ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದ ಸಚಿವ ಕೃಷ್ಣಭೈರೇಗೌಡ!
ಅಧಿಕಾರ ಹಂಚಿಕೆ, ಮುಂದಿನ ಸಿಎಂ ಯಾರು? ನವೆಂಬರ್ ಕ್ರಾಂತಿ ಇತ್ಯಾದಿ ಚರ್ಚೆಗಳು ಕರ್ನಾಟಕ ಕಾಂಗ್ರೆಸ್ನಲ್ಲಿ ಜೋರಾಗಿರುವ ಸಂದರ್ಭದಲ್ಲಿಯೇ, ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸದ್ಯ ಸಚಿವ ಕೃಷ್ಣಭೈರೇಗೌಡ ನೀಡಿರುವ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ಕಾಂಗ್ರೆಸ್ (Congress) ಪಕ್ಷದಲ್ಲಿ ನವೆಂಬರ್ ಕ್ರಾಂತಿ, ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ವಿಚಾರ ಜೋರಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶಗಳನ್ನು ಪಕ್ಷ ನೀಡಿದೆ. ನನ್ನನ್ನು ಗುರುತಿಸಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ. ಸಚಿವ ಸ್ಥಾನದ ತ್ಯಾಗಕ್ಕೆ ಸಿದ್ದ ಎಂದು ಅವರು ಹೇಳಿದ್ದಾರೆ.
ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ಜೋರಾಗಿರುವ ಸಂದರ್ಭದಲ್ಲಿ ಕೃಷ್ಣಭೈರೇಗೌಡರು ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದರು. ಸಂಪುಟ ಪುನಾರಚನೆ ಸಂಬಂಧ ಚರ್ಚೆಗಾಗಿಯೇ ಈ ಔತಣಕೂಟ ಏರ್ಪಟ್ಟಿತ್ತು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಈ ಚರ್ಚೆಯನ್ನು ಮುಖ್ಯಮಂತ್ರಿಗಳು ಹಾಗೂ ಇತರ ಕಾಂಗ್ರೆಸ್ ನಾಯಕರು ನಿರಾಕರಿಸಿದ್ದರು.
26 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ: ಕೃಷ್ಣಭೈರೇಗೌಡ
ಈ ಬಾರಿ 26 ಲಕ್ಷ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ. ಹಾಸನಾಂಬ ದೇವಿ ಅಂದರೆ ಹಸನ್ಮುಖಿ, ಪ್ರಸನ್ನತೆಯ ಸಂಕೇತ. ದೇವಿಯ ದರ್ಶನ ಪಡೆದ ಭಕ್ತರು ಸಂತೋಷದಿಂದ ಹೋಗಿದ್ದಾರೆ. ದರ್ಶನ ಪಡೆದ 26 ಲಕ್ಷ ಭಕ್ತರ ಪೈಕಿ ಶೇ 60ರಷ್ಟು ಮಹಿಳೆಯರು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮತ್ತೊಬ್ಬ ಪ್ರಭಾವಿ ಒಕ್ಕಲಿಗ ನಾಯಕನ ಪುತ್ರ ರಾಜಕೀಯಕ್ಕೆ ಎಂಟ್ರಿ
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯಿಂದಆಗಿಯೂ ಹೆಚ್ಚಿನ ಭಕ್ತರು ಬರಲು ಸಾಧ್ಯವಾಗಿದೆ. ದೇವರು ಯಾರ ಮನೆಯ ಸ್ವತ್ತು ಕೂಡ ಅಲ್ಲ. ಸಾಮಾನ್ಯರೆಲ್ಲರಿಗೂ ದರ್ಶನ ಸಿಗುವಂತೆ ಮಾಡಿದ್ದೇವೆ ಎಂದು ಕೃಷ್ಣಭೈರೇಗೌಡ ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Sat, 25 October 25



