Net Mug: ಕೇವಲ 30 ಸೆಕೆಂಡ್‌ನಲ್ಲಿ ಫುಟ್ಬಾಲ್‌ನ 10 ನೆಟ್ ಮೆಗ್ ದಾಖಲೆಯೊಂದಿಗೆ ಗಿನ್ನಿಸ್ ರೆಕಾರ್ಡ್ ಮಾಡಿದ ದೇರಳಕಟ್ಟೆ ಯುವಕ
Leg Figure Eights with Football: ನಟ್ ಮಗ್ ನಲ್ಲಿ ದಾಖಲೆ ಮಾಡಬೇಕೆಂದು ಹಠ ತೊಟ್ಟಿದ್ದ ಶಲೀಲ್ ಸೆಪ್ಟೆಂಬರ್‌ನಲ್ಲಿ ಗಿನ್ನಿಸ್ ರೆಕಾರ್ಡ್‌ಗೆ ಆನ್ ಲೈನ್ ಅರ್ಜಿ ಹಾಕಿದ್ದ. ಆ ಬಳಿಕ ವಿಡಿಯೋ ಮಾಡಿ, ಸಲ್ಲಿಕೆ ಮಾಡಿದ್ದು ಹಲವು ಮಾನದಂಡಗಳ ಪ್ರಕಾರ ಶಲೀಲ್ ಈಗ ಗಿನ್ನಿಸ್ ರೆಕಾರ್ಡ್ ಮಾಡಿದ್ದಾನೆ!
ಫುಟ್ ಬಾಲ್.. ವಿಶ್ವದ ಬಹುತೇಕ ಜನರನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲಿಸುವ ಕ್ರೀಡೆ.. ಫುಟ್ ಬಾಲ್ ಕ್ರೇಜ್ ವಿಶ್ವದೆಲ್ಲೆಡೆ ಇದ್ದರೂ ಭಾರತದಲ್ಲಿ ಸ್ವಲ್ಪ ಕಡಿಮೆಯೇ ಇದೆ. ಆದರೆ ಮಂಗಳೂರಿನ (Mangalore) ಯುವಕನೊಬ್ಬ ಇದೇ ಫುಟ್ ಬಾಲ್‌ನಲ್ಲಿ ಈಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ಮಾಡಿದ್ದಾನೆ. ಅತೀ ವೇಗದ ಕಾಲಿನ ಚಲನೆಯ ಮೂಲಕ ಎಲ್ಲರ ನಿಬ್ಬೆರೆಗಿಸಿದ್ದಾನೆ. ಗೋಲ್ ನೆಟ್‌ನತ್ತ ಗುರಿಯಿರಿಸಿ ಗೋಲ್ ಬಾಲ್ ಬಾರಿಸುತ್ತಿರುವ ಈ ಯುವಕನ ಹೆಸರು ಮಹಮ್ಮದ್ ಶಲೀಲ್. ಮಂಗಳೂರಿನ ದೇರಳಕಟ್ಟೆಯ ಬೆಳ್ಮ ನಿವಾಸಿ. ಸದ್ಯ ಯೆನಪೋಯ ಕಾಲೇಜಿನಲ್ಲಿ ಏವಿಯೇಷನ್ & ಲಾಜಿಸ್ಟಿಕ್ಸ್ ಅಂತಿಮ ಪದವಿ ವಿದ್ಯಾರ್ಥಿಯಾಗಿರುವ ಶಲೀಲ್ ಈಗ ಫುಟ್ ಬಾಲ್ ನಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾನೆ. ಕೇವಲ 30 ಸೆಕೆಂಡ್‌ನಲ್ಲಿ ಫುಟ್ಬಾಲ್‌ನ 10 ನೆಟ್ ಮೆಗ್ ಗಳನ್ನು ಮಾಡಿ ಜಗತ್ತಿನ ಅತೀ ವೇಗದ ನೆಟ್ ಮಗ್ (Net Mug -Leg Figure Eights with Football) ಮಾಡಿದ ಕೀರ್ತಿ ಸಂಪಾದಿಸಿದ್ದಾನೆ. ಎದುರಾಳಿಯ ಕಾಲಿನೊಳಗೆ ಚೆಂಡನ್ನು ಕರಾರುವಕ್ಕಾಗಿ ತನ್ನ ಹಿಡಿತದಲ್ಲಿ ಸಾಧಿಸೋದನ್ನು ಫುಟ್ ಬಾಲ್ ಭಾಷೆಯಲ್ಲಿ ನೆಟ್ ಮಗ್ ಅಂತಾ ಹೇಳ್ತಾರೆ. ಸದ್ಯ ವಿದೇಶಿಯರ ಹೆಸರಲ್ಲಿ ಇದ್ದ ಗಿನ್ನಿಸ್ ರೆಕಾರ್ಡ್ ದಾಖಲೆಯನ್ನು ಶಲೀಲ್ ಈಗ ತಮ್ಮ ಹೆಸರಿಗೆ ಮುದ್ರಿಸಿಕೊಂಡಿದ್ದಾರೆ.
10 ವರ್ಷ ಪ್ರಾಯದಲ್ಲೇ ಫುಟ್ ಬಾಲ್ ಆಟದಲ್ಲಿ ಕ್ರೇಜ್ ಕಂಡುಕೊಂಡಿದ್ದ ಶಲೀಲ್, ಗೂಗಲ್ ನಲ್ಲಿ ಫುಟ್ ಬಾಲ್ ವರ್ಲ್ಡ್ ರೆಕಾರ್ಡ್ ಬಗ್ಗೆ ನೋಡಿದ್ದ. ನೆಟ್ ಮಗ್ ನಲ್ಲಿ ದಾಖಲೆ ಮಾಡಬೇಕೆಂದು ಹಠ ತೊಟ್ಟಿದ್ದ ಶಲೀಲ್ ಸತತ ಮೂರು ತಿಂಗಳು ಅಭ್ಯಾಸ ಕೂಡಾ ಮಾಡಿದ್ದಾನೆ. ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ಗಿನ್ನಿಸ್ ರೆಕಾರ್ಡ್‌ಗೆ ಆನ್ ಲೈನ್ ಅರ್ಜಿ ಹಾಕಿದ್ದ ಶಲೀಲ್, ಆ ಬಳಿಕ ವಿಡಿಯೋ ಮಾಡಿ ಸಲ್ಲಿಕೆ ಮಾಡಿದ್ದು ಹಲವು ಮಾನದಂಡಗಳ ಪ್ರಕಾರ ಶಲೀಲ್ ಈಗ ಗಿನ್ನಿಸ್ ರೆಕಾರ್ಡ್ ಮಾಡಿದ್ದಾನೆ . ಈ ಬಗ್ಗೆ ಅಧಿಕೃತ ಮೇಲ್ ಹಾಗೂ ಸರ್ಟಿಫಿಕೇಟ್ ಶಲೀಲ್‌ಗೆ ಬಂದಿದ್ದು, ಅತೀ ಶೀಘ್ರದಲ್ಲೇ ಗಿನ್ನಿಸ್ ರೆಕಾರ್ಡ್ ಪದಕ ಬರುವ ನಿರೀಕ್ಷೆ ಇಟ್ಟು ಕೊಂಡಿದ್ದಾರೆ.
ಇನ್ನು ಆನ್ ಲೈನ್ ಅರ್ಜಿ ಹಾಕುವಾಗ ಸಾಕಷ್ಟು ನಿಬಂಧನೆಗಳಿದ್ದವು. ಫಿಫಾ ಗುಣಮಟ್ಟದ ಫುಟ್ ಬಾಲ್‌ನಲ್ಲಿ ಈ ಪ್ರಯೋಗ ಮಾಡಬೇಕಿತ್ತು. ಸೆಂಟಿ ಮೀಟರ್, ಸಮಯದ ಲೆಕ್ಕ, ದಾಖಲೆ, ಸಾಕ್ಷಿ ಎಲ್ಲದರ ಪಿನ್ ಟು ಪಿನ್ ವಿಡಿಯೋ ಮಾಡಬೇಕಿತ್ತು. ಈ ಮೊದಲು ಮಾಡಿದ ಪ್ರಯತ್ನ ವಿಡಿಯೋ ಸರಿ ಆಗಿಲ್ಲ ಎನ್ನುವ ಕಾರಣಕ್ಕಾಗಿ ತಿರಸ್ಕಾರವಾಗಿತ್ತು. ಈ ಬಾರಿ ನೆಟ್ ಮೆಗ್‌ಗೆ ಗಿನ್ನಿಸ್ ರೆಕಾರ್ಡ್ ಲಭ್ಯವಾಗಿದೆ. ಈ ಹಿಂದೆ ಇಬ್ಬರು ವಿದೇಶಿ ಆಟಗಾರರು 30 ಸೆಕೆಂಡ್ ನಲ್ಲಿ 8 ನಟ್ ಮೆಗ್, ಮತ್ತು 9 ನಟ್ ಮೆಗ್ ಮಾಡಿದ್ದರು. ಇದೀಗ ಶಲೀಲ್ 10 ನೆಟ್ ಮೆಗ್ ಗಳನ್ನು ಮಾಡಿ ದಾಖಲೆ ತನ್ನದಾಗಿಸಿಕೊಂಡಿದ್ದಾರೆ.
ಮುಂದೆ 11 ನೆಟ್ ಮೆಗ್ ಮಾಡುವ ಗುರಿ ಹೊಂದಿರುವ ಶಲೀಲ್ ಗೆ ಭಾರತೀಯ ಫುಟ್ ಬಾಲ್ ತಂಡಕ್ಕೆ ಆಯ್ಕೆಯಾಗುವ ಆಸೆಯೂ ಇದೆ. ಅದಕ್ಕಾಗಿ ಸತತ ಪ್ರಯತ್ನ ಮಾಡೋದಾಗಿ ಶಲೀಲ್ ಹೇಳಿದ್ದಾರೆ. ಶಲೀಲ್ ಪ್ರಯತ್ನ ಕೈಗೂಡಲಿ ಅನ್ನೋದು ನಮ್ಮ ಆಶಯ.
ವರದಿ: ಅಶೋಕ್, ಟಿವಿ9, ಮಂಗಳೂರು
Published On - 11:40 am, Fri, 10 February 23