ಚುನಾವಣೆ ದಿನಾಂಕ ಘೋಷಣೆ ಮೊದಲೇ ಕರ್ನಾಟಕದಲ್ಲಿ 15 ಕೋಟಿ ರೂ. ನಗದು, 57.72 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ, 1,985 FIR
ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆದಿದ್ದು, ಚುನಾವಣೆ ದಿನಾಂಕ ಘೋಷಣೆ ಮೊದಲೇ ಕರ್ನಾಟಕದಲ್ಲಿ ಕೋಟಿಗಟ್ಟಲೇ ಹಣ ಜಪ್ತಿ ಮಾಡಲಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಾಂಕ ನಿಗದಿಯಾಗಿದೆ. ನಿನ್ನೇ ಅಷ್ಟೇ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಇದೇ ಮೇ 10ರಂದು ಮತದಾನ ನಡೆಯಲಿದ್ದು, ಮೇ.13ರಂದು ಮತ ಎಣಿಕೆ ನಡೆಯಲಿದೆ. ಇನ್ನು ರಾಜ್ಯದಲ್ಲಿ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಮತದಾರರ ಓಲೈಕೆಗಾಗಿ ಹಣ, ಅಡುಗೆ ಸಾಮಾಗ್ರಿಗಳು, ಸೀರೆ ಸೇರಿದಂತೆ ನಾನಾ ಗಿಫ್ಟ್ಗಳನ್ನು ಹಂಚಿದ್ದಾರೆ. ಅಲ್ಲದೇ ದಾಖಲೆಗಳಿಲ್ಲದ ಕೋಟ್ಯಾನುಗಟ್ಟಲೇ ಹಣ ಪತ್ತೆಯಾಗಿದೆ. ಹೌದು… ರಾಜ್ಯದ ವಿಧಾನಸಭಾ ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಟ್ಟಿರುವ ಚುನಾವಣಾ ಆಯೋಗವು ಇದುವರೆಗೆ 15 ಕೋಟಿ ರೂ. ನಗದು ಸೇರಿದಂತೆ 57.72 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಚುನಾವಣಾ ಅಕ್ರಮಗಳ ಮೇಲೆ ನಿಗಾವಹಿಸಲು ವಿವಿಧ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಇಲಾಖೆಯು 34.36 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ. 14.24 ಕೋಟಿ ರೂ. ನಗದು, 530 ಕೆಜಿ ಮಾದಕ ವಸ್ತುಗಳು, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದೆ. ಇನ್ನು ಅಬಕಾರಿ ಇಲಾಖೆಯು 6.84 ಕೋಟಿ ರೂ. ಮೌಲ್ಯದ 1,38,847 ಲೀಟರ್. ಮದ್ಯ ಮತ್ತು 43 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ. ಆದಾಯ ತೆರಿಗೆ ಇಲಾಖೆಯು 1.16 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದು, ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 5.02 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ.
ಡಿಆರ್‌ಐನಿಂದ 1.03 ಕೋಟಿ ರೂ. ಮೌಲ್ಯದ ವಸ್ತುಗಳು, ಎನ್‌ಸಿಬಿಯಿಂದ 57.15 ಲಕ್ಷ ರು. ಮೌಲ್ಯದ ವಸ್ತುಗಳು, ಸಿಬಿಐಸಿಯಿಂದ 3.97 ಕೋಟಿ ರೂ. ಮೌಲ್ಯದ ವಸ್ತುಗಳು ಮತ್ತು ರಾಜ್ಯ ಸಿವಿಲ್ ಏವಿಯೇಷನ್ ವತಿಯಿಂದ 69.40 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮಗಳಿಗೆ ಸಂಬಂಧಿಸಿದಂತೆ ಮಾರ್ಚ್ 9 ರಿಂದ ಮಾರ್ಚ್ 27 ರವರೆಗೆ ಒಟ್ಟು 1,985 ಎಫ್‌ಐಆರ್‌ಗಳು ದಾಖಲಾಗಿವೆ.
ರಾಜ್ಯದ ವಿಧಾನಸಭಾ ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಟ್ಟಿರುವ ಚುನಾವಣಾ ಆಯೋಗವು 2,040 ಫ್ಲೈಯಿಂಗ್ ಸ್ಕ್ವಾಡ್, 2,605 ಸ್ಟ್ಯಾಟಿಕ್ ಪರಿವೀಕ್ಷಣಾ ತಂಡ, 266 ವಿಡಿಯೋ ವೀಕ್ಷಣೆ ತಂಡಗಳು, 631 ವಿಡಿಯೋ ಕಣ್ಗಾವಲು ತಂಡ ಮತ್ತು 225 ಲೆಕ್ಕಪರಿಶೋಧಕ ತಂಡ ರಚಿಸಲಾಗಿದೆ ಮತ್ತು 942 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇನ್ನು ರಾಜಕೀಯ ಪಕ್ಷಗಳು ಮತದಾರರಿಗೆ ಸರಕು ಮತ್ತು ನಗದು ಹಂಚುವುದನ್ನು ತಡೆಯಲು ಅಂತಾರಾಜ್ಯ ಗಡಿಗಳಲ್ಲಿ ಒಟ್ಟು 171 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಇನ್ನಷ್ಟು ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ