ವಡಕಿ ಗ್ರಾಮದಲ್ಲಿ ವಿಶೇಷ ಜಾತ್ರೆ; ರಥದ ಮೇಲಿಂದ ಮಕ್ಕಳನ್ನು ಎಸೆದು, ಮಹಿಳೆಯರೇ ಎಳಿತಾರೆ ರಥ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 06, 2024 | 7:42 PM

ರಾಜ್ಯದಲ್ಲಿ ಅನೇಕ ರೀತಿಯ ಜಾತ್ರೆಗಳು ನಡೆಯುತ್ತವೆ. ಆದರೆ, ಕೊಪ್ಪಳ ಜಿಲ್ಲೆಯ ಕನಕಗಿರಿ(Kanakagiri) ತಾಲೂಕಿನ ವಡಕಿ ಗ್ರಾಮದಲ್ಲಿ ನಡೆಯುವ ಜಾತ್ರೆಯಲ್ಲಿನ ರಥವನ್ನು ಮಹಿಳೆಯರೇ ಎಳೆಯುತ್ತಾರೆ. ಇದು ಒಂದು ವಿಶೇಷವಾದ್ರೆ, ಇನ್ನೊಂದಡೆ ರಥದ ಮೇಲಿಂದ ಪುಟ್ಟ ಪುಟ್ಟ ಮಕ್ಕಳನ್ನು ಮೇಲಿಂದ ಕೆಳಗೆ ಎಸೆಯಲಾಗುತ್ತದೆ.

ಕೊಪ್ಪಳ, ಮಾ.06: ರಾಜ್ಯದಲ್ಲಿ ಅನೇಕ ಕಡೆ ವಿಭಿನ್ನ ಜಾತ್ರೆಗಳು ನಡೆಯುತ್ತವೆ. ಅದರಂತೆ ಕೊಪ್ಪಳ ಜಿಲ್ಲೆಯ ಕನಕಗಿರಿ (Kanakagiri) ತಾಲೂಕಿನ ವಡಕಿ ಗ್ರಾಮದಲ್ಲಿ ನಡೆಯುವ ಜಾತ್ರೆಯಲ್ಲಿನ ರಥವನ್ನು ಮಹಿಳೆಯರೇ ಎಳೆಯುತ್ತಾರೆ. ಇದು ಒಂದು ವಿಶೇಷವಾದ್ರೆ, ಇನ್ನೊಂದೆಡೆ ರಥದ ಮೇಲಿಂದ ಪುಟ್ಟ ಪುಟ್ಟ ಮಕ್ಕಳನ್ನು ಮೇಲಿಂದ ಕೆಳಗೆ ಎಸೆಯಲಾಗುತ್ತದೆ. ಹರಕೆ ಹೊತ್ತ ಹೆತ್ತವರು ಸ್ವಯಂಪ್ರೇರಣೆಯಿಂದ ಮಕ್ಕಳ ಶ್ರಯೋಭಿವೃದ್ದಿಗಾಗಿ ರಥದ ಮೇಲಿಂದ ಮಕ್ಕಳನ್ನು ಬಿಟ್ಟು ಹರಕೆ ತೀರಿಸುತ್ತಾರೆ.

ರಥೋತ್ಸವದಲ್ಲಿ ರಥದ ಮೇಲಿಂದ ಮಕ್ಕಳನ್ನು ಎಸೆಯುವ ಹರಕೆ ತೀರಿಸಿದ ಹೆತ್ತವರು

ಕೆಲವಡೇ ಕುರಿ, ಕೋಳಿಗಳನ್ನು ಮೇಲಿಂದ ಎಸೆಯುವುದನ್ನು ನೋಡಿದ್ದೇವೆ. ಆದ್ರೆ, ವಡಕಿ ಗ್ರಾಮದಲ್ಲಿ ರಥದ ಮೇಲಿಂದ ಮಕ್ಕಳನ್ನು ಎಸೆಯುತ್ತಾರೆ. ಹೌದು, ಕನಕಗಿರಿ ತಾಲೂಕಿನ ವಡಕಿ ಗ್ರಾಮದ ಲಕ್ಷ್ಮಿದೇವಿ ಜಾತ್ರೆ ಸುಪ್ರಸಿದ್ದ ಜಾತ್ರೆಯಾಗಿದ್ದು, ಈ ಜಾತ್ರೆಗೆ, ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ನೆರೆಯ ಆಂಧ್ರ ಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಜಾತ್ರೆಗೆ ಬಂದವರು ಲಕ್ಷ್ಮಿದೇವಿಯ ದರ್ಶನ ಪಡೆಯುತ್ತಾರೆ. ಇನ್ನು ನಿನ್ನೆ ನಡೆದ ಜಾತ್ರಾ ರಥೋತ್ಸವದ ಸಮಯದಲ್ಲಿ ಅನೇಕ ಪಾಲಕರು, ತಮ್ಮ ಮಕ್ಕಳನ್ನು ರಥದ ಮೇಲಿಂದ ಎಸೆಯುವ ಹರಕೆ ತೀರಿಸಿದರು.

ಇದನ್ನೂ ಓದಿ:ರಾಯಚೂರು: ಗ್ರಾಮ ದೇವಿ ಜಾತ್ರೆಗೆ ಬಂದಿದ್ದವನ ಹತ್ಯೆ! ಪಾರ್ಟಿಗೆಂದು ಹೋದವ ಮೂರು ದಿನದ ಬಳಿಕ ಶವವಾಗಿ ಪತ್ತೆ

ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿ, ಅವರಿಗೆ ಬರುವ ಸಂಕಷ್ಟಗಳು ದೂರವಾಗಲಿ, ಉತ್ತಮ ಆರೋಗ್ಯ ಭಾಗ್ಯ ಸಿಗಲಿ ಎಂದು ತಮ್ಮ ಮಕ್ಕಳನ್ನು ರಥದ ಮೇಲಿಂದ ಬಿಡುತ್ತೇವೆ ಎಮದು ಹರಕೆ ಹೊತ್ತುಕೊಳ್ಳುತ್ತಾರಂತೆ. ಅದರಂತೆ, ರಥೋತ್ಸವದ ದಿನ ಬಂದು ರಥದ ಮೇಲಿರುವ ದೇವಸ್ಥಾನದ ಸಿಬ್ಬಂಧಿ ಕೈಗೆ ತಮ್ಮ ಮಕ್ಕಳನ್ನು ಕೊಟ್ಟು, ದೇವಿಯ ದರ್ಶನ ಕೊಡಿಸಿ, ಮಕ್ಕಳನ್ನು ಎಸೆಯುವಂತೆ ಹೇಳುತ್ತಾರೆ. ಕೆಳಗೆ ನಿಂತು ತಾವು ಮಕ್ಕಳನ್ನು ಹಿಡಿದುಕೊಳ್ಳುತ್ತಾರೆ. ಇದು ಮೂಡನಂಬಿಕೆ ಅನಿಸಿದರು ಕೂಡ ನೂರಾರು ವರ್ಷಗಳಿಂದ ಇಂತಹದೊಂದು ಸಂಪ್ರದಾಯ ಬಂದಿದ್ದು, ಅದರಿಂದ ತಮಗೆ ಒಳ್ಳೆಯದಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇನ್ನು ವಡಕಿ ಗ್ರಾಮದಲ್ಲಿರುವ ರಥ ಪುಟ್ಟ ರಥವಾಗಿರೋದರಿಂದ, ಹೆಚ್ಚು ಎತ್ತರದಲ್ಲಿಲ್ಲ. ಕೇವಲ ಹತ್ತು ಅಡಿ ಎತ್ತರದಿಂದ ಮಕ್ಕಳನ್ನು ಎಸೆಯುವುದರಿಂದ ಮಕ್ಕಳನ್ನು ಕೆಳಗೆ ಇದ್ದವರು ನೆಲಕ್ಕೆ ಬೀಳದ ಹಾಗೆ ಹಿಡಿದುಕೊಳ್ಳುತ್ತಾರೆ. ಹೀಗಾಗಿ ಇಲ್ಲಿವರೆಗೆ ಯಾವುದೇ ಅನಾಹುತವಾಗಿಲ್ಲ ಅಂತಾರೆ ಗ್ರಾಮಸ್ಥರು.

 

ಮಹಿಳೆಯರಿಂದಲೇ ನಡೆಯುವ ರಥೋತ್ಸವ

ಇನ್ನು ವಡಕಿ ಗ್ರಾಮದ ಲಕ್ಷ್ಮಿದೇವಿ ಜಾತ್ರೆಯ ಮತ್ತೊಂದು ವಿಶೇಷ ಅಂದ್ರೆ, ಮಹಿಳೆಯರೇ ರಥವನ್ನು ಎಳೆಯುವುದು.ಹೌದು, ನೂರಾರು ವರ್ಷಗಳಿಂದಲೂ ಕೂಡ ಲಕ್ಷ್ಮಿದೇವಿ ಜಾತ್ರೆಯ ರಥವನ್ನು ಮಹಿಳೆಯರೇ ಎಳೆಯುತ್ತಾರೆ. ಪುರುಷರು ಮಹಿಳೆಯರಿಗೆ ಸಹಾಯಕರಾಗಿ ಮಾತ್ರ ಕೆಲಸ ಮಾಡುತ್ತಾರೆ. ಜಾತಿ, ಧರ್ಮ ವೆನ್ನದೇ ಸರ್ವಧರ್ಮದ ಮಹಿಳೆಯರು ಸೇರಿಕೊಂಡು ಲಕ್ಷ್ಮಿದೇವಿಕಿ ಜೈ ಅಂತ ಜೈಕಾರ ಹಾಕುತ್ತಾ ಗ್ರಾಮದಲ್ಲಿ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ಲಕ್ಷ್ಮಿದೇವಿ ರಥವನ್ನು ಎಳೆಯುತ್ತಾರೆ. ವಡಕಿ ಜಾತ್ರೆ ಮಹಿಳೆಯರೇ ರಥೋತ್ಸವ ಎಳೆಯುವ ಮೂಲಕ ಎಷ್ಟು ಪ್ರಸಿದ್ದಿಯನ್ನು ಪಡೆದಿದೆಯೋ, ಅಷ್ಟೇ ಮಕ್ಕಳನ್ನು ರಥದ ಮೇಲಿಂದ ಎಸೆಯುವುದು ಕೂಡ ವಿಶೇಷ. ಆದ್ರೆ, ಮಕ್ಕಳನ್ನು ಎಸೆಯುವುದು, ಮೌಢ್ಯವೆಂದು ಅನೇಕರು ಹೇಳುತ್ತಾರೆ. ಆದ್ರೆ, ಹೆತ್ತವರು ಮಾತ್ರ ಇದು ತಮ್ಮ ಭಕ್ತಿ ಅಂತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Wed, 6 March 24