ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮಹತ್ವದ ಬೆಳವಣಿಗೆ: ಷಡ್ಯಂತ್ರದ ವಿಚಾರಣೆಗೆ ತಿಮರೋಡಿ ಸೇರಿ ನಾಲ್ವರಿಗೆ ನೋಟಿಸ್
ಹಲವು ತಿಂಗಳುಗಳಿಂದ ನಡೆಯುತ್ತಿರುವ ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಷಡ್ಯಂತ್ರದ ವಿಚಾರಣೆಗೆ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿ ನಾಲ್ವರಿಗೆ ಎಸ್ಐಟಿ ನೋಟಿಸ್ ನೀಡಿದ್ದು, ತನಿಖೆಗೆ ಮುಂದಾಗಿದೆ. ತನಿಖಾಧಿಕಾರಿಯು ನೋಟಿಸ್‌ನಲ್ಲಿ ಪ್ರಕರಣದ ಮಹತ್ವಪೂರ್ಣ ಅಂಶಗಳನ್ನು ಉಲ್ಲೇಖಿಸಿ, ತನಿಖೆಗೆ ಸಹಕರಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿಯೂ ಸಹ ಉಲ್ಲೇಖಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 25: ಧರ್ಮಸ್ಥಳ ಬುರುಡೆ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಎಸ್ಐಟಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈ ಪ್ರಕರಣದ ಕುರಿತು ವಿಚಾರಣೆಗಾಗಿ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ವರಿಗೆ ಎಸ್ಐಟಿ ನೋಟಿಸ್
ಸೋಮವಾರ ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿರುವ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ, ಹಾಜರಾಗದಿದ್ದರೆ ಬಂಧನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಬಿಎನ್ ಎಸ್ಎಸ್ 35(3) ಅಡಿಯಲ್ಲಿ ನೀಡಲಾದ ನೋಟಿಸ್‌ನಲ್ಲಿ, ಪ್ರಕರಣದ ಸಂದರ್ಭಗಳು ಮತ್ತು ಸಂಬಂಧಿತ ಸಂಗತಿಗಳನ್ನು ಖಚಿತಪಡಿಸಲು ಈ ನಾಲ್ವರ ಹಾಜರಾತಿ ಅಗತ್ಯವಿದ್ದುದಾಗಿ ವಿವರಿಸಲಾಗಿದೆ. ತನಿಖಾಧಿಕಾರಿಯು ನೋಟಿಸ್‌ನಲ್ಲಿ ಪ್ರಕರಣದ ಮಹತ್ವಪೂರ್ಣ ಅಂಶಗಳನ್ನು ಉಲ್ಲೇಖಿಸಿ, ಮಾಹಿತಿಯನ್ನು ದೃಢಪಡಿಸಲು ಅವರ ಸಹಕಾರವನ್ನು ಕೇಳಿದ್ದಾರೆ.
ಎಸ್ಐಟಿ ನೋಟಿಸ್ನಲ್ಲೇನಿದೆ?
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಾಲ್ವರಿಗೆ ಎಸ್ಐಟಿ ನೀಡಿರುವ ನೋಟಿಸ್‌ನಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ ಕಲಂ 35(3) ಅಡಿಯಲ್ಲಿ , ದಿನಾಂಕ 04/07/2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಕುರಿತಂತೆ ಸಂದರ್ಶನಕ್ಕಾಗಿ 27/10/2025 ರಂದು ಬೆಳಿಗ್ಗೆ 10.30ಕ್ಕೆ SIT ಕಛೇರಿಗೆ ಹಾಜರಾಗಲು ಸೂಚಿಸಲಾಗಿದೆ.
ನೋಟಿಸ್‌ನಲ್ಲಿ, ಆರೋಪಿಗಳಿಗೆ ಇವು ಕಡ್ಡಾಯವಾಗಿ ಪಾಲನೆ ಮಾಡಲು ಸೂಚಿಸಲಾಗಿದೆ: ಯಾವುದೇ ಅಪರಾಧ ನಡೆಸಬಾರದು, ಸಾಕ್ಷ್ಯಗಳಿಗೆ ಪ್ರಭಾವ ಬೀರಬಾರದು, ನ್ಯಾಯಾಲಯದ ಮುಂದೆ ಅಥವಾ ತನಿಖಾಧಿಕಾರಿಗಳ ಮುಂದೆ ಸಂಗತಿಗಳನ್ನು ಸತ್ಯಹೀನವಾಗಿ ಹೇಳಬಾರದು, ನ್ಯಾಯಾಲಯ/ತದನಂತರ ತನಿಖೆಯಲ್ಲಿ ಹಾಜರಾಗುವುದು, ಸಹಕಾರ ನೀಡುವುದು, ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಹಾಜರುಪಡಿಸುವುದು, ಆರೋಪಿಗಳ ಗುರುತಿಸುವಿಕೆ ಮತ್ತು ಬಂಧನದಲ್ಲಿ ಸಹಕಾರ ನೀಡುವುದು, ಮತ್ತು ಸಾಕ್ಷ್ಯಗಳನ್ನು ನಾಶಮಾಡದಂತೆ ಮಾಡುವುದು. ನೋಟಿಸ್ ಪಾಲನೆ ಮಾಡದಿದ್ದರೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಕಲಂ 35(6) ಅಡಿಯಲ್ಲಿ ದಸ್ತಗಿರಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಉಲ್ಲೇಖಿಸಲಾಗಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಚಿನ್ನಯ್ಯ ತಾನು 100 ಕ್ಕೂ ಹೆಚ್ಚು ಶವಗಳನ್ನು ಹೂತಿರುವುದಾಗಿ ಹೇಳಿದ್ದ. ಈ ಕುರಿತು ಸಾಕಷ್ಟು ಕಾರ್ಯಾಚರಣೆಗಳೂ ನಡೆದಿತ್ತು. ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವೆಂಬ ಆರೋಪಗಳೂ ವ್ಯಕ್ತವಾಗಿದೆ.ಅಅದಕ್ಕೆ ಪೂರಕವಾಗಿ ಎಸ್ಐಟಿ ತೆಗೆದುಕೊಂಡಿರುವ ಈ ನಿರ್ಧಾರ ಯಾವೆಲ್ಲ ಸತ್ಯಗಳನ್ನು ಬಿಚ್ಚಿಡಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



