
ಬಳ್ಳಾರಿ, ಅಕ್ಟೋಬರ್ 25: ಶಬರಿಮಲೆ ಅಯ್ಯಪ್ಪ ದೇವಾಲಯದ (Sabarimala Temple) ಚಿನ್ನ ಕಳ್ಳತನ ಪ್ರಕರಣ ತನಿಖೆ ವೇಗ ಪಡೆದುಕೊಂಡಿದೆ. 4 ಕೆಜಿ ಚಿನ್ನ ಕಳುವಾದ ಪ್ರಕರಣದಲ್ಲಿ ಕೇರಳ ಎಸ್‌ಐಟಿ ತಂಡವು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮೇಲೆ ದಾಳಿ ನಡೆಸಿದ್ದು, ಚಿನ್ನದಂಗಡಿಯ ಮಾಲೀಕ ಚಿನ್ನ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಚಿನ್ನ ಮಾರಾಟ ಮಾಡಿದ ಪೋಟಿ ಉನ್ನಿಕೃಷ್ಣನ್ ಮನೆ ಮೇಲೆ ಶುಕ್ರವಾರ ಎಸ್ಐಟಿ ದಾಳಿ ನಡೆಸಿದ್ದು, ಆತನ ಮನೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಶಬರಿಮಲೆಯಲ್ಲಿ ಕಳ್ಳತನ ಆದ ಚಿನ್ನ ಎನ್ನುವುದು ಗೊತ್ತಿರದ ಕಾರಣ ನಾನು ಚಿನ್ನ ಖರೀದಿ ಮಾಡಿದ್ದೆ.ಕದ್ದಿದ್ದ ಚಿನ್ನ ಎಂದು ಗೊತ್ತಿದ್ದರೆ ಖರೀದಿ ಮಾಡುತ್ತಿರಲಿಲ್ಲ ಎಂದು ಗೋವರ್ಧನ್ ಕೇರಳ ಎಸ್ಐಟಿ ಮುಂದೆ ಹೇಳಿಕೊಂಡಿದ್ದಾನೆ. ಇದನ್ನು ಕೇಳಿದ ಅಧಿಕಾರಿಗಳು ಮುಂದೇನಾದರೂ ಅಗತ್ಯವಿದ್ದರೆ ತನಿಖೆಗೆ ಕರೆದಾಗ ಬರಬೇಕಾಗುತ್ತದೆ ಎಂದು ಹೇಳಿ ಹೊರಟಿದ್ದಾರೆ.
ಈ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧಿಕಾರಿ ಬಿ. ಮುರಾರಿ ಬಾಬು ಅವರನ್ನು ಎಸ್‌ಐಟಿ ಬಂಧಿಸಿತ್ತು. ಶಬರಿಮಲೆ ದೇವಸ್ಥಾನದ ಚಿನ್ನದ ದುರುಪಯೋಗ ಮತ್ತು ಉನ್ನಿಕೃಷ್ಣನ್ ಪೊಟ್ಟಿಗೆ ಸಂಬಂಧಿಸಿದ ಚಿನ್ನ ಲೇಪಿಸುವ ಕೆಲಸಗಳಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು ಇದೀಗ ಮತ್ತೊಮ್ಮೆ ಶ್ರೀರಾಮ್‌ಪುರ ಪೊಲೀಸರ ಸಹಕಾರದಿಂದ ಆರೋಪಿ ಪೋಟಿ ಉನ್ನಿಕೃಷ್ಣನ್ ನಿವಾಸದ ಮೇಲೆ ನಿನ್ನೆ(ಅ.24) ದಾಳಿ ನಡೆಸಿದ ಎಸ್ಐಟಿ ಅಧಿಕಾರಿಗಳು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ; ಎಸ್‌ಐಟಿಯಿಂದ ದೇವಸ್ಥಾನ ಮಂಡಳಿಯ ಮಾಜಿ ಅಧಿಕಾರಿ ಬಂಧನ
ದೇವಾಲಯದ ದ್ವಾರಪಾಲಕ ಮೂರ್ತಿಗಳಿಂದ 475 ಗ್ರಾಂ ಚಿನ್ನದ ಪ್ಲೇಟ್ ಕದ್ದ ಆರೋಪ ಎದುರಿಸುತ್ತಿರುವ ಉನ್ನಿಕೃಷ್ಣನ್ ಈಗ ಕೇರಳ ಎಸ್ಐಟಿ ವಶದಲ್ಲಿದ್ದಾನೆ. ಕಳುವಾದ ಚಿನ್ನವನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಮಾರಾಟ ಮಾಡಿದ ಆರೋಪ ತನಿಖೆಗೊಳಪಟ್ಟಿದ್ದು, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ದಾಳಿ ಮುಂದುವರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Sat, 25 October 25