
ಬೆಂಗಳೂರು, (ಡಿಸೆಂಬರ್ 07): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (Venkatesh Prasad) ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಒಟ್ಟು 16 ಸ್ಥಾನಗಳಿಗೆ ಇಂದು (ಡಿಸೆಂಬರ್ 07) ಬೆಳಗ್ಗೆಯಿಂದ ಸಂಜೆ ವರೆಗೆ ಮತದಾನ ನಡೆದಿದ್ದು, ಇದೀಗ ಮತದಾನ ಎಣಿಕೆಯಲ್ಲಿ ವೆಂಕಟೇಶ್ ಪ್ರಸಾದ್ 191 ಮತಗಳ ಅಂತರ ಗೆದ್ದು ಬೀಗಿದ್ದಾರೆ. ಇದರೊಂದಿಗೆ ವೆಂಕಟೇಶ್ ಪ್ರಸಾದ್ 12 ವರ್ಷಗಳ ಬಳಿಕ ಮತ್ತೆ ಅಧ್ಯಕ್ಷರಾಗಿ ಕೆಎಸ್‌ಸಿಎಗೆ ವಾಪಸ್ಸಾಗಿದ್ದಾರೆ.
ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಹಾಗೂ ಅನಿಲ್ ಕುಂಬ್ಳೆ ಬಣದ ವೆಂಕಟೇಶ್ ಪ್ರಸಾದ್‌ಗೆ ಒಟ್ಟು 749 ಮತಗಳು ಬಿದ್ದಿದ್ದರೆ, ಬ್ರಿಜೇಶ್ ಪಾಟೀಲ್ ಬಣದ ಶಾಂತಕುಮಾರ್‌ಗೆ 558 ಮತಗಳು ಲಭವಿಸಿವೆ. ಇದರೊಂದಿಗೆ ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ವಿರೋಧಿ ಶಾಂತಕುಮಾರ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ವೆಂಕಟೇಶ್ ಪ್ರಸಾದ್ ಬಣದಿಂದ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಮಧುಕರ್ ಅವರು ಖಜಾಂಚಿಯಾಗಿ ಆಯ್ಕೆಯಾಗಿದರು. ಇನ್ನು ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಗೆಲುವು ಸಾಧಿಸಿದ್ದಾರೆ. ಈ ಬಾರಿ ಒಟ್ಟು 1315 ಮತಗಳ ಚಲಾವಣೆಯಾಗಿವೆ. 2013 ರಲ್ಲಿ 1351 ಮತಗಳ ಚಲಾವಣೆಗೊಂಡಿದ್ದವು. ಕೆಎಸ್ಸಿಎ ಇತಿಹಾಸದಲ್ಲಿ 2013ರಲ್ಲೇ ಅತಿ ಹೆಚ್ಚು ಮತದಾನವಾಗಿತ್ತು.
ಪರಾಜಿತ ಅಥ್ಯರ್ಥಿ ಶಾಂತಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ವೆಂಕಟೇಶ್ ಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಶಾಂತಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದು, ಶಾಂತಕುಮಾರ್ ಅವರ ನಾಮಪತ್ರ ಸಿಂಧುಗೊಳಿಸಿ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಅದರಂತೆ ಇಂದು ನಡೆದ ಚುನಾವಣೆಯಲ್ಲೂ ಸಹ ವೆಂಕಟೇಶ್ ಪ್ರಸಾದ್ ಗೆದ್ದು ಬೀಗಿದ್ದಾರೆ.
ವೆಂಕಟೇಶ್ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಇದೀಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ 12 ವರ್ಷಗಳ ಬಳಿಕ ಮತ್ತೆ ಕೆಎಸ್‌ಸಿಎಗೆ ವಾಪಸ್ಸಾಗಿದ್ದಾರೆ.
1994ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೆಂಕಿ, ಟೀಂ ಇಂಡಿಯಾದ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 33 ಟೆಸ್ಟ್ ಪಂದ್ಯದಿಂದ 96 ವಿಕೆಟ್ ಕಬಳಿಸಿದ್ದರೆ, 161 ಏಕದಿನ ಪಂದ್ಯದಿಂದ 196 ವಿಕೆಟ್ ಉರುಳಿಸಿದ್ದಾರೆ.
Published On - 9:06 pm, Sun, 7 December 25