಂಚಾರ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯದಲ್ಲಿ ಮೂಲಸೌಕರ್ಯ ಕೊರತೆ: ಪ್ರವಾಸಿಗರ ಪರದಾಟ, ಆಕ್ರೋಶ

ಹಂಪಿಯ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕು. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಜನರ ಜೀವ ಮತ್ತು ವನ್ಯಜೀವಿಗಳ ಸಂರಕ್ಷಣೆಯನ್ನು ಕಡೆಗಣಿಸುವುದು ಎಷ್ಟು ಸರಿ? ಸಂಬಂಧಪಟ್ಟ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಈ ಬಗ್ಗೆ ತಕ್ಷಣ ಗಮನಹರಿಸಿ, ಅನಧಿಕೃತ ತೆಪ್ಪ ಸಂಚಾರಕ್ಕೆ ಕಡಿವಾಣ ಹಾಕಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us