ಅಯೋಧ್ಯ ರಾಮ ಮಂದಿರ ಉದ್ಘಾಟನೆ: ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಹನುಮಾನ್ ತಾಂಡವ್ ಸ್ತೋತ್ರ ಪಠಣ

| Updated By: ಆಯೇಷಾ ಬಾನು

Updated on: Jan 09, 2024 | 2:53 PM

ಪಂಪಾ ಸರೋವರ, ಶಿವನಿಗಾಗಿ ಪಾರ್ವತಿ ನೃತ್ಯ ಮಾಡಿದ ಸ್ಥಳ ಅಂತ ಹೇಳಲಾಗುತ್ತಿದೆ. ಜೊತೆಗೆ ಐದು ಪುಣ್ಯ ಸರೋವರದಲ್ಲಿ ಪಂಪಾ ಸರೋವರ ಕೂಡಾ ಒಂದು ಅಂತ ಹೇಳಲಾಗುತ್ತಿದೆ. ಇಂತಹ ಐತಿಹಾಸಿಕ ಮತ್ತು ಪುಣ್ಯಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿಕೊಂಡು ಏಕಕಾಲದಲ್ಲಿ ಹನುಮಾನ್ ತಾಂಡವ್ ಸ್ತೋತ್ರ ಪಠಿಸಿದರು.

ಕೊಪ್ಪಳ, ಜ.09: ರಾಮ ಮಂದಿರ ಉದ್ಘಾಟನೆಗೆ (Ayodhya Ram Mandir) ಕೆಲವೇ ದಿನಗಳು ಬಾಕಿ ಉಳಿದಿವೆ. ಅಯೋಧ್ಯೆಯಲ್ಲಿ ಪ್ರತಿಷ್ಟಾಪಿಸಲಾಗುವ ಬಾಲ ರಾಮನ ಮೂರ್ತಿ, ರಾಮ ಮಂದಿರವನ್ನು ನೋಡಲು ದೇಶದ ಕೋಟ್ಯಾಂತರ ರಾಮ ಭಕ್ತರು ಕುತೂಹಲದಿಂದ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಇನ್ನು ರಾಮನ ಬಂಟ ಹನುಮಂತನ (Lord Hanuman) ನಾಡಲ್ಲಿ ಕೂಡಾ ಸಂಭ್ರಮ ಹೆಚ್ಚಾಗಿದೆ. ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಇಂದು ಐತಿಹಾಸಿಕ ಪಂಪಾ ಸರೋವರದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಹನುಮಾನ್ ತಾಂಡವ್ ಸ್ತೋತ್ರ ಪಠಣ ಮಾಡಿದ್ರು.

ಪಂಪಾ ಸರೋವರದಲ್ಲಿ ಹನುಮಾನ್ ತಾಂಡವ್ ಪಠಣ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದೆ ಪ್ರದೇಶದಲ್ಲಿರುವ ಪಂಪಾ ಸರೋವರದಲ್ಲಿ ಇಂದು ಸೂರ್ಯೋದಯಕ್ಕೂ ಮುನ್ನವೇ ಸಾವಿರಾರು ಮಹಿಳೆಯರ ದಂಡೇ ಆಗಮಿಸಿತ್ತು. ಪಂಪಾ ಸರೋವರ, ಶಿವನಿಗಾಗಿ ಪಾರ್ವತಿ ನೃತ್ಯ ಮಾಡಿದ ಸ್ಥಳ ಅಂತ ಹೇಳಲಾಗುತ್ತಿದೆ. ಜೊತೆಗೆ ಐದು ಪುಣ್ಯ ಸರೋವರದಲ್ಲಿ ಪಂಪಾ ಸರೋವರ ಕೂಡಾ ಒಂದು ಅಂತ ಹೇಳಲಾಗುತ್ತಿದೆ. ಇಂತಹ ಐತಿಹಾಸಿಕ ಮತ್ತು ಪುಣ್ಯಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿಕೊಂಡು ಏಕಕಾಲದಲ್ಲಿ ಹನುಮಾನ್ ತಾಂಡವ್ ಸ್ತೋತ್ರ ಪಠಿಸಿದರು. ಮುಂಜಾನೆ ಆರು ಗಂಟೆ ಹದಿನೈದು ನಿಮಿಷಕ್ಕೆ ಆರಂಭವಾಗಿದ್ದ ಹನುಮಾನ್ ತಾಂಡವ ಸ್ತೋತ್ರ ಪಠಣ, ನಿರಂತರವಾಗಿ ಒಂದು ಗಂಟೆಗಳ ಕಾಲ ನಡೆಯಿತು. ಪೌಂಡೇಶನ್ ಪಾರ್ ಹೊಲಿಸ್ಟಿಕ್ ಡೆವಲಪಮೆಂಟ್ ಸಂಸ್ಥೆಯಿಂದ ಭಾರತದ ಮಾತೃಶಕ್ತಿ ತಂಡ ಇಂತಹದೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಪಂಪಾ ಸರೋವರದಲ್ಲಿ ಹನುಮಾನ್ ಪ್ರತಿಮೆಯನ್ನು ಇರಿಸಿ, ಪಂಪಾಸರೋವರದ ಸುತ್ತಮುತ್ತಲೂ ದೀಪಗಳನ್ನು ಹಿಡಿದ ಮಹಿಳೆಯರು ಹನುಮಾನ್ ತಾಂಡವ್ ಸ್ತೋತ್ರಗಳನ್ನು ಪಠಿಸಿದ್ರು.

ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸ್ತೋತ್ರ ಪಠಣ

ಇನ್ನು ರಾಮನ ಜನ್ಮಭೂಮಿ ಅಯೋಧ್ಯೆಯಾದ್ರೆ, ರಾಮನ ಬಂಟ ಹನುಮಂತನ ಜನ್ಮಸ್ಥಳ ಇರೋದು, ಕೊಪ್ಪಳ ಜಿಲ್ಲೆಯ ಗಂಗವಾತಿ ತಾಲೂಕಿನ ಕಿಷ್ಕಿಂದೆ ಪ್ರದೇಶದಲ್ಲಿರುವ ಅಂಜನಾದ್ರಿಯಲ್ಲಿ. ಪಂಪಾ ಸರೋವರ ಸೇರಿದಂತೆ ಸುತ್ತಮುತ್ತಲಿನ ಅನೇಕ ಕಡೆ ರಾಮನ ಅನೇಕ ಹೆಜ್ಜೆ ಗುರುತುಗಳಿವೆ. ಪಂಪಾ ಸರೋವರದ ಮುಂದೆಯೆ ರಾಮನಿಗಾಗಿ ಕಾದಿದ್ದ ಶಬರಿ ಗುಹೆ ಇದೆ. ರಾಮ ಶಬರಿ ಗುಹೆಗೆ ಆಗಮಿಸಿದ್ದ ಐತಿಹಾಸಿಕ ಸ್ಥಳವಿದೆ. ಇಂತಹ ಸ್ಥಳದಲ್ಲಿ ಇಂದು ಹನುಮಾನ್ ತಾಂಡವ್ ಸ್ತೋತ್ರವನ್ನು ಪಠಿಸಲಾಗಿದೆ. ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮತ್ತು ಭಾರತದ ಮಾತೃಶಕ್ತಿಯನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಇಂತಹದೊಂದು ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕಿ ಸುಮಲತಾ ತಿಳಿಸಿದರು.

ಇದನ್ನೂ ಓದಿ: Ram Mandir Event Invitees:ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ; ಸಮಾರಂಭಕ್ಕೆ ಯಾರಿಗೆಲ್ಲ ಆಹ್ವಾನವಿದೆ?

ಇನ್ನು ಇಂದಿನ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದರು. ಇನ್ನು ಇಂತಹದೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ದೇಶದ ವಿವಿಧ ಮೂಲಗಳಿಂದ ಮಹಿಳೆಯರನ್ನು ಸಂಘಟಿಸಿದ್ದು ಆನಲೈನ್ ಮೂಲಕ. ಹೌದು ಪಂಪಾ ಸರೋವರದಲ್ಲಿ ಹನುಮಾನ್ ತಾಂಡವ್ ಸ್ತೋತ್ರ ಪಠಣೆ ಮಾಡಲು ನಿರ್ಧರಿಸಿದ ನಂತರ, ಆಸಕ್ತರಿಗೆ ಆನಲೈನ್ ಮೂಲಕ ಸಂಪರ್ಕ ಮಾಡಲಾಗಿತ್ತು. ಜೊತೆಗೆ ಪ್ರತಿನಿತ್ಯ ಸಂಜೆ ಅವರಿಗೆ ಹನುಮಾನ್ ತಾಂಡವ್ ಸ್ತೋತ್ರ ಪಠಣೆಯ ಬಗ್ಗೆ ತರಬೇತಿ ಕೂಡಾ ನೀಡಲಾಗಿತ್ತು. ರಾಗಬದ್ದವಾಗಿ ಮತ್ತು ತಪ್ಪಿಲ್ಲದೇ ಸ್ತೋತ್ರ ಪಠಣೆಯನ್ನು ಹೇಳುವದು ಹೇಗೆ ಅನ್ನೋದನ್ನು ಕಲಿಸಿಕೊಡಲಾಗಿತ್ತು.

ಪಂಪಾ ಸರೋವರದಲ್ಲಿ ನಡೆದ ಹನುಮಾನ್ ತಾಂಡವ್ ಸ್ತೋತ್ರ ಪಠಣೆಯಲ್ಲಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿ, ಮತ್ತು ಅವರ ಪತ್ನಿ ಅರುಣಾ ರೆಡ್ಡಿ ಕೂಡಾ ಭಾಗಿಯಾಗಿದ್ದರು. ಕರ್ನಾಟಕದಿಂದ ನೂರಾ ಐವತ್ತಕ್ಕೂ ಹೆಚ್ಚು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ತೋತ್ರ ಪಠಣದ ನಂತರ ಮಹಿಳೆಯರು ಪಂಪಾ ಸರೋವರದಲ್ಲಿರುವ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಐತಿಹಾಸಿಕ ಸ್ಥಳಗಳಿಗೆ ಬೇಟಿ ನೀಡಿದ್ದು ವಿಶೇಷವಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ