ಕೊಪ್ಪಳ, ಸೆಪ್ಟೆಂಬರ್ 7: ನಾವು ಇದೀಗ 5 ಜಿ ಯುಗದಲ್ಲಿ ಇದ್ದೇವೆ. ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ ಅಂತ ರಾಜಕೀಯ ನಾಯಕರು, ಅಧಿಕಾರಿಗಳು ಭಾಷಣವನ್ನು ಮಾಡುತ್ತಲೇ ಇದ್ದಾರೆ. ಇನ್ನೊಂದಡೆ ಪ್ರತಿವರ್ಷ ಅಭಿವೃದ್ಧಿ ಯೋಜನೆಗಳಿಗಾಗಿ ಸರ್ಕಾರಗಳು ಸಾವಿರಾರ ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುತ್ತಲೇ ಇವೆ. ಅದರಲ್ಲೂ ಬಹಿರ್ದೆಸೆ ಮುಕ್ತ ಗ್ರಾಮಗಳನ್ನು ಮಾಡಲು ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಕೋಟಿ ಕೋಟಿ ಹಣ ಖರ್ಚಾಗಿದೆ. ದಾಖಲಾತಿಗಳಲ್ಲಿ ಬಹಿರ್ದೆಸೆ ಮುಕ್ತ ಜಿಲ್ಲೆ, ತಾಲೂಕು ಅಂತ ಅಧಿಕಾರಿಗಳು ತೋರಿಸುತ್ತಲೇ ಇದ್ದಾರೆ. ಆದರೆ ವಾಸ್ತವದಲ್ಲಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮೀಣ ಬಾಗದಲ್ಲಿ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಯಾರು ಮಾಡದೇ ಇರುವುದರಿಂದ ಗ್ರಾಮದ ಮಹಿಳೆಯರೇ ಹಣವನ್ನು ಹಾಕಿ ಬಹಿರ್ದೆಸೆಗೆ ಹೋಗುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೊನಸಾಗರ ಗ್ರಾಮದಲ್ಲಿ ಮಹಿಳೆಯರು ಪ್ರತಿಯೊಬ್ಬ ಮಹಿಳೆಗೆ ಇನ್ನೂರು ರೂಪಾಯಿಯಂತೆ ಹಣ ಹಾಕಿ, ಹತ್ತು ಸಾವಿರ ರೂಪಾಯಿ ಹಣವನ್ನು ಸಂಗ್ರಹಿಸಿ, ಬಹಿರ್ದೆಸೆಗೆ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಾಗದಲ್ಲಿ ಮುಳ್ಳುಕಂಟಿಗಳು ಬೆಳದಿದ್ದವು. ಅವುಗಳನ್ನು ಜೆಸಿಬಿಯಿಂದ ತೆರವುಗೊಳಿಸಿ, ರಸ್ತೆಯಲ್ಲಿ ಓಡಾಡೋರಿಗೆ ಕಾಣದಂತೆ ಗೋಡೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಆ ಮೂಲಕ ನಮ್ಮ ಸ್ವಾಭಿಮಾನಕ್ಕೆ ಆಗುತ್ತಿರುವ ನೋವಿಗೆ, ತಾವೇ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ತಾವೇ ಹಣ ಹಾಕಿದ್ದಲ್ಲದೆ, ತಾವೇ ಕೆಲಸ ಮಾಡಿ ಗೋಡೆಯನ್ನು ನಿರ್ಮಿಸಿಕೊಂಡಿದ್ದಾರೆ.
ಇನ್ನು ಕೊನಸಾಗರ ಗ್ರಾಮದಲ್ಲಿ ಬಹುತೇಕರಿಗೆ ವ್ಯಯಕ್ತಿಕವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಜಾಗವಿಲ್ಲವಂತೆ. ಕೆಲವರು ಶೌಚಾಲಯ ನಿರ್ಮಾಣ ಮಾಡಿಕೊಂಡರು ಕೂಡಾ ನೀರಿನ ಸಮಸ್ಯೆಯಿದೆಯಂತೆ. ಕುಡಿಯಲಿಕ್ಕೆ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಬರುತ್ತದೆ. ಇನ್ನು ಶೌಚಾಲಯಕ್ಕೆ ಎಲ್ಲಿಂದ ನೀರು ತರೋದು ಎಂದು ಅನೇಕರು ಶೌಚಾಲಯವಿದ್ದರು ಕೂಡಾ ಬಳಸುತ್ತಿಲ್ಲ. ಇನ್ನು ಅನೇಕರಿಗೆ ಜಾಗವಿದ್ದರೂ ಇಡೀ ಗ್ರಾಮವಿರುವುದು ಕಲ್ಲು ಬಂಡೆಗಳ ಮೇಲೆ. ಅಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ನಮಗೆ ಹೊರಗಡೆ ಬಹಿರ್ದೆಸೆಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಡಿ, ಕನಿಷ್ಠ ಐದಾರು ಅಡಿ ಎತ್ತರದ ಗೋಡೆಯನ್ನು ನಿರ್ಮಿಸಿದರೆ, ನಮಗೆ ಅನಕೂಲವಾಗುತ್ತದೆ ಅಂತ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಸದಸ್ಯರಿಗೆ ಹತ್ತಾರು ಬಾರಿ ಮನವಿ ಮಾಡಿದ್ದರು. ಆದರೆ ಉಪಯೋಗ ಮಾತ್ರ ಆಗಿಲ್ಲ.
ಅನೇಕರು ಗ್ರಾಮದ ಹೊರಗೆ ಶೌಚಾಲಾಯಕ್ಕೆ ಹೋಗುವಾಗ ಬಿದ್ದು ಗಾಯಗೊಂಡಿದ್ದಾರೆ. ಮಹಿಳೆಯರು, ಮಕ್ಕಳಿಗೆ ಮುಂಜಾನೆ ನೈಸರ್ಗಿಕ ಪ್ರಕ್ರಿಯೇಯನ್ನು ಮುಗಿಸುವುದೇ ದೊಡ್ಡ ಸವಾಲಾಗುತ್ತಿದೆ. ಸಿಕ್ಕಿಸಿಕ್ಕಲ್ಲಿ ಅನೇಕರು ಶೌಚಕ್ಕೆ ಹೋಗಿ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ನಮಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಯಾರು ಕೂಡಾ ಗಮನಹರಿಸದೇ ಇದ್ದಾಗ, ಗ್ರಾಮದ ಮಹಿಳೆಯರೇ ಒಟ್ಟು ಸೇರಿ, ತಲಾ ಇನ್ನೂರು ರೂಪಾಯಿಯಂತೆ ಹಣ ಜಮೆ ಮಾಡಿ, ಹತ್ತು ಸಾವಿರ ರೂಪಾಯಿ ಸಂಗ್ರಹಿಸಿ, ಬಹಿರ್ದೆಸೆಗೆ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಸಾರ್ವಜನಿಕರ ಆಕ್ರೋಶ
ಕೊನಸಾಗರ ಗ್ರಾಮದಲ್ಲಿರುವ ಮಹಿಳೆಯರ ಬಹಿರ್ದೆಸೆ ಸಮಸ್ಯೆಗೆ ಕೊನೆಗಾಣಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕಿದೆ. ಕನಿಷ್ಠಪಕ್ಷ ಗ್ರಾಮದಲ್ಲಿ ಸರ್ಕಾರದ ವತಿಯಿಂದಲೇ ಜಾಗವನ್ನು ಗುರುತಿಸಿ, ಶೌಚಾಲಯ ನಿರ್ಮಾಣ ಮಾಡುವ ಕೆಲಸವನ್ನು ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ