ಕರ್ನಾಟಕದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತದ ಆತಂಕ: ಭೂವೈಜ್ಞಾನಿಕ ಸಮೀಕ್ಷೆಯಿಂದ ಆತಂಕಕಾರಿ ವರದಿ

|

Updated on: Jul 24, 2024 | 9:55 AM

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಶಿರೂರಿನಲ್ಲಿ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ಬೆನ್ನಲ್ಲೇ ಕರ್ನಾಟಕದಲ್ಲಿ ಇಂತಹ ಸಾವಿರಕ್ಕೂ ಹೆಚ್ಚು ಪ್ರದೇಶಗಳು ಇರುವುದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ವರದಿಯಿಂದ ತಿಳಿದುಬಂದಿದೆ.

ಕರ್ನಾಟಕದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತದ ಆತಂಕ: ಭೂವೈಜ್ಞಾನಿಕ ಸಮೀಕ್ಷೆಯಿಂದ ಆತಂಕಕಾರಿ ವರದಿ
ಶಿರೂರು ಹೆದ್ದಾರಿ ಮೇಲೆ ಭೂಕುಸಿತ
Follow us on

ಬೆಂಗಳೂರು, ಜುಲೈ 24: ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 1,351 ಸ್ಥಳಗಳು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್​​​ನಲ್ಲಿ ಮಂಗಳವಾರ ಮಾಹಿತಿ ನೀಡಿದ್ದಾರೆ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪದೇ ಪದೇ ಸಂಭವಿಸುತ್ತಿರುವ ಭೂಕುಸಿತ ಘಟನೆಗಳ ಕುರಿತು ಬಿಜೆಪಿ ಎಂಎಲ್‌ಸಿಗಳಾದ ಸಿಟಿ ರವಿ, ಎನ್ ರವಿಕುಮಾರ್, ಛಲವಾದಿ ಟಿ. ನಾರಾಯಣಸ್ವಾಮಿ ಅವರು ಮಂಡಿಸಿದ ಗಮನ ಸೆಳೆಯುವ ಪ್ರಸ್ತಾವನೆಗೆ ಉತ್ತರಿಸಿದ ಸಚಿವರು, ‘ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಎದುರಿಸುತ್ತಿರುವ ಹೆಚ್ಚಿನ ಸ್ಥಳಗಳಿಗೆ ಶೀಘ್ರದಲ್ಲಿಯೇ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದರು.

ತೀವ್ರವಾದ ಅಲ್ಪ ಮಳೆ, ಮೇಘ ಸ್ಫೋಟಗಳು, ನೈಸರ್ಗಿಕ ಇಳಿಜಾರುಗಳೊಂದಿಗೆ ಮಧ್ಯಪ್ರವೇಶಿಸುವುದು ಮತ್ತು ರಸ್ತೆ ನಿರ್ಮಾಣಗಳಂತಹ ಅಭಿವೃದ್ಧಿ ಕಾರ್ಯಗಳಿಗಾಗಿ ನದಿಗಳು ಮತ್ತು ತೊರೆಗಳ ನೈಸರ್ಗಿಕ ಹರಿವನ್ನು ತಿರುಗಿಸುವುದು ಭೂಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ವರದಿಯನ್ನು ಉಲ್ಲೇಖಿಸಿ ಸಚಿವರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ಶಿರೂರು ಎಂಬಲ್ಲಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅದಾದ ನಂತರ ರಾಜ್ಯದ ಅನೇಕ ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿ ರಸ್ತೆ, ಶೃಂಗೇರಿ ಹೊರನಾಡು ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆ, ಮಂಗಳೂರು ಮತ್ತು ಶೃಂಗೇರಿ ಮಧ್ಯ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿಯೂ ಭೂಕುಸಿತ ಸಂಭವಿಸಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನಾಪತ್ತೆಯಾದ ಮೂವರ ಮೃತ ದೇಹ ಪತ್ತೆಗೆ ‘ಪೊಕಲೇನ್’ಬಳಕೆ, ಏನಿದು ಯಂತ್ರ?

ಕೆಲವು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಸಂಪಾಜೆ ಘಾಟಿ ವ್ಯಾಪ್ತಿಯಲ್ಲಿ ಮತ್ತು ಜಿಲ್ಲೆಯ ಇತರ ಕೆಲವು ಕಡೆಗಳಲ್ಲಿ ಭಾರಿ ಪ್ರಮಾಣದ ಭೂಕುಸಿತಗಳು ಸಂಭವಿಸಿದ್ದವು. ಮಡಿಕೇರಿ ನಗರದಲ್ಲಿ ಕೂಡ ಭೂಕುಸಿತ ಸಂಭವಿಸಿತ್ತು. ಪರಿಣಾಮವಾಗಿ ಅಪಾರ ಪ್ರಮಾಣದ ಹಾನಿ, ಸಾವು ನೋವು ಸಂಭವಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ