ಬೆಳಗಾವಿ, ಫೆಬ್ರವರಿ 24: ಅಕ್ರಮವಾಗಿ ಗೋವಾ ಲಿಕ್ಕರ್ (liquor) ತರುವುದು ಮಾರಾಟ ಮಾಡುವುದು ನಡೆದೆ ಇರುತ್ತೆ. ಆದರೆ ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ ಬೆಳಗಾವಿ (Belagavi) ನಗರದ ಮಗ್ಗಲ ಗ್ರಾಮದಲ್ಲಿಯೇ ನಿರಂತರವಾಗಿ ಕಳ್ಳಭಟ್ಟಿ ಕಾಯಿಸುವ ದಂಧೆ ನಡೆದಿತ್ತು. ಈ ಹಿಂದೆ ಅಬಕಾರಿ ಸಚಿವರೇ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಮಾಡಿ ತಡೆಯುವ ಕೆಲಸ ಮಾಡಿದ್ದರು. ಆದರೆ ಮತ್ತೆ ಅಕ್ರಮಕೋರರು ದಂಧೆ ಶುರು ಮಾಡಿದ್ದರು. ಬೆಳಗಾವಿ ನಗರದ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಬಹುದೊಡ್ಡ ಕಳ್ಳಭಟ್ಟಿ ಗ್ಯಾಂಗ್ ಖೆಡ್ಡಾಗೆ ಬಿದ್ದಿದೆ.
ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಳ್ಳಭಟ್ಟಿ ದಂಧೆ ಅವ್ಯಾಹತವಾಗಿ ನಡುತ್ತಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ಬಂದಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲೆಲ್ಲಿ ದಂಧೆ ನಡುತ್ತಿದೆ ಎಂದು ಪರಿಶೀಲನೆ ಮಾಡಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡರು. ಸೋನಟ್ಟಿ ಗ್ರಾಮದಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಹಾಗೂ ಗ್ರಾಮದ ತಗ್ಗು ಪ್ರದೇಶದ ಹಳ್ಳದಲ್ಲಿ ಖದೀಮರು ಕಳ್ಳಭಟ್ಟಿ ಕಾಯಿಸುವ ದಂಧೆ ಪ್ರಾರಂಭ ಮಾಡಿದ್ದು ಪೊಲೀಸರಿಗೆ ಗೊತ್ತಾಗಿತ್ತು.
ಇದನ್ನೂ ಓದಿ: ಬೆಳಗಾವಿ: ಪಾಗಲ್ ಪ್ರೇಮಿಯ ನೀಚ ಕೃತ್ಯಕ್ಕೆ ಬೀದಿಗೆ ಬಂದ ಪ್ರೇಯಸಿ
ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಪೊಲೀಸರ ನೇತೃತ್ವದಲ್ಲಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬೆಳಗ್ಗೆ ಐದು ಗಂಟೆಗೆ ಸೋನಟ್ಟಿ ಗ್ರಾಮಕ್ಕೆ ಪೊಲೀಸರ ತಂಡ ಎಂಟ್ರಿಯಾಗಿತ್ತು. ಒಂದು ಗ್ರಾಮವೇ ಕಳ್ಳಭಟ್ಟಿ ತಯಾರಿಸುವ ರೀತಿ ಕಂಡು ಬಂದಿದ್ದು ಓಣಿಯ ತುಂಬೆಲ್ಲಾ ಬ್ಯಾರಲ್, ಕಳ್ಳಭಟ್ಟಿ ಕಂಡು ಪೊಲೀಸರೇ ಶಾಕ್ ಆಗಿದ್ದರು. ಕಳ್ಳ ಬಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 5700 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.
2012ರಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಇದೇ ಗ್ರಾಮದಲ್ಲಿ ಅವ್ಯಾಹತವಾಗಿ ಕಳ್ಳಭಟ್ಟಿ ದಂಧೆ ನಡೆಯುತ್ತಿರೋದು ಗೊತ್ತಾಗಿತ್ತು. ಈ ವಿಚಾರ ತಿಳಿದು ಸ್ವತಃ ಅಂದಿನ ಅಬಕಾರಿ ಸಚಿವರಾಗಿದ್ದ ರೇಣುಕಾಚಾರ್ಯ ಇದೇ ಸೋನಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಚಿವ ರೇಣುಕಾಚಾರ್ಯ ಹಾಗೂ ಪೊಲೀಸರು ಎಂಟ್ರಿ ಆಗ್ತಿದ್ದಂತೆ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ರೇಣುಕಾಚಾರ್ಯ ಅವರು ತಲೆಗೆ ಗಾಯವಾಗಿ ಆಸ್ಪತ್ರೆ ಸೇರುವ ಮಟ್ಟಿಗೆ ದಂಧೆಕೋರರು ಅವರ ಮೇಲೆ ಅಟ್ಟಹಾಸ ಮೆರೆದಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ 6,975 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಚಾಲನೆ: ನಿತಿನ್ ಗಡ್ಕರಿಯನ್ನು ಕೊಂಡಾಡಿದ ಸತೀಶ್ ಜಾರಕಿಹೊಳಿ
ಇದಾದ ಬಳಿಕ ಸೈಲೆಂಟ್ ಆಗಿದ್ದ ದಂಧೆಕೋರರು ಇತ್ತಿಚೀನ ದಿನಗಳಲ್ಲಿ ಮತ್ತೆ ಆ್ಯಕ್ಟೀವ್ ಆಗಿತ್ತು ಎನ್ನುವ ಮಾಹಿತಿ ಬಂದಿತ್ತು. ಇದರಿಂದ ಅಲರ್ಟ್ ಆದ ಪೊಲೀಸರು ಇನ್ನೂರಕ್ಕೂ ಹೆಚ್ಚು ತಮ್ಮ ಬಟಾಲಿಯನ್ ನೊಂದಿಗೆ ಹೋಗಿ ಯಶಸ್ವಿಯಾಗಿ ದಾಳಿ ನಡೆಸಿ ಕಾರ್ಯಾಚರಣೆ ಮುಗಿಸಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳನ್ನ ಕರೆಯಿಸಿ ಎಲ್ಲವನ್ನೂ ನಾಶ ಪಡಿಸುವ ಕೆಲಸ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಲ್ಲ ಪರಾರಿಯಾಗಿದ್ದು ಓರ್ವ ಆರೋಪಿಯನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್ಎನ್ ಸಿದ್ರಾಮಪ್ಪ ತಿಳಿಸಿದ್ದಾರೆ.
ಬೆಳಗಾವಿ ನಗರದ ಕೂಗಳತೆ ದೂರದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ಕಳ್ಳಭಟ್ಟಿ ದಂಧೆ ನಡೆಯುತ್ತಿದ್ದರೂ ಸಹ ಅಬಕಾರಿ ಅಧಿಕಾರಿಗಳಿಗೆ ಈ ಮಾಹಿತಿಯೇ ಇರಲಿಲ್ವಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಲ್ಲದೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದು ಪೊಲೀಸರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಹೀಗೆ 12 ಲಕ್ಷ ರೂ. ಮೌಲ್ಯದ ಕಳ್ಳಭಟ್ಟಿ ಇಂದು ನಾಶವಾಗಿದೆ. ಆದರೆ ತಯಾರಿಸಿದ್ದ ಕಳ್ಳಭಟ್ಟಿ ಎಲ್ಲಿಗೆ ಸಪ್ಲೈ ಆಗ್ತಿತ್ತು, ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.