ಪೆನ್​ಡ್ರೈವ್ ಹಂಚಿಕೆ ಆರೋಪ, ಚುನಾವಣೆ ಜಂಜಾಟದ ಮಧ್ಯೆ ಚಿಕ್ಕಮಗಳೂರಿನ ರೆಸಾರ್ಟ್​​ನಲ್ಲಿ ಡಿಕೆ ಸಹೋದರರ ವಾಸ್ತವ್ಯ!

ಲೋಕಸಭೆ ಚುನಾವಣೆ ನಿಮಿತ್ತ ರಾಜ್ಯಾದ್ಯಂತ ಪ್ರಚಾರ, ಓಡಾಟ ಮತ್ತು ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಹಂಚಿಕೆ ಆರೋಪದ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಡಿಕೆ ಬ್ರದರ್ಸ್ ತಮ್ಮ ಅಳಿಯನ ಒಡೆತನದ ಚಿಕ್ಕಮಗಳೂರಿನ ಸೆರಾಯ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಚಿಕ್ಕಮಗಳೂರು, ಮೇ.08: ರಾಜ್ಯದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೆಚ್​.ಡಿ.ರೇವಣ್ಣ ವಿರುದ್ಧ ಲೌಂಗಿಕ ದೌರ್ಜನ್ಯ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಮೇಲೂ ಸಾಲು ಸಾಲು ಆರೋಪಗಳನ್ನು ಮಾಡಲಾಗುತ್ತಿದೆ. ಇನ್ನು ಮತ್ತೊಂದೆಡೆ ಲೋಕಸಭಾ ಚುನಾವಣೆಯ ಮತದಾನ ಮುಗಿದ ಹಿನ್ನೆಲೆ ಎಲ್ಲಾ ಜಂಜಾಟಗಳನ್ನು ತೊರೆದು ಡಿಕೆ ಶಿವಕುಮಾರ್ ಚಿಕ್ಕಮಗಳೂರಿನ ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಂಜೆಯೇ ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ರೆಸಾರ್ಟ್​ಗೆ ಆಗಮಿಸಿದ್ದು ಡಿಸಿಎಂ ಡಿಕೆಗೆ ಕುಣಿಗಲ್ ಶಾಸಕ ರಂಗನಾಥ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಾಥ್​ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಮುನ್ನಲೆಗೆ ಬಂದಿತ್ತು. ನಿನ್ನೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು ಡಿಸಿಎಂ ಡಿಕೆ.ಶಿವಕುಮಾರ್ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಿದ್ದರು. ಪೊಲೀಸರಿಗೆ ಹೆದರಿಸಿ ಪೆನ್​​ಡ್ರೈವ್ ಹಂಚಿಕೆ ಮಾಡಿದ್ದಾರೆ. ಎಸ್​ಐಟಿ ಅಂದ್ರೆ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಗುಡುಗಿದ್ದರು. ರಾಜ್ಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಮೇಲೆ ಆಕ್ರೋಶ ಹೊರ ಹಾಕಿದ್ದರು. ಇನ್ನು ಮತ್ತೊಂದೆಡೆ ರಾಜ್ಯದಲ್ಲಿ ನಿನ್ನೆ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮುಗಿದ ಹಿನ್ನೆಲೆ ಡಿಕೆ ಬ್ರದರ್ಸ್ ರಿಲ್ಯಾಕ್ಸ್ ಮೂಡ್​ಗೆ ಜಾರಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ಮಾಹಿತಿ ಇದ್ದಂತಿದೆ-HD ಕುಮಾರಸ್ವಾಮಿ

ತಮ್ಮ ಮೇಲಿನ ಆರೋಪ, ಚುನಾವಣೆ ದಣಿವು ನೀಗಿಸಿಕೊಳ್ಳಲು ಚಿಕ್ಕಮಗಳೂರು ತಾಲೂಕಿನ ಮೂಕ್ತಿಹಳ್ಳಿ ಗ್ರಾಮದ ಬಳಿ ಇರುವ, ತಮ್ಮ ಅಳಿಯನ ಒಡೆತನದ ಸೆರಾಯ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಂಜೆಯೇ ರೆಸಾರ್ಟ್​ಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಸೆರಾಯ್​ ರೆಸಾರ್ಟ್​​ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರೆಸಾರ್ಟ್ ನೊಳಗೆ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿದೆ.

ಇಡೀ ದಿನ ಹೆಲಿಕಾಪ್ಟರ್ ನಲ್ಲೇ ಡಿಸಿಎಂ ಸಂಚಾರ

ಇನ್ನು ಬೆಂಗಳೂರಿನಿಂದ ಚಿಕ್ಕಮಗಳೂರು ನಗರದ IDSG ಕಾಲೇಜಿನ ಹೆಲಿಪ್ಯಾಡ್​ಗೆ ಹೆಲಿಕಾಪ್ಟರ್ ಒಂದು ಆಗಮಿಸಿದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರು ಇಡೀ ದಿನ ಹೆಲಿಕಾಪ್ಟರ್​ನಲ್ಲೇ ಸಂಚಾರ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಡಿಕೆ ಶಿವಕುಮಾರ್​ಗೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ಹಿನ್ನೆಲೆ ಇಂದು ಹೆಲಿಕಾಪ್ಟರ್ ನಲ್ಲೇ ಡಿ.ಕೆ ಶಿವಕುಮಾರ್ ರೌಂಡ್ಸ್ ಹಾಕಲಿದ್ದಾರೆ. ಚಿಕ್ಕಮಗಳೂರಿನಿಂದ ಕತ್ತಲೆಖಾನ್ ಎಸ್ಟೇಟ್​ಗೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ. ಮಧ್ಯಾಹ್ನ ವಾಪಸ್ ಚಿಕ್ಕಮಗಳೂರು ನಗರಕ್ಕೆ ಬರಲಿದ್ದಾರೆ. ಸಂಜೆ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕವೇ ತೆರಳಲಿದ್ದಾರೆ. ಶಿವಕುಮಾರ್
ಹೆಲಿಪ್ಯಾಡ್ ಸುತ್ತ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:00 am, Wed, 8 May 24