ಮಂಡ್ಯ: ಮತ್ತೊಬ್ಬ ಪ್ರಭಾವಿ ಒಕ್ಕಲಿಗ ನಾಯಕನ ಪುತ್ರ ರಾಜಕೀಯಕ್ಕೆ ಎಂಟ್ರಿ
ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ನಂತರ ಇದೀಗ ಕರ್ನಾಟಕದ ಮತ್ತೊಬ್ಬ ಪ್ರಭಾವಿ ಒಕ್ಕಲಿಗ ನಾಯಕನ ಪುತ್ರ ರಾಜಕೀಯಕ್ಕೆ ಎಂಟ್ರಿ ಆಗುತ್ತಿದ್ದಾರೆ. ಕೃಷಿ ಸಚಿವ ಚಲುವರಾಯ ಸ್ವಾಮಿ ಪುತ್ರ ಸಚಿನ್ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಕೂಡ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಮಂಡ್ಯ, ಅಕ್ಟೋಬರ್ 25: ಕರ್ನಾಟಕದ ಮತ್ತೊಬ್ಬ ಪ್ರಭಾವಿ ಒಕ್ಕಲಿಗ ನಾಯಕ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಅವರ ಪುತ್ರ ಸಚಿನ್ (Sachin) ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸಹಕಾರಿ ಕ್ಷೇತ್ರದ ಮೂಲಕ ತಮ್ಮ ರಾಜಕೀಯ ಪಯಣ ಆರಂಭಿಸಲು ಸಚಿನ್ ತಯಾರಾಗಿದ್ದು, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಸಚಿವ ಚಲುವರಾಯಸ್ವಾಮಿ ಅವರು ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ನೇರವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡ ಅನುಭವದಿಂದ ಪಾಠ ಕಲಿತ ಚಲುವರಾಯಸ್ವಾಮಿ, ಸ್ಥಳೀಯ ರಾಜಕೀಯದಿಂದಲೇ ಮಗನಿಗೆ ಪಾಠ ಹೇಳಿಕೊಡಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಸಚಿನ್ ನಾಗಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕು ಮಟ್ಟದಿಂದ ಜಿಲ್ಲಾ ಸಹಕಾರಿ ರಾಜಕೀಯದತ್ತ ಪಾದಾರ್ಪಣೆ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಗನಿಗಾಗಿ ಕ್ಷೇತ್ರ ಬಿಡಲಿದ್ದಾರಾ ಚಲುವರಾಯಸ್ವಾಮಿ?
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಚಿನ್ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಸಚಿವ ಚಲುವರಾಯಸ್ವಾಮಿ ತಮ್ಮ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟು ಕೆ.ಆರ್.ಪೇಟೆಯಿಂದ ಸ್ಪರ್ಧಿಸಬಹುದೆಂಬ ಊಹಾಪೋಹಗಳು ಕೂಡ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ಕಾವೇರಿ ಆರತಿ ಬೇಕಂತ ಕೇಳಿದ್ದೀವಾ? ಸಚಿವ ಚಲುವರಾಯಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಮಂಡ್ಯ ರೈತರು
ವಿಧಾನಸಭಾ ಸ್ಪರ್ಧೆ ಸಾಧ್ಯವಾಗದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಸಚಿನ್ರನ್ನು ಕಣಕ್ಕಿಳಿಯುವ ಚಿಂತನೆ ಕೂಡ ಮಾಡಲಾಗಿದೆ ಎನ್ನಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 am, Sat, 25 October 25



