Koragajja Kola: ಕೊರಗಜ್ಜನ ಕೋಲದಿಂದಾಗಿ ಅಮಿತ್ ಶಾ ರೋಡ್ ಶೋ ರದ್ದು

|

Updated on: Feb 10, 2023 | 11:24 AM

Amit Shah Road Show at Mangaluru Canceled: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹಳ ಗೌರವ ಹೊಂದಿರುವ ಕೊರಗಜ್ಜ ದೈವದ ಕೋಲ ನಡೆಯುತ್ತಿರುವ ಕಾರಣಕ್ಕೆ ಅಮಿತ್ ಶಾ ಅವರ ರೋಡ್ ಶೋ ಕಾರ್ಯಕ್ರಮ ರದ್ದಾಗಿದೆ. ನಾಳೆ ಶನಿವಾರ ಸಂಜೆ ಮಂಗಳೂರಿನಲ್ಲಿ ಶಾ ರೋಡ್ ಶೋ ನಡೆಸುವುದಿತ್ತು.

Koragajja Kola: ಕೊರಗಜ್ಜನ ಕೋಲದಿಂದಾಗಿ ಅಮಿತ್ ಶಾ ರೋಡ್ ಶೋ ರದ್ದು
ಕೊರಗಜ್ಜನ ಕೋಲ
Follow us on

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್​ಶೋವೊಂದು ಕೊರಗಜ್ಜನ ಕೋಲದ (Koragajjana Kola) ಕಾರಣಕ್ಕೆ ರದ್ದಾಗಿದೆ. ನಾಳೆ ಮಂಗಳೂರಿನಲ್ಲಿ ಅಮಿತ್ ಶಾ ನಡೆಸಬೇಕಿದ್ದ ರೋಡ್ ಶೋ (Amit Shah Road Show) ಅನ್ನು ರದ್ದುಗೊಳಿಸಲಾಗಿದೆ ಎನ್ನುವ ಮಾಹಿತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದು ತಿಳಿದುಬಂದಿದೆ.

ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಅಮಿತ್ ಶಾ ನಾಳೆ ಶನಿವಾರ ಬರಲಿದ್ದು, ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುವುದು ಬಿಜೆಪಿ ಯೋಜನೆ. ಪುತ್ತೂರಿನ ಕ್ಯಾಂಪ್ಕೋ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬಳಿಕ ಅಮಿತ್ ಶಾ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸುವುದಿತ್ತು. ರೋಡ್ ಶೋ ನಡೆಯುವ ಮಾರ್ಗಮಧ್ಯೆ ಪದವಿನಂಗಡಿ ಬಳಿ ಕೊರಗಜ್ಜನ ಕೋಲ ನಡೆಯುತ್ತಿದೆ. ಈ ಕಾರಣಕ್ಕೆ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.

ಕರಾವಳಿ ಭಾಗದಲ್ಲಿರುವ ಹಲವಾರು ದೈವಗಳಲ್ಲಿ ಕೊರಗಜ್ಜ ದೈವಕ್ಕೆ ಹೆಚ್ಚು ಭಕ್ತಿ ಗೌರವ ಇದೆ. ಮಂಗಳೂರಿನಿಂದ ಹಿಡಿದು ಉಡುಪಿಯವರೆಗೆ ಬಹಳ ಕುಟುಂಬಗಳು ಕೊರಗಜ್ಜನ ಪವಾಡಗಳನ್ನು ನಂಬುತ್ತಾರೆ. ಕೊರಗಜ್ಜನ ಕೋಲ ಬಹಳ ವೈಭವವಾಗಿ ಹಲವು ಕಡೆ ನಡೆಯುತ್ತದೆ.

ಅಮಿತ್ ಶಾ ಭೇಟಿ ವಿವರ

ಶನಿವಾರ ಮಧ್ಯಾಹ್ನ 2:15ಕ್ಕೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಂದ ಬಿಎಸ್​ಎಫ್ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರ ಮಂಗಲಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2:50ಕ್ಕೆ ಈಶ್ವರ ಮಂಗಲ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಬಿಜೆಪಿ ಚಾಣಕ್ಯ ಬಳಿಕ ಹೆಲಿಕಾಪ್ಟರ್ ಮೂಲಕ ಪುತ್ತೂರಿಗೆ ಬಂದಿಳಿಯಲಿದ್ದಾರೆ. ಇಲ್ಲಿ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿರಿವ ಅಮಿತ್ ಶಾ ಸಂಜೆ ಆರು ಗಂಟೆ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಲಿದ್ದಾರೆ. ಸಂಜೆ ಆರು ಹದಿನೈದರಿಂದ ರಾತ್ರಿ ಎಂಟು ಗಂಟೆಯವರೆಗೂ ಮಂಗಳೂರು ಏರ್​ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಅಮಿತ್ ಶಾ ಆಂತರಿಕ ಸಭೆ ನಡೆಸಲಿದ್ದಾರೆ. ಈ ಸಭೆ ಮುಕ್ತಾಯಗೊಂಡ ಬಳಿಕ ಅಮಿತ್ ಶಾ ದೆಹಲಿಗೆ ಮರಳಲಿದ್ದಾರೆ.

ಇದನ್ನೂ ಓದಿ: Amit Shah: ಪುತ್ತೂರು, ಮಂಗಳೂರಿಗೆ ಫೆ. 11ಕ್ಕೆ ಅಮಿತ್ ಶಾ ಭೇಟಿ; ಬಿಜೆಪಿ ಭದ್ರಕೋಟೆಯಲ್ಲಿ ಕೇಸರಿ ಕಹಳೆ

ಏಪ್ರಿಲ್ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇನ್ನು ಕೆಲ ವಾರಗಳಲ್ಲಿ ಚುನಾವಣಾ ದಿನಾಂಕ ಘೋಷಣೆ ಆಗಬಹುದು. ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವ ದೊಡ್ಡ ಸವಾಲು ಎದುರಿದೆ. ಭ್ರಷ್ಟಾಚಾರ ಆರೋಪ, ಒಳಜಗಳ, ಗುಂಪುಗಾರಿಕೆ ಇತ್ಯಾದಿ ಹಲವು ಸಿಕ್ಕುಗಳಿಂದ ಪರದಾಡುತ್ತಿರುವ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್​ಗೆ ಒಳ್ಳೆಯ ಅವಕಾಶ ಇದೆ.