ಜನಾರ್ದನ ರೆಡ್ಡಿ ನೀಡಿದ್ದ ಉಚಿತ ಆ್ಯಂಬುಲೆನ್ಸ್‌ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

|

Updated on: Apr 01, 2023 | 10:58 PM

ನೀತಿ ಸಂಹಿತೆ ಜಾರಿ ಹಿನ್ನೆಲೆ ಮಾಜಿ ಸಚಿವ ಜನಾರ್ದನರೆಡ್ಡಿ ನೀಡಿದ್ದ ಉಚಿತ ಆ್ಯಂಬುಲೆನ್ಸ್​ನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಸೀಜ್​ ಮಾಡಲಾಗಿದೆ.

ಕೊಪ್ಪಳ: ನೀತಿ ಸಂಹಿತೆ ಜಾರಿ ಹಿನ್ನೆಲೆ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ನೀಡಿದ್ದ ಉಚಿತ ಆ್ಯಂಬುಲೆನ್ಸ್​ನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಸೀಜ್​ ಮಾಡಲಾಗಿದೆ. ಆ್ಯಂಬುಲೆನ್ಸ್‌ ಮೇಲೆ ಜನಾರ್ದನರೆಡ್ಡಿ ಮತ್ತು ಪತ್ನಿ ಫೋಟೋ ಹಾಕಲಾಗಿದೆ. ಜಪ್ತಿ ಮಾಡಿ ಕನಕಗಿರಿ ಪೊಲೀಸ್ ಠಾಣಾ ಆವರಣದಲ್ಲಿ ನಿಲ್ಲಿಸಲಾಗಿದ್ದು, ಪ್ರಕರಣ ದಾಖಲಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತೋರಣಹಳ್ಳಿಯ ರಾವ್ ಸಾಹೇಬ್​ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಲಕ್ಷ ರೂಪಾಯಿ ಮೌಲ್ಯದ 370 ಲೀಟರ್​ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ. ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಶೇಖರಿಸಿಟ್ಟಿದ್ದರು ಎನ್ನಲಾಗುತ್ತದೆ. ಸದ್ಯ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಝಣ ಝಣ ಕಾಂಚಾಣ

ರಾಯಚೂರು: ವಾಹನ ತಪಾಸಣೆ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.42 ಲಕ್ಷ ರೂ. ಹಣ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಮಾನ್ವಿ, ರಾಯಚೂರು ಗ್ರಾಮೀಣ, ದೇವದುರ್ಗ ಚೆಕ್​ಪೊಸ್ಟ್​ನಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ ಸಮೇತ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದ ಆರೋಪ; ಶಾಸಕ ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್ ವಿರುದ್ಧ FIR

ಗದಗ ಜಿಲ್ಲೆಯಲ್ಲಿ ಮತ್ತೆ ಲಕ್ಷ ಲಕ್ಷ ಹಣ ಸೀಜ್

ಗದಗ: ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಚೆಕ್ ಪೋಸ್ಟ್​ನಲ್ಲಿ ಕಂತೆ ಕಂತೆ ಹಣ ಸೀಜ್ ಮಾಡಲಾಗಿದೆ. ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 4.82 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಬದಾಮಿಯಿಂದ ಗದಗ ನಗರಕ್ಕೆ ಬರುತ್ತಿದ್ದ ಕಾರ್​ನಲ್ಲಿ ಹಣ ಪತ್ತೆಯಾಗಿದ್ದು, ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. 

ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ FIR

ಬೆಂಗಳೂರು: ಅಕ್ರಮವಾಗಿ ಕುಕ್ಕರ್​​​ಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದಡಿ ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ವಿರುದ್ಧ ನಗರದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್​ಆರ್​ಐ ದಾಖಲು ಮಾಡಲಾಗಿದೆ. ಮಾ.28ರಂದು ಅನಿಲ್ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 504 ಕುಕ್ಕರ್​​​ಗಳನ್ನು ಜಪ್ತಿ ಮಾಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ವರಲಕ್ಷ್ಮಮ್ಮ ದೂರು ನೀಡಿದ್ದರು.

ಇದನ್ನೂ ಓದಿ: ಚುನಾವಣೆ ದಿನಾಂಕ ಘೋಷಣೆ ಮೊದಲೇ ಕರ್ನಾಟಕದಲ್ಲಿ 15 ಕೋಟಿ ರೂ. ನಗದು, 57.72 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ, 1,985 FIR

ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.5 ಲಕ್ಷ ರೂ. ಹಣ ಕಾರಿನಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ಧರ್ಮಸ್ಥಳ, ಕಟೀಲು ದೇವಾಲಯ ಹುಂಡಿಗೆ ಹಾಕಲು ಹಣ ತಂದಿರುವುದಾಗಿ ಪಾವಗಡ ಮೂಲದ ವೈದ್ಯ ಹೇಳಿದ್ದಾರೆನ್ನಲಾಗುತ್ತಿದೆ.

₹40 ಲಕ್ಷ ಮೌಲ್ಯದ ವಿವಿಧ ಬಗೆಯ ವಸ್ತುಗಳು ಪತ್ತೆ

ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನಲೆ ಮತದಾರರಿಗೆ ಗಿಫ್ಟ್ ಹಂಚಿಕೆ ವಿಚಾರವಾಗಿ ಮಾರ್ಚ್ 27 ರಂದು ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಪೊಲೀಸರು ಹಾಗೂ ಕಂದಾಯ ಇಲಾಖೆ ಆಧಿಕಾರಿಗಳ ದಾಳಿ ಮಾಡಿದ್ದರು. ಇಂದು ಮತ್ತೆ ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ವಿವಿಧ ಬಾಕ್ಸ್​ಗಳಲ್ಲಿ ಪ್ಯಾಕ್ ಮಾಡಿರುವ ರೀತಿಯಲ್ಲಿ ಗಡಿಯಾರ ಹಾಗೂ ಟೀ ಶರ್ಟ್ ಸಿಕ್ಕಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:31 pm, Sat, 1 April 23