ಕೊಪ್ಪಳ: ನಮ್ಮ ಕಾಲಿಗೆ ಮುಳ್ಳು ಚುಚ್ಚಿದರೆ ಸಾಕು, ಅಯ್ಯೋ ನೋವು ಅಂತೀವಿ. ಆದ್ರೆ ಇಲ್ಲಿ ಮೈ ತುಂಬಾ ಮುಳ್ಳು ಚುಚ್ಚಿದರೂ ಏನು ಆಗುವುದಿಲ್ಲ. ಅಷ್ಟೇ ಅಲ್ಲ ಬೆಳಗಾಗುವುದರಲ್ಲಿ ಆ ನೋವೆಲ್ಲ ಮಾಯವಾಗಿ ಬಿಟ್ಟಿರುತ್ತದೆ.
ಕೊಪ್ಪಳದಲ್ಲೊಂದು ಆಚರಣೆಯಿದೆ. ಇಲ್ಲಿ ಮುಳ್ಳುಗಳ ರಾಶಿ ಮೇಲೆ ಭಕ್ತರು ಕುಣಿದಾಡಿ ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ಮುಳ್ಳುಗಳನ್ನೇ ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಆದ್ರೆ ಅಚ್ಚರಿಯಂದ್ರೆ ಮುಳ್ಳುಗಳ ಮೇಲೆ ಎಷ್ಟೇ ಕುಣಿದಾಡಿದ್ರು ಭಕ್ತರಿಗೆ ಮಾತ್ರ ಕೊಂಚವೂ ನೋವು ಆಗುವುದಿಲ್ಲ. ಇದೇ ಈ ದೇವರ ಮಹಿಮೆ.
ಕೊಪ್ಪಳದ ಲೇಬಗೇರಿ ಗ್ರಾಮದಲ್ಲಿ ನಡೆದ ಆಂಜನೇಯನ ಕಾರ್ತಿಕೋತ್ಸವದಲ್ಲಿ ಭಕ್ತರು ಮುಳ್ಳುಗಳ ಮೇಲೆ ನಡೆದಾಡಿ, ಮಲಗಿ, ಕುಣಿದು ಕುಪ್ಪಳಿಸಿ ಮುಳ್ಳು ಜಾತ್ರೆ ನೆರವೇರಿಸಿದ್ದಾರೆ. ಪ್ರತಿವರ್ಷ ಕಾರ್ತಿಕಮಾಸದ ವೇಳೆಯಲ್ಲಿ ನಡೆಯುವ ಆಂಜನೇಯನ ಕಾರ್ತಿಕೋತ್ಸವದಲ್ಲಿ, ಮುಳ್ಳು ಹಾರುವ ಕಾರ್ಯಕ್ರಮ ನಡೆಯುತ್ತೆ. ತಲೆ ತಲಾಂತರದಿಂದಲೂ ಈ ಆಚರಣೆ ಮಾಡ್ತಿದ್ದು, ಇಂದಿಗು ಕೂಡ ಅದನ್ನ ಮುಂದುವರಿಸಿಕೊಂಡು ಬರಲಾಗಿದೆ.
ಅಂದಹಾಗೆ, ಆಂಜನೇಯನಲ್ಲಿ ಬೇಡಿಕೊಂಡು ಮುಳ್ಳಿನ ಮೇಲೆ ಹಾರಿದ್ರೆ, ಅವರು ಅಂದುಕೊಂಡಿದ್ದೆಲ್ಲ ಈಡೇರುತ್ತಂತೆ. ಹೀಗಾಗೇ, ಮುಳ್ಳಿನ ಮೇಲೆ ಹನುಮನಂತೆ ಹಾರುತ್ತಾರೆ. ಇನ್ನು, ಈ ಹಬ್ಬಕ್ಕಾಗಿ ಬೆಳ್ಳಗ್ಗೆಯೇ ಗ್ರಾಮಸ್ಥರು ಕಾಡಿಗೆ ಹೋಗ್ತಾರಂತೆ. ಅಲ್ಲಿ, ಕೈಯಿಂದಲೇ ಕಾರಿ ಗಿಡಗಳನ್ನು ಕಿತ್ತು ತರುತ್ತಾರೆ. ನಂತರ, ಅವುಗಳನು ಪ್ರಮುಖ ಬೀದಿಗಳಲ್ಲಿ ಹಾಕಿ, ಅದರ ಮೇಲೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ಹಾರುತ್ತಾರೆ. ಹೀಗೆ, ಹಾರಿದಾಗ ಗಾಯವಾದ್ರೂ, ಅವ್ರಿಗೆ ಏನೂ ಆಗಲ್ವಂತೆ. ರಾತ್ರಿ ಕರಿ ಕಂಬಳಿ ಮೇಲೆ ಮಲಗಿದ್ರೆ, ಮುಳ್ಳುಗಳೆಲ್ಲ ಹೊರಬರುತ್ತವಂತೆ.
ಗ್ರಾಮದ ಎರಡು ಕಡೆಗಳಲ್ಲಿ ಮುಳ್ಳು ಹಾರುವ ಕಾರ್ಯಕ್ರಮ ನಡೆಯುತ್ತದೆ. ಇದನ್ನು ನೋಡಿದರೆ ಎಂತವರ ಮೈ ಕೂಡ ಜಮ್ಮು ಅನ್ನುತ್ತೆ. ಮುಳ್ಳಿನ ಮೇಲೆ ಹಾರಿದವ್ರು, ಹಾಸಿಗೆಯಂತೆ ಮಲಗೋದು ನಿಜಕ್ಕೂ ಅಚ್ಚರಿಯೇ ಸರಿ.
ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಕೊಪ್ಪಳ
ಇದನ್ನೂ ಓದಿ: ಪ್ರತ್ಯಂಗೀರಾದೇವಿ ಸನ್ನಿಧಿಯಲ್ಲಿ ನಡೆಯುತ್ತದೆ ಒಣ ಮೆಣಸಿನಕಾಯಿ ಹೋಮ; ವಿಶೇಷ ಪೂಜೆಯಲ್ಲಿ ಶಬರಿಮಲೈ ಪ್ರಧಾನ ಅರ್ಚಕರು ಭಾಗಿ