ಕೊಪ್ಪಳ: ಭಾರಿ ಮಳೆಯಿಂದ ತುಂಗಭದ್ರಾ ಡ್ಯಾಂ ಭರ್ತಿಯಾಗಿದೆ. ಡ್ಯಾಂನಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 28 ಗೇಟ್ಗಳ ಮೂಲಕ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ಕೊಟ್ಟಿದ್ದಾರೆ.
ಕರ್ನಾಟಕದ ಹಲವೆಡೆ ಮತ್ತೆ ಮಳೆ ಆರಂಭವಾಗಿದೆ. ಬೆಂಗಳೂರು ಸಮೀಪ ಜಿಟಿಜಿಟಿ ಮಳೆ ಶುರುವಾಗಿದೆ. ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ ಸುತ್ತಮುತ್ತ ಮಳೆ ಆರಂಭವಾಗಿದೆ. ಸಂಡೇ ಎಂಜಾಯ್ ಮಾಡಲು ಜನ ತುಂಬಿರುತ್ತಿದ್ದ ಸಂತೆ ಬೀದಿ ಖಾಲಿ ಖಾಲಿ ಆಗಿದೆ. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ದ್ವಿಚಕ್ರ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಶಿವಮೊಗ್ಗದಲ್ಲಿ ನಿರಂತರ ಮಳೆಯಿಂದ ಆಲ್ಕೋಳ ಬಡಾವಣೆಯಲ್ಲಿ ಮನೆ ಕುಸಿದು ಬಿದ್ದಿದೆ. ಬಸವರಾಜ್ ಎಂಬುವವರ ಹೆಂಚಿನ ಮನೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋಲಾರ ಜಿಲ್ಲೆ KGF ತಾಲೂಕಿನ ಬೇತಮಂಗಲ ಪಾಲರ್ ಕೆರೆಗೆ ಕೋಲಾರ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ಭಾರಿ ಮಳೆಯಿಂದಾಗಿ ಪಾಲರ್ ಕೆರೆ ತುಂಬಿ ಕೋಡಿ ಬಿದ್ದಿತ್ತು. ಕೆರೆ ಕೋಡಿ, ತೂಬಿನ ಗುಣಮಟ್ಟವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದ್ದಾರೆ.
ಜಲಾಶಯದಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗಾಯತ್ರಿ ಜಲಾಶಯದಲ್ಲಿ ಘಟಿಸಿದೆ. ಸಲ್ಮಾನ್ (24) ಎಂಬವರು ನೀರುಪಾಲು ಆಗಿದ್ದಾರೆ. ಹಿರಿಯೂರು ತಾಲೂಕಿನ ಜೆ.ಜಿ.ಹಳ್ಳಿಯ ನಿವಾಸಿ ಸಲ್ಮಾನ್ ನೀರುಪಾಲಾಗಿದ್ದಾರೆ. ಯುವಕನ ಮೃತದೇಹಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧಕಾರ್ಯ ನಡೆಯುತ್ತಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಳೆ ಮೂರನೇ ಬಲಿ ಪಡೆದುಕೊಂಡಿದೆ. ಜಾನುವಾರು ಮೈತೊಳೆಯಲು ಹೋದಾಗ ರೈತ ಸಾವನ್ನಪ್ಪಿದ ಘಟನೆ ನಡೆದಿದೆ. ದಾವಣಗೆರೆ ತಾಲೂಕಿನ ಹುಚ್ಚವನಹಳ್ಳಿಯಲ್ಲಿ ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ರೈತ ತಿಪ್ಪೇಸ್ವಾಮಿ (48) ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಕೆರೆಗೆ ನೀರು ಹರಿದು ಬಂದ ಹಿನ್ನೆಲೆ ಕೆರೆಯಲ್ಲಿ ಮುಳುಗಿ ರೈತ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ. ರೈತರ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಹುಡುಕಾಟ ನಡೆಸಿದೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಭಾರೀ ಮಳೆಯಿಂದ ಅವಾಂತರ; ಮನೆ ಕಳೆದುಕೊಂಡವರಿಗೆ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ
ಇದನ್ನೂ ಓದಿ: Bengaluru News: ಬೆಂಗಳೂರು ನಗರದಲ್ಲಿ ಇನ್ನೂ 2 ದಿನ ಸಾಧಾರಣ ಮಳೆ ಸಾಧ್ಯತೆ
Published On - 6:09 pm, Sun, 21 November 21