ಕೊಪ್ಪಳ, ಅ.10: ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟೂರು ಕ್ಯಾಂಪ್, ರಾಯಲ್ ಕ್ಯಾಂಪ್, ತಾಮ್ರಪಲ್ಲಿ ಕ್ಯಾಂಪ್ ನಲ್ಲಿ ಸರಿಸುಮಾರು ಸಾವಿರಕ್ಕೂ ಹೆಚ್ಚು ಜನರು ಇದ್ದಾರೆ. ಈ ಮೂರು ಕ್ಯಾಂಪ್ ನಲ್ಲಿ ಯಾರಾದ್ರು ಮೃತಪಟ್ಟರೆ, ಮಣ್ಣು ಮಾಡಲು ಸ್ಮಶಾನವಿಲ್ಲ (cemetery). ಅನೇಕ ವರ್ಷಗಳಿಂದ ಮುಷ್ಟೂರು ಕ್ಯಾಂಪ್ ಹೊರವಲಯದಲ್ಲಿರುವ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಕಳೆದ ನಾಲ್ಕು ದಶಕಗಳಿಂದ ಗ್ರಾಮದ ಜನರು ಇಲ್ಲಿ ವಾಸವಾಗಿದ್ದು, ಸರ್ಕಾರಿ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಇನ್ನು ಒಂದು ಎಕರೆ ಮೂವತ್ಮೂರು ಗುಂಟೆ ಸರ್ಕಾರಿ ಜಾಗವಿದ್ದು, ಅದನ್ನು ಪಹಣಿಯಲ್ಲಿ ಸರ್ಕಾರಿ ಪಡ ಅಂತ ತಪ್ಪಾಗಿ ಗುರುತಿಸಲಾಗಿದೆ.
ಆದ್ರು ಕೂಡಾ ಇದೇ ಜಾಗದಲ್ಲಿ ಕ್ಯಾಂಪ್ ನವರು ಮೃತರ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಆದ್ರೆ ಸರ್ಕಾರ ನೀಡಿದ್ದ 1.33 ಎಕರೆ ಸ್ಮಶಾನ ಭೂಮಿಯನ್ನು ಕೂಡಾ ಸುತ್ತಮುತ್ತಲಿನ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಸ್ಮಶಾನಕ್ಕೆ ಅಂತ ಉಳಿದಿರೋದು ಕೇವಲ ನಾಲ್ಕೈದು ಗುಂಟೆ ಜಾಗ ಮಾತ್ರ. ಉಳಿದ ನಾಲ್ಕೈದು ಗುಂಟೆ ಜಾಗದಲ್ಲಿ ಕೂಡಾ ಅಂತ್ಯಸಂಸ್ಕಾರ ಮಾಡಲು ಕ್ಯಾಂಪ್ ನಿವಾಸಿಗಳು ಪರದಾಡುತ್ತಿದ್ದಾರೆ.
ಮುಖ್ಯರಸ್ಥೆಯಿಂದ ಸ್ಮಶಾನ ಸರಿಸುಮಾರು ನೂರಾ ಐವತ್ತು ಅಡಿ ದೂರದಲ್ಲಿದೆ. ಆದ್ರೆ ನೂರಾ ಐವತ್ತು ಅಡಿ, ರಸ್ತೆ ಇಲ್ಲದೇ ಇರೋದರಿಂದ ಮೂರು ಕ್ಯಾಂಪ್ ಗಳಲ್ಲಿ ಯಾರಾದ್ರು ಮೃತಪಟ್ಟರೆ, ಗ್ರಾಮದ ಜನರು, ಕುಟುಂಬಸ್ಥರು, ಬತ್ತದ ಗದ್ದೆಯಲ್ಲಿ ಶವವನ್ನು ಹೊತ್ತುಕೊಂಡು ಹೋಗಿ ಇರೋ ಸ್ಮಶಾನದಲ್ಲಿಯೇ ಅಂತ್ಯಸಂಸ್ಕಾರ ಮಾಡಿ ಬರುತ್ತಿದ್ದಾರೆ. ಅನೇಕ ಸಲ, ಕೆಸರು ಗದ್ದೆಯಂತಾಗಿರೋ ಸ್ಥಳದಲ್ಲಿ ನಡೆದುಕೊಂಡು ಹೋಗಲು ಆಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಗ್ರಾಮದ ಜನರು ಬತ್ತದ ಹುಲ್ಲನ್ನು ಹಾಕಿ, ಅದರ ಮೇಲೆ ನಡೆದುಕೊಂಡು ಹೋಗಿ ಶವ ಸಂಸ್ಕಾರ ಮಾಡುತ್ತಿದ್ದಾರೆ. ಸ್ಮಶಾನಕ್ಕೆ ಹೋಗಲು ರಸ್ತೆ ನಿರ್ಮಾಣ ಮಾಡಿಕೊಡಿ ಅಂತ ಅನೇಕ ವರ್ಷಗಳಿಂದ ಮೂರು ಕ್ಯಾಂಪ್ ನ ನಿವಾಸಿಗಳು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ಯಾರೊಬ್ಬರು ಕೂಡಾ ಸ್ಪಂಧಿಸಿಲ್ಲ.
ಇದನ್ನೂ ಓದಿ: ವಿಷದ ಬಟ್ಟಲಾಗುತ್ತಿದೆಯಾ ಕರ್ನಾಟಕ ಭತ್ತದ ಕಣಜ? ಅಧಿಕ ಇಳುವರಿಗಾಗಿ ಹೆಚ್ಚಿದ ರಾಸಾನಿಯಕ, ಕ್ರಿಮಿನಾಶಕ ಬಳಕೆ
ಇನ್ನು ಸ್ಮಶಾನದ ಜಾಗ ಒತ್ತುವರಿಯಾಗಿದ್ದರಿಂದ, ಅದರ ಒತ್ತುವರಿಯನ್ನು ತೆರವುಗೊಳಿಸಬೇಕು ಅನ್ನೋದು ಗ್ರಾಮಸ್ಥರ ಪ್ರಮುಖ ಆಗ್ರಹವಾಗಿದೆ. ಈ ಹಿಂದೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಹೇಳಿದಾಗ, ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದರು. ಅಧಿಕಾರಿಗಳು ಮೂರ್ನಾಲ್ಕು ಬಾರಿ ಆಗಮಿಸಿ ಸರ್ವೇ ಮಾಡಿ ಹೋಗಿದ್ದಾರೆ. ಆದ್ರೆ ಇಲ್ಲಿವರಗೆ ಒತ್ತುವರಿ ತೆರವುಗೊಳಿಸೋ ಕೆಲಸವಾಗಿಲ್ಲ. ಒತ್ತುವರಿ ತೆರವುಗೊಳಿಸಿದ್ರೆ, ಸ್ಮಶಾನಕ್ಕೆ ಹೆಚ್ಚಿನ ಭೂಮಿ ಸಿಗುತ್ತದೆ.
ಸ್ಮಶಾನ ಭೂಮಿಯಲ್ಲಿ ನಾಲ್ಕೈದು ಗುಂಟೆ ಭೂಮಿಯನ್ನು ನೀಡಿದ್ರೆ, ಸ್ಮಶಾನಕ್ಕೆ ಹೋಗಲು ರಸ್ತೆ ನಿರ್ಮಾಣಕ್ಕೆ ಭೂಮಿ ಕೊಡೋದಾಗಿ ಕೆಲ ರೈತರು ಹೇಳಿದ್ದಾರೆ. ಇದರಿಂದ ತಮಗೆ ಸ್ಮಶಾನಕ್ಕೆ ಹೋಗಲು ರಸ್ತೆಯೂ ಸಿಗುತ್ತದೆ. ಶವ ಸಂಸ್ಕಾರಕ್ಕೆ ಜಾಗದ ಸಮಸ್ಯೆಯೂ ಇಲ್ಲದಂತಾಗುತ್ತದೆ ಅನ್ನೋದು ಗ್ರಾಮಸ್ಥರ ಮಾತಾಗಿದೆ. ತಮ್ಮೂರಿನ ಅನೇಕರು ಶವಗಳನ್ನು ಸುಡುತ್ತಾರೆ. ಸುಟ್ಟ ನಂತರ ಬೆಂಕಿ ನದಿಸಲು ನೀರು ಬೇಕು. ಆದ್ರೆ ನಾವು ನೀರು ತರಲು ಕೂಡಾ ಆಗದಂತಹ ಸ್ಥಿತಿಯಿದೆ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸಿ, ಗೌರವಯುತ ಅಂತ್ಯಸಂಸ್ಕಾರ ಮಾಡಲು ಅನಕೂಲ ಮಾಡಿಕೊಡಬೇಕು ಅಂತ ಕ್ಯಾಂಪ್ ನಿವಾಸಿಗಳು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ