ಬೆಂಗಳೂರು: ಬಿಡಿಎ ವ್ಯಾಪ್ತಿಯ ಅನಧಿಕೃತ ಕಟ್ಟಡಗಳನ್ನ ಸಕ್ರಮಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸುಮಾರು 75 ಸಾವಿರ ಅನಧಿಕೃತ ಕಟ್ಟಡಗಳಿಗೆ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ್, ವಿ.ಸೋಮಣ್ಣ, ಆರ್.ಅಶೋಕ್, ಸುರೇಶ್ ಕುಮಾರ್ ನೇತೃತ್ವದಲ್ಲಿ ಕಮಿಟಿ ರಚಿಸಿ ಬಿಡಿಎಯ 98cಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ:
ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವುದಿಲ್ಲ. ಈ ತಿಂಗಳ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿ ಬರುತ್ತಾರೆ. ಸಂಕ್ರಾಂತಿವರೆಗೂ ಸಚಿವ ಸಂಪುಟ ವಿಸ್ತರಣೆ ಮುಂದೂಡಲ್ಲ. ಜನವರಿ 20ರಿಂದ 30ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲೂ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಅಸ್ತು:
ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಗೆ ₹1419 ಕೋಟಿ ಅನುದಾನ ಮತ್ತು ಎರಡನೇ ಹಂತದಲ್ಲಿ ಬಳ್ಳಾರಿ ರಸ್ತೆಯಿಂದ ಹಳೇ ಮದ್ರಾಸ್ ರಸ್ತೆಗೆ ₹1417 ಕೋಟಿ ಅನುದಾನ ಹಾಗು ಮೂರನೇ ಹಂತದಲ್ಲಿ ಹಳೇ ಮದ್ರಾಸ್ ರಸ್ತೆಯಿಂದ ಹೊಸೂರು ರಸ್ತೆಗೆ ₹2453 ಕೋಟಿ ಅನುದಾನ ನೀಡಲಾಗುವುದು. ಇದರಲ್ಲಿ ₹901.72 ಕೋಟಿ ರಾಜ್ಯದ ಪಾಲು ನೀಡಲು ಸಮ್ಮತಿ ಸೂಚಿಸಿದೆ.
ಭಾಗ್ಯಲಕ್ಷ್ಮೀ ಯೋಜನೆಗೆ LIC ಪಾಲುದಾರಿಕೆ ಮುಂದುವರಿಕೆ:
2020ರ ಮಾರ್ಚ್ವರೆಗೆ ಭಾಗ್ಯಲಕ್ಷ್ಮೀ ಯೋಜನೆಗೆ LIC ಪಾಲುದಾರ ಸಂಸ್ಥೆಯನ್ನಾಗಿ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
4ನೇ ಶನಿವಾರದ ಸರ್ಕಾರಿ ರಜೆ ರದ್ದು:
4ನೇ ಶನಿವಾರದ ಸರ್ಕಾರಿ ರಜೆ ವಿಚಾರದಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದೆ. ರಾಜ್ಯದ ಎಲ್ಲಾ ಕೋರ್ಟ್‌ಗಳಲ್ಲಿನ ಪ್ರಕರಣಗಳ ಸಮನ್ವಯಿಸಲು ಭಾಗಿಯಾಗುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ರಜೆ ರದ್ದು ಮಾಡಲಾಗಿದೆ. 2019ರ ಜೂನ್ 13ರ ಆದೇಶದಲ್ಲಿ 4ನೇ ಶನಿವಾರ ಎಲ್ಲಾ ಸರ್ಕಾರಿ ನೌಕರರಿಗೆ ರಜೆ ಎಂದು ಹಿಂದಿನ ಸರ್ಕಾರ ಘೋಷಣೆ ಮಾಡಿತ್ತು.
ಮೆಡಿಕಲ್ ಕಾಲೇಜಿಗೆ ₹525 ಕೋಟಿ ಅನುದಾನ:
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ₹525 ಕೋಟಿ ಅನುದಾನ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆರ್ಯವೈಶ್ಯ ಸಮುದಾಯಕ್ಕೆ ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ತೀರ್ಮಾನಿಸಲಾಗಿದೆ. ಇನ್ನು ಎಸ್ಸಿ, ಎಸ್ಟಿ ಅಂತಿಮ ವರ್ಷದ ಐಟಿಐ ವಿದ್ಯಾರ್ಥಿಗಳ ಲ್ಯಾಪ್ಟಾಪ್ಗೆ ₹16.98 ಕೋಟಿ ಅನುದಾನ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ.
2 ಗ್ರಾ.ಪಂ ಮೇಲ್ದರ್ಜೆಗೇರಿಸಲು ನಿರ್ಧಾರ:
ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮಪಂಚಾಯಿತಿ ಹಾಗು ಕಲಬುರಗಿ ಜಿಲ್ಲೆಯ ಕಮಲಾಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
Published On - 6:23 pm, Thu, 12 December 19