ಕೊಪ್ಪಳ್ಳ, (ಸೆಪ್ಟೆಂಬರ್ 04): ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ. ಬರಿದಾಗಿದ್ದ ಜಲಾಶಯದಲ್ಲಿ ಮತ್ತೆ ನೀರಿನ ಅಲೆಗಳು ಅಪ್ಪಳಿಸುತ್ತಿರುವದು ನೋಡಿ ಜನರು ಸಂತಸ ಪಡುತ್ತಿದ್ದಾರೆ. ತುಂಬಿ ಹರಿಯುತ್ತಿರುವ ತುಂಗಭದ್ರೆ ಅನೇಕರ ಆತಂಕವನ್ನು ದೂರು ಮಾಡಿದ್ದಾಳೆ. ವರ್ಷದಲ್ಲಿ ಒಮ್ಮೆ ತುಂಬಿದ್ರೆ ಸಾಕು ನಮ್ಮ ಬದುಕು ಬಂಗಾರವಾಗುತ್ತದೆ ಅಂದುಕೊಳ್ಳೋರಿಗೆ ಎರಡೆರಡು ಬಾರಿ ತುಂಬಿದ್ದು ಜನರ ಸಂತಸ ನೂರ್ಮಡಿ ಮಾಡುವಂತೆ ಮಾಡಿದೆ.
ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ತುಂಗಭದ್ರಾ ಜಲಾಶಯದ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದ್ರೆ ಕಳೆದ ಹದಿನಾರು ದಿನಗಳಿಂದ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದೆ. ಅದರಲ್ಲೂ ಕೆಲ ದಿನಗಳಿಂದ ಮಲೆನಾಡ ಬಾಗದಲ್ಲಿ ಹೆಚ್ಚಿನ ಮಳೆ ಯಾಗುತ್ತಿರುವದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಬರೋಬ್ಬರಿ ನೂರು ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಅಂದ್ರೆ ಜಲಾಶಯ ಬರ್ತಿಗೆ ಇನ್ನು ಕೇವಲ ಐದು ಟಿಎಂಸಿ ನೀರು ಮಾತ್ರ ಅವಶ್ಯಕವಾಗಿದೆ. ಇನ್ನು ಜಲಾಶಯಕ್ಕೆ ಇದೀಗ ಮೂವತ್ತು ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದೆ. ಹತ್ತು ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದೇ ರೀತಿ ನೀರು ಬಂದ್ರೆ ಇನ್ನು ಎರಡೇ ದಿನದಲ್ಲಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲಿದೆ.
ಕಳೆದ ಆಗಸ್ಟ್ 10 ರಂದು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಆಗಸ್ಟ್ 10 ರಂದು ಸಂಪೂರ್ಣ ಭರ್ತಿಯಾಗಿತ್ತು. ಆದ್ರೆ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿತ್ತು. ಹೀಗಾಗಿ ಒಂದೇ ವಾರದಲ್ಲಿ ಜಲಾಶಯದಿಂದ ನಲವತ್ತೈದಕ್ಕೂ ಹೆಚ್ಚು ಟಿಎಂಸಿ ನೀರು ಹರಿದು ವ್ಯರ್ಥವಾಗಿ ಹೋಗಿತ್ತು. ಜಲಾಶಯದಲ್ಲಿ ನೀರು ಸಂಪೂರ್ಣ ಖಾಲಿಯಾದ್ರೆ ನಮ್ಮ ಬೆಳೆಗಳಿಗೆ ನೀರಿನ ಗತಿಯೇನು ಅನ್ನೋ ಚಿಂತೆ, ಕೊಪ್ಪಳ,ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರನ್ನು ಕಾಡುತ್ತಿತ್ತು. ಹೀಗಾಗಿ ಆದಷ್ಟು ಬೇಗನೆ ಗೇಟ್ ದುರಸ್ಥಿ ಕಾರ್ಯ ಮಾಡಬೇಕು ಅಂತ ಆಗ್ರಹಿಸಿದ್ದರು.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಹೈದ್ರಾಬಾದ್ ನಿಂದ ಆಗಮಿಸಿದ್ದ ಕ್ರಸ್ಟಗೇಟ್ ತಜ್ಞ ಕನ್ನಯ್ಯನಾಯ್ಡು, ಸಿಬ್ಬಂದಿ ಜೊತೆ ಕೆಲಸ ಆರಂಭಿಸಿದ್ದರು. ಹೊಸ ಕ್ರಸ್ಟಗೇಟ್ ಅಳವಡಿಕೆ ಮಾಡಬೇಕಾದ್ರೆ ಡ್ಯಾಂ ನಲ್ಲಿನ 65 ಟಿಎಂಸಿಯಷ್ಟು ನೀರನ್ನು ಖಾಲಿ ಮಾಡಬೇಕಿತ್ತು. ಆದ್ರೆ ಇದರಿಂದ ಜಲಾಶಯ ಬರಿದಾಗುತ್ತದೆ ಎನ್ನುವುದನ್ನು ಅರಿತ, ಕನ್ನಯ್ಯನಾಯ್ಡು, ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಮುಂದಾಗಿದ್ದರು. ಅದರಂತೆ ನಿರಂತರವಾಗಿ ಒಂದು ವಾರಗಳ ಕಾಲ ಹಗಲಿರಳು ಶ್ರಮಿಸಿದ್ದ ಸಿಬ್ಬಂಧಿ ಆಗಸ್ಟ್ 17 ರಂದು ನಾಲ್ಕು ಎಲಿಮೆಂಟ್ ಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ಹರಿಯುವ ನೀರಿಗೆ ಬ್ರೇಕ್ ಹಾಕುವಲ್ಲಿ ಸಫಲರಾಗಿದ್ದರು. ಆದ್ರು ಕೂಡಾ ತುಂಬಿದ್ದ ಜಲಾಶಯದಲ್ಲಿ ಅಂದು ಇದಿದ್ದು ಕೇವಲ 71 ಟಿಎಂಸಿ ನೀರು ಮಾತ್ರ. ಹೀಗಾಗಿ ಮತ್ತೆ ಜಲಾಶಯ ತುಂಬುಲ್ಲೋ ಇಲ್ವೋ ಅನ್ನೋ ಆತಂಕ ಜಲಾಶಯದ ನೀರನ್ನು ನಂಬಿದ್ದವರಿಗೆ ಕಾಡಿತ್ತು. ಆದ್ರೆ ತುಂಗಭದ್ರಾ ಜಲಾಶಯಕ್ಕೆ ಇದೀಗ ಮತ್ತೆ ಜೀವಕಳೆ ಬಂದಿದೆ.
ಇನ್ನು ತುಂಗಭದ್ರಾ ಜಲಾಶಯ ತುಂಬಿದ್ರೆ ಸ್ವಂತ ನಾನೇ ಬಂದು ಜಲಾಶಯಕ್ಕೆ ಬಾಗೀನ ಅರ್ಪಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ತುಂಗಭದ್ರಾ ಜಲಾಶಯ ಇತಿಹಾಸದಲ್ಲಿ ಇಲ್ಲಿವರಗೆ ಯಾವ ಮುಖ್ಯಮಂತ್ರಿ ಕೂಡಾ ಜಲಾಶಯಕ್ಕೆ ಬಾಗೀನ ಅರ್ಪಿಸಿಲ್ಲ. ಈ ವರ್ಷ ಸಿದ್ದರಾಮಯ್ಯ ಬಾಗೀನ ಅರ್ಪಿಸುವ ದಿನಾಂಕ ಎರಡು ಬಾರಿ ನಿಗದಿಯಾಗಿ ರದ್ದಾಗಿತ್ತು. ಇದೀಗ ಮತ್ತೆ ಜಲಾಶಯ ತುಂಬುತ್ತಿರುವದರಿಂದ ಸ್ವತ ಸಿಎಂ ಸಿದ್ದರಾಮಯ್ಯ ಬಂದು ಬಾಗೀನ ಅರ್ಪಿಸುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.