ಕಷ್ಟದ ದಿನಗಳಲ್ಲಿ ಕೈಚಾಚಿದವರನ್ನು, ಸಹಾಯ ಮಾಡಿದವರನ್ನು ಮರೆಯಲು ಸಾಧ್ಯವೇ? ಸೆರೆಯಾಗಿದ್ದ ಹಕ್ಕಿಯು ಬಿಡುಗಡೆಯಾಗುತ್ತಿದ್ದಂತೆಯೇ ಪಂಜರದಲ್ಲಿ ಜೊತೆಯಾಗಿದ್ದ ಮತ್ತೊಂದು ಹಕ್ಕಿಯತ್ತ ಸುಳಿಯುತ್ತದೆಯೇ? ಇಲ್ಲ. ಆದರೆ, ಒಡಲ ನೋವನ್ನು ಆಲಿಸಿದ, ಕಷ್ಟದ ಘಟನೆಗಳ ಕೇಳುಗನಾದ, ಸ್ಪಂದಿಸಿ, ಸಂತೈಸಿದ ವ್ಯಕ್ತಿ ಸೆರೆಯಲ್ಲಿದ್ದಾಗ, ಹೃದಯವಂತನಾದವನು ಮತ್ತೆ ಧಾವಿಸದೇ ಇರನು. ಹಾಗೆ ಧಾವಿಸಿ, ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದವರು ರಾಜ್ಯದ ನಾಯಕರಲ್ಲೊಬ್ಬರು.
ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ತಿಹಾರ್ ಜೈಲು ಸೇರಿದ್ರು.ಬರೋಬ್ಬರಿ 45 ದಿನಗಳ ಬಳಿಕ ಶಿವಕುಮಾರ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. 2019ರ ಸೆಪ್ಟಂಬರ್ 24ರಂದು ಡಿಕೆಶಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ರು.
ಡಿ.ಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಇದ್ದ ದಿನಗಳಲ್ಲಿ ತನಗೆ ಸಹಾಯ ಮಾಡಿದ ಸಹಖೈದಿಗಳನ್ನು ಇಂದಿಗೂ ಮರೆತಿಲ್ಲ. ಅಸಹಾಯಕ ಸ್ಥಿತಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದ ಸಹಖೈದಿಗಳಿಗೆ ಇದೀಗ ಜೈಲಿನಿಂದ ಮುಕ್ತಿ ನೀಡಿ ಹೊಸ ಬದುಕು ನೀಡಿದ್ದಾರೆ. ಜೈಲಿನ ಕತ್ತಲೆ ಕೋಣೆಯಲ್ಲಿ ಕಮರುತ್ತಿದ್ದ ಜೀವಗಳಿಗೆ ಹೊಸ ದಿಕ್ಕು ತೋರಿಸಿ ಮಾನವೀಯತೆ ಮೆರೆದಿದ್ದಾರೆ. ತಮಗೆ ಸಹಾಯ ಮಾಡಿದವರಿಗೆ ಡಿ.ಕೆ. ಶಿವಕುಮಾರ್ ಕೇವಲ ಹಣ ನೀಡಿ ಕೈತೊಳೆದು ಕೊಳ್ಳದೆ.. ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದಾರೆ. ಒಬ್ಬ ಸಹ ಖೈದಿಯನ್ನು ತನ್ನ ಗೆಳೆಯ ಎಂದೇ ಭಾವಿಸಿ ತನ್ನ ಮನೆಯಲ್ಲಿಯೇ ಇರಲು ಜಾಗಕೊಟ್ಟಿದ್ದು, ಕುಟುಂಬ ಸದಸ್ಯನ ರೀತಿ ನೋಡಿಕೊಳ್ಳುತ್ತಿದ್ದಾರೆ.
(ಬರಹ: ಜಿ.ಆರ್. ಹರೀಶ್, ಟಿವಿ9 ಪ್ರತಿನಿಧಿ, ದೆಹಲಿ)
ಮೊಯಿಸಿನ್ ರಾಝಾ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಖೈದಿ. ಡಿ.ಕೆ ಶಿವಕುಮಾರ್ ತಿಹಾರ್ ಜೈಲು ಸೇರುವ ಮುಂಚೆಯೇ ವಿಚಾರಣಾಧಿನ ಖೈದಿಯಾಗಿದ್ರು. ಡಿ.ಕೆ ಶಿವಕುಮಾರ್ ಅವರನ್ನು ಮೊಯಿಸಿನ್ ಇದ್ದ ಜೈಲುಕೋಣೆಗೆ ಹಾಕಲಾಗಿತ್ತು. ಮೊಯಿಸಿನ್ ಕುಟುಂಬದ ಕಲಹ ಕಾರಣಕ್ಕಾಗಿ ಜೈಲು ಸೇರಿದ್ದವರು. ಹೆಂಡತಿ ಬಿಟ್ಟಿದ್ದ ಈತ, ಹೆಂಡತಿಗೆ ನಾಲ್ಕುವರೆ ಲಕ್ಷ ಪರಿಹಾರ ನೀಡಬೇಕಿತ್ತು. ಆದರೆ ಮೊಯಿಸಿನ್ ಬಳಿ ಪರಿಹಾರ ನೀಡಲು ಹಣವಿರಲಿಲ್ಲ. ಹೀಗಾಗಿ ಜೈಲಿನಲ್ಲಿಯೇ ಇರಬೇಕಾಗಿತ್ತು. ಮೊಯಿಸನ್ ಇದ್ದ ಸೆಲ್‌ಗೆ ಡಿಕೆಶಿ ಅವರನ್ನು ಕಳುಹಿಸಲಾಗಿತ್ತು. ಮೊಯಿಸಿನ್ ಡಿ.ಕೆ ಶಿವಕುಮಾರ್ ಪರಿಚಯಕ್ಕೆ ಬಂದು ನೆರವಿಗೆ ನಿಂತಿದ್ರು.
ಡಿಕೆಶಿಗೆ ಜೈಲಿನಲ್ಲಿ ಇದ್ದಷ್ಟು ದಿನವೂ ಕಾಳಜಿ ವಹಿಸಿದ್ರು. ಮೊಯಿಸಿನ್ ನಡವಳಿಕೆ ಡಿಕೆಶಿ ಅವರಿಗೆ ಇಷ್ಟವಾಗಿತ್ತು. ಮೊಯಿಸಿನ್ ಗೆಳೆಯನಂತೆ ಡಿ.ಕೆ ಶಿವಕುಮಾರ್ ಅವರಿಗೆ ಕಾಣಿಸಿದ್ದ. ಡಿಕೆಶಿ ಬಿಡುಗಡೆಯಾಗುವ ದಿನ ಮೊಯಿಸಿನ್‌ಗೆ ಜೈಲಿನಿಂದ ಬಿಡುಗಡೆ ಮಾಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ರು. ನೀಡಿದ್ದ ಭರವಸೆಯಂತೆ ನಾಲ್ಕುವರೆ ಲಕ್ಷ ಪರಿಹಾರ ಹಣ ನೀಡಿ ಜೈಲಿನಿಂದ ಮೊಯಿಸಿನ್ ಅವರನ್ನು ಬಿಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಮನೆಯಲ್ಲಿಯೇ ಇರಲು ಅವಕಾಶ ನೀಡಿದ್ದಾರೆ. ಸಂಸದ ಡಿ.ಕೆ.ಸುರೇಶ್ ಅವರ ದೆಹಲಿ ನಿವಾಸದಲ್ಲಿಯೇ ಮೊಹಿಸಿನ್ ಇದ್ದಾರೆ. ಇನ್ನೊಬ್ಬ ಖೈದಿ ಜೈಲಿನಲ್ಲಿ ಹಿಂದಿ ಡಿ.ಕೆ ಶಿವಕುಮಾರ್ ಗೆ ಹಿಂದಿ ಕಲಿಸಿದ್ರು. ಆತನಿಗೂ ಬೆಂಗಳೂರಿನಲ್ಲಿ ಒಳ್ಳೆ ಕಂಪೆನಿಯಲ್ಲಿ ಕೆಲಸ ಕೊಡಿಸಿದ್ದಾರೆ.
ತಿಹಾರ್ ಜೈಲು ಡಿಕೆ ಶಿವಕುಮಾರ್ ಅವರ ಬದುಕಿನಲ್ಲಿ ಕರಾಳವಾಗಿ ಕಂಡರೂ, ಸಹ ಖೈದಿಗಳಿಗೆ ಇದೇ ವರವಾಗಿದೆ. ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಸಹಾಯವಾಗಿದೆ.
Published On - 7:36 pm, Mon, 21 June 21