ಕೊಪ್ಪಳ, ಡಿಸೆಂಬರ್ 20: ಕೊಪ್ಪಳ (Koppal) ಜಿಲ್ಲೆಯ ಯಲಬುರ್ಗಾ (Yelburga) ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಕೆರೆ ಕಾಮಗಾರಿಯಲ್ಲಿ ಲೂಟಿ ಆರೋಪ ಕೇಳಿಬಂದಿದೆ. ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಕೆರೆ ಕಟ್ಟೆ ನಿರ್ಮಾಣ ಮಾಡಲಾಗಿದೆ. ಆದರೆ, ಕೆರೆ ತುಂಬುತ್ತಿದ್ದಂತೆಯೇ ಕಾಮಗಾರಿಯ ಅಸಲಿ ಬಣ್ಣ ಬಯಲಾಗುತ್ತಿದೆ. ಸದ್ಯ ಕೆರೆ ಕಟ್ಟೆ ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ವರ್ಷದ ಹಿಂದಷ್ಟೇ ಒಂದು ಕೋಟಿ ತೊಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಕಟ್ಟೆ ನಿರ್ಮಾಣ ಮಾಡಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಕಟ್ಟೆ ನಿರ್ಮಾಣ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಕೆರೆ ದಂಡೆ ಒಡೆದು ಹೋಗೋ ಸ್ಥಿತಿಯಲ್ಲಿದೆ. ಕೆರೆ ಕಟ್ಟೆಯ ಹಲವಡೆ ಬಿರುಕು ಕಾಣಿಸಿದ್ದು, ನೀರು ಸೋರಿ ಹೋಗುತ್ತಿದೆ.
ಇದೀಗ ಸರಿಯಾಗಿ ಕಾಮಗಾರಿ ಮಾಡದೇ ಹಣ ನುಂಗಿ ಹಾಕಿರೋ ಆರೋಪ ಸಣ್ಣ ನೀರಾವರಿ ಇಲಾಖೆ ಮೇಲೆ ಕೇಳಿಬಂದಿದೆ. ತರಲಕಟ್ಟಿ ಗ್ರಾಮದಲ್ಲಿ ನೂರಾ ಹತ್ತು ಎಕರೆ ವಿಸ್ತೀರ್ಣದಲ್ಲಿ ಕೆರೆ ಇದ್ದು, ಪ್ರತಿನಿತ್ಯ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಇದನ್ನೂ ಓದಿ: ಕೊಪ್ಪಳ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ; ಇದ್ದೊಬ್ಬ ಮಗನನ್ನು ಕಳೆದುಕೊಂಡು ಕಂಗಾಲಾದ ಕುಟುಂಬ
ಕೆರೆಗೆ ನೀರು ತುಂಬಿಸೋ ಯೋಜನೆಯಲ್ಲಿ ಇದೀಗ ನೀರು ತುಂಬಿಸಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ ನೀರು ತುಂಬಿಸಲಾಗುತ್ತಿದೆ. ಇದೀಗ ಕೆರೆ ತುಂಬಿದ್ದರೂ ಗ್ರಾಮದ ಜನರಿಗೆ ಆತಂಕ ಎದುರಾಗಿದೆ.
ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ