ಕೊಪ್ಪಳ, ಜ.6: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಒಂದು ವರ್ಷದ ನಂತರ ಸರ್ಕಾರ ಪತನವಾಗಲಿದೆ, ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ವಿಪಕ್ಷ ಬಿಜೆಪಿ ಹೇಳುತ್ತಲೇ ಇದೆ. ಈ ನಡುವೆ ಮಂತ್ರಿಗಿರಿಗಾಗಿ ಫೈಟ್ ಮಾಡುತ್ತಿದ್ದ ಯಲಬುರ್ಗಾ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಜುಲೈ ತಿಂಗಳಲ್ಲಿ ಸಚಿವ ಸಂಪುಟ ಪುನರ್ರಚನೆಯಾಗುವ ಬಗ್ಗೆ ಸುಳಿವು ನೀಡಿದ್ದು, ಸಚಿವ ಸ್ಥಾನ ಸಿಗುವುದಾಗಿ ಹೇಳಿಕೆ ನೀಡಿದ್ದಾರೆ.
ಸಚಿವ ಸ್ಥಾನ ಸಿಗದ ಹಿನ್ನೆಲೆ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ರಾಯರೆಡ್ಡಿ ಅವರನ್ನು ಇತ್ತೀಚೆಗೆ ಆರ್ಥಿಕ ಸಲಹೆಗಾರರಾಗಿ ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು. ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ಬಳಿಕ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದ ಅಭಿನಂಧನಾ ಕಾರ್ಯಕ್ರಮದಲ್ಲಿ ಬಸವರಾಜ ರಾಯರೆಡ್ಡಿ ಮಾತನಾಡಿದರು.
ಜುಲೈನಲ್ಲಿ ನನ್ನ ಮಂತ್ರಿ ಮಾಡುತ್ತೇನೆ ಎಂದು ಮುಖ್ಯಂಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾರಣಾಂತರದಿಂದ ಸದ್ಯಕ್ಕೆ ನನ್ನನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ. ನಿನ್ನ ಪೈನಾನ್ಸ್ ನೀತಿ ನೋಡಿಕೊಂಡು ಮಂತ್ರಿ ಮಾಡುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಹಿಂದುಳಿದ ದಲಿತ ಮಠಾಧೀಶರ ನಿಯೋಗದಿಂದ ಸಿಎಂ ಸಿದ್ದರಾಮಯ್ಯ ಭೇಟಿ: ಜಾತಿ ಗಣತಿ ವರದಿ ಜಾರಿಗೆ ಒತ್ತಾಯ
ಲೋಕಸಭೆ ಚುನಾವಣೆ ನಂತರ ಮಂತ್ರಿ ಆಗಲಿ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ್ದರಿಂದ ನನ್ನನ್ನು ಮಂತ್ರಿ ಮಾಡಲಿಲ್ಲ. ನಾನು ಇಲ್ಲದೇ ಮಂತ್ರಿ ಮಂಡಲ ವಿಸ್ತರಣೆ ಮಾಡುವ ಮನಸು ಸಿದ್ದರಾಮಯ್ಯರಿಗೆ ಇರಲಿಲ್ಲ. ಸರ್ಕಾರ ರಚನೆ ಸಮಯದಲ್ಲಿ ಮಂತ್ರಿ ಆಗಿ ಅಂತ ನನಗೆ ಹೇಳಿದ್ದರು. ನನಗೆ ಅರಣ್ಯ ಪರಿಸರ ಮತ್ತು ಯೋಜನಾ ಇಲಾಖೆ ಖಾತೆಗಳನ್ನು ಕೂಡಾ ಕೊಟ್ಟಿದ್ದರು. ಯೋಜನಾ ಇಲಾಖೆಯನ್ನ ನಾನೇ ಕೇಳಿ ತಗೊಂಡಿದ್ದೆ. ಕೆಲವು ರಾಜಕಿಯ ಬೆಳವಣಿಗೆಯಿಂದ ನನ್ನ ಮಂತ್ರಿ ಮಾಡಲಿಕ್ಕೆ ಆಗಲಿಲ್ಲ ಎಂದರು.
ರಾಜಕಿಯದಲ್ಲಿ ಕೆಲವೊಂದು ಸಲ ಹಿರಿಯ ಕಿರಿಯ ಅನ್ನೊದು ನಡೆಯಲ್ಲ. ಸುರ್ಜೆವಾಲಾ ಅವರು ನನ್ನನ್ನು ಕರೆದು ಬೋರ್ಡ ಕಮೀಟಿ ಚೇರ್ಮನ್ ಆಗು ಅಂದಿದ್ದರು. ಬೋರ್ಡ ಕಮೀಟಿ ಅದ್ಯಕ್ಷ ಆದರೆ ಜನರಿಗೆ ನೇರವಾಗಿ ಕೆಲಸ ಮಾಡಲು ಆಗಲ್ಲ. ಹೆಚ್ಚು ಅಭಿವೃದ್ಧಿ ಮಾಡಲು ಆಗಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.
ನಿಗಮ ಮಂಡಳಿ ನೇಮಕ ಇನ್ನೂ ಕಗ್ಗಂಟಾಗಿ ಉಳಿದಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹಿರಿಯ ರೆಬೆಲ್ ಶಾಸಕರಾದ ಬಸವರಾಜ್ ರಾಯರೆಡ್ಡಿ, ಬಿ.ಆರ್ ಪಾಟೀಲ್ ಹಾಗೂ ಆರ್.ವಿ ದೇಶಪಾಂಡೆ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿಗೆ ಮುಖ್ಯಮಂತ್ರಿಗೆ ಆರ್ಥಿಕ ಸಲಹೆಗಾರ, ಆಳಂದ ಶಾಸಕ ಬಿ.ಆರ್ ಪಾಟೀಲ್ಗೆ ಸಿಎಂ ಸಲಹೆಗಾರರ ಹಾಗೂ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆಗೆ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲು ಮುಂದಾದಾಗ ಈ ಮೂವರು ಶಾಸಕರು ನಿರಾಕರಿಸಿದ್ದರು. ಇವರನ್ನು ಮನವೋಲಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ಯಾವುದೇ ನಿಗಮ ಮಂಡಳಿ ಸ್ಥಾನ ಬೇಡ, ಕೊಡುವುದಾದರೆ ಮಂತ್ರಿ ಸ್ಥಾನ ನೀಡಿ ಎಂದು ರಾಯರೆಡ್ಡಿ ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 pm, Sat, 6 January 24