ಆಫೀಸ್ ಸಮಯ​​ ಆರಂಭವಾದರೂ ಬಾರದ ಅಧಿಕಾರಿಗಳು: ಕೊಪ್ಪಳದ RTO ಕಚೇರಿ ಫುಲ್​​ ಖಾಲಿ ಖಾಲಿ

ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30ಕ್ಕೆ ಬದಲಾಯಿಸಲಾಗಿದೆ. ಆದರೆ, ಕೊಪ್ಪಳದ RTO ಕಚೇರಿಯಲ್ಲಿ 8 ಗಂಟೆ ಆದರೂ ಅಧಿಕಾರಿಗಳು ಗೈರು ಹಾಜರಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಫೀಸ್ ಸಮಯ​​ ಆರಂಭವಾದರೂ ಬಾರದ ಅಧಿಕಾರಿಗಳು: ಕೊಪ್ಪಳದ RTO ಕಚೇರಿ ಫುಲ್​​ ಖಾಲಿ ಖಾಲಿ
RTO ಕಚೇರಿ ಫುಲ್​​ ಖಾಲಿ ಖಾಲಿ
Image Credit source: Tv9 Kannada
Edited By:

Updated on: Apr 01, 2026 | 10:37 AM

ಕೊಪ್ಪಳ, ಏಪ್ರಿಲ್​​ 01: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಕಿತ್ತೂರು ಕರ್ನಾಟಕದ 2 ಮತ್ತು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದರ ಅನ್ವಯ 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಸ್ತುತ ಇರುವ ಕಚೇರಿ ವೇಳಾಪಟ್ಟಿಯ ಬದಲಾಗಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಹೀಗಿದ್ದರೂ ಕೆಲ ಅಧಿಕಾರಿಗಳು ಮಾತ್ರ ಆದೇಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ಹೊಸ ಆದೇಶದ ಅನ್ವಯ ಬೆಳಿಗ್ಗೆ 8 ಗಂಟೆಯಿಂದಲೇ ಸರ್ಕಾರಿ ಕಚೇರಿ ಆರಂಭವಾಗಿದ್ದರೂ ಕೊಪ್ಪಳದ RTO ಕಚೇರಿಯಲ್ಲಿ ಮಾತ್ರ ಸಮಯ 9.30 ಕಳೆದರೂ ಅಧಿಕಾರಿಗಳ ಪತ್ತೆ ಇರಲಿಲ್ಲ.

ಹೌದು, ಸರ್ಕಾರದ ಆದೇಶದ ಅನ್ವಯ ಕೊಪ್ಪಳ ವ್ಯಾಪ್ತಿಯ ಸರ್ಕಾರಿ ಕಚೇರಿಗಳು ಇಂದಿನಿಂದ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿವೆ. ಸಮಯ ಬದಲಾವಣೆ ಆಗಿದ್ದರೂ ನಿಗದಿತ ವೇಳೆಗೆ ಕಚೇರಿಗೆ ಬಾರದೆ ಸಾರಿಗೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಕೆಲ ಕಾರ್ಯಗಳಿಗಾಗಿ ಇಲಾಖಾ ಕಚೇರಿಗೆ ಬಂದ ಜನರಿಗೆ ಖಾಲಿ ಕುರ್ಚಿಗಳ ದರ್ಶನವಾಗಿದ್ದು, ಕೆಲಸದ ಸಮಯದ ಕಡಿತದಿಂದಾಗಿ ಸಾರ್ವಜನಿಕ ಸೇವೆಗೆ ಯಾವುದೇ ತೊಂದರೆ ಆಗದಂತೆ ಮುತುವರ್ಜಿ ವಹಿಸಬೇಕಿದ್ದ ಅಧಿಕಾರಿಗಳ ಬೇಜವಾಬ್ದಾರಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರಿ ಕಚೇರಿ ಸಮಯ ಬದಲಾವಣೆ; ಬೇಸಿಗೆಯಲ್ಲಿ ನೌಕರರಿಗೆ, ಸಾರ್ವಜನಿಕರಿಗೆ ರಿಲೀಫ್

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದ ಹಿನ್ನೆಲೆ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ ಕಚೇರಿ ಸಮಯ ಬದಲಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿತ್ತು. ಬೆಳಗಾವಿ ವಿಭಾಗದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ ವಿಭಾಗಕ್ಕೆ ಒಳಪಡುವ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರ ತನಕ ನಿಗದಿ ಮಾಡಿತ್ತು. ಮೇ ತಿಂಗಳ ಅಂತ್ಯದವರೆಗೆ ಸರ್ಕಾರಿ ಕಚೇರಿಗಳ ಈ ಸಮಯ ಬದಲಾವಣೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us