Madal virupakshappa: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್

|

Updated on: Mar 17, 2023 | 5:01 PM

ಲಂಚ ಪ್ರಕರಣದಲ್ಲಿ ಲೋಕಾಯುಕ್ತದಿಂದ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಉಭಯ ವಕೀಲರ ವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ. ನಟರಾಜನ್, ಆದೇಶವನ್ನು ಕಾಯ್ದಿರಿಸಿದರು.

Madal virupakshappa: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಮಾಡಾಳ್ ವಿರೂಪಾಕ್ಷಪ್ಪ
Image Credit source: vijaykarnataka.com
Follow us on

ಬೆಂಗಳೂರು: ಲಂಚ ಪ್ರಕರಣದಲ್ಲಿ ಲೋಕಾಯುಕ್ತದಿಂದ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal virupakshappa) ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಏಕ ಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ, ಮಾಡಾಳ್ ಪರ ವಕೀಲರು ಹಾಗೂ ಲೋಕಾಯಕ್ತ ವಕೀಲರು ಭರ್ಜರಿಯಾಗಿಯೇ ವಾದ ಮಂಡನೆ ಮಾಡಿದರು. ಉಭಯ ವಕೀಲರ ವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ. ನಟರಾಜನ್, ಆದೇಶವನ್ನು ಕಾಯ್ದಿರಿಸಿದರು. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆರಂಭಿಸಿದ ಕೂಡಲೇ ಅದಕ್ಕೆ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸಿದರು. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು. ಈ ಮಧ್ಯೆ, ಮಾಡಾಳ್ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದರು. ಆದರೆ ಅವರ ಮನವಿಯನ್ನು ಹೈಕೋರ್ಟ್ ನಿರಾಕರಿಸಿ, ಕೂಡಲೇ ವಾದಮಂಡನೆ ಆರಂಭಿಸುವಂತೆ ಸೂಚಿಸಿತು.

ಮಾಡಾಳ್ ಅವರು ಪ್ರತಿದಿನವೂ ಲೋಕಾಯುಕ್ತ ಪೊಲೀಸರ ತನಿಖೆಗೆ ಹಾಜರಾಗಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ತನಿಖೆಯೇ ಮುಕ್ತಾಯದ ಹಂತದಲ್ಲಿರುವಾಗ ಬಂಧನದ ಅಗತ್ಯವಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮಾಡಾಳ್ ಪರ ವಕೀಲರು ವಾದ ಮಂಡಿಸಿದರು.

ಇಂದಿನ ದಿನಗಳಲ್ಲಿ ಲಂಚವನ್ನು ನೇರವಾಗಿ ಪಡೆಯುವುದಿಲ್ಲ. ಇಲ್ಲೂ ಸಹ ಪುತ್ರನ ಮೂಲಕ ಲಂಚವನ್ನು ಪಡೆದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.

ಕೆಎಸ್​​ಡಿಎಲ್ ಅಧ್ಯಕ್ಷರೇ ಬೇಡಿಕೆ ಇಟ್ಟಿದ್ದರೇ?

ಈ ವೇಳೆ, ಲಂಚಕ್ಕೆ ಕೆಎಸ್​​ಡಿಎಲ್ ಅಧ್ಯಕ್ಷರೇ ಬೇಡಿಕೆ ಇಟ್ಟಿದ್ದರೇ? ಲಂಚಕ್ಕೆ ಬೇಡಿಕೆ ಇಟ್ಟದ್ದಕ್ಕೆ, ಪಡೆದದ್ದಕ್ಕೆ ಸಾಕ್ಷ್ಯವಿದೆಯೇ? ಎಂದು ಲೋಕಾಯುಕ್ತ ಪೊಲೀಸರನ್ನು ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ. ನಟರಾಜನ್ ಪ್ರಶ್ನಿಸಿದರು. ಮಾಡಾಳ್ ಪುತ್ರನ ಜತೆಗಿನ ಮಾತುಕತೆ ವೇಳೆ ಅವರ ತಂದೆಯ ಬಗ್ಗೆ ಪ್ರಸ್ತಾಪವಾಗಿತ್ತೇ ಎಂದು ಅವರು ಪ್ರಶ್ನಿಸಿದರು.

ನ್ಯಾಯಮೂರ್ತಿ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಹಾರನಹಳ್ಳಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೂಚನೆ ಮೇರೆಗೇ ದೂರುದಾರರು ಪುತ್ರನನ್ನು ಭೇಟಿಯಾಗಿದ್ದರು. ಬಿಲ್ ಪಾವತಿಗೆ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. 81 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಕುರಿತ ಸಂಭಾಷಣೆಯನ್ನು ದೂರುದಾರರು ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Madal Virupakshappa: ಪಕ್ಷದಿಂದ ಉಚ್ಚಾಟಿಸುವುದಾಗಿ ಸಿಎಂ ಹೇಳಿದ್ದರು; ಮಾಡಾಳ್ ವಿರೂಪಾಕ್ಷಪ್ಪ

ತಂದೆ ಮತ್ತು ಮಗ ಒಂದೇ ಮನೆಯಲ್ಲಿ ವಾಸವಾಗಿದ್ದರೇ ಎಂದು ಹೈಕೋರ್ಟ್ ಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಲೋಕಾಯುಕ್ತ ಪೊಲೀಸರ ಪರ ವಕೀಲರು, ಬೆಂಗಳೂರಿನಲ್ಲಿ ಇರುವಾಗ ಮಗನ ಮನೆಯಲ್ಲಿ ಇರುತ್ತಿದ್ದರು. ವಿರೂಪಾಕ್ಷಪ್ಪ ಬಳಸುತ್ತಿದ್ದ ಬೆಡ್ ರೂಮಿನಿಂದಲೂ 10 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಬೆಡ್ ರೂಮ್ ಅನ್ನು ಮಾವ ಬಳಸುತ್ತಿದ್ದರೆಂದು ಅವರ ಸೊಸೆ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಏಕ ಸದಸ್ಯ ಪೀಠ ಹೇಳಿದ್ದೇನು?

ಈ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸುವ ಅಗತ್ಯವೇನಿದೆ‌? ಬಂಧಿಸಿ ಕುರ್ಚಿಗೆ ಕೈಕಟ್ಟಿ ವಿಚಾರಣೆಗೆ ಒಳಪಡಿಸುತ್ತೀರಾ? ಸಿನಿಮಾ ಮಾದರಿಯಲ್ಲೇನಾದರೂ ವಿಚಾರಣೆಗೆ ಒಳಪಡಿಸುತ್ತೀರಾ? ಪ್ರತಿ ದಿನ ವಿಚಾರಣೆಗೆ ಹಾಜರಾಗಿದ್ದಾರೆ,‌ ತನಿಖೆಗೂ ಒಳಗಾಗಿದ್ದಾರೆ. ಹೀಗಿದ್ದಾಗ ಬಂಧಿಸಿ ವಿಚಾರಣೆಗೆ ಒಳಪಡಿಸುವ ಅಗತ್ಯವೇನಿದೆ ಎಂದು ಲೋಕಾಯುಕ್ತ ಪೊಲೀಸರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಶೋಕ್ ಹಾರನಹಳ್ಳಿ, ಈ ಮಾನದಂಡ ಅನುಸರಿಸಿದರೆ ಎಲ್ಲ ಪ್ರಕರಣಗಳಲ್ಲೂ ನಿರೀಕ್ಷಣಾ ಜಾಮೀನು ನೀಡಬೇಕಾಗಲಿದೆ. ಬಂಧಿಸಿದಾಗ ತನಿಖಾಧಿಕಾರಿಗೆ ಹೆಚ್ಚಿನ‌ ಮಾಹಿತಿ ಲಭ್ಯವಾಗುತ್ತದೆ ಎಂದು ವಾದ ಮಂಡಿಸಿದರು.

ಈ ಮಧ್ಯೆ, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಸಿಆರ್​ಪಿಸಿ ಸೆಕ್ಷನ್ 164ರ ಅಡಿ ಕೆಎಸ್​ಡಿಎಲ್ ವ್ಯವಸ್ಥಾಪಕ ನಿರ್ದೇಶಕರು ಸ್ವಇಚ್ಛಾ ಹೇಳಿಕೆ ದಾಖಲಿಸಿದರು.

ಪ್ರಶಾಂತ್ ಅವರು ಕೆಎಸ್​ಡಿಎಲ್ ವ್ಯವಸ್ಥಾಪಕ ನಿರ್ದೇಶಕರ ಜತೆ ಟೆಂಡರ್ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಹೆಸರೂ ಪ್ರಸ್ತಾಪವಾಗಿದೆ. ಮಾಡಾಳ್ ವಿರೂಪಾಕ್ಷಪ್ಪ ಪ್ರತಿದಿನ ನೋಟ್ಸ್ ಬರೆದುಕೊಂಡು ಬರುತ್ತಿದ್ದಾರೆ. ಅದನ್ನು ನೋಡಿ ಪೊಲೀಸರಿಗೆ ಹೇಳಿಕೆ ನೀಡುತ್ತಾರೆ. ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ತನಿಖೆಗೆ ಅನುಕೂಲ ಎಂದು ಹೈಕೋರ್ಟ್​ಗೆ ಲೋಕಾಯುಕ್ತ ಪರ ವಕೀಲರು ತಿಳಿಸಿದರು.

ತನಿಖಾಧಿಕಾರಿಯು ಟ್ರಾಪ್ ಮಹಜರ್​​ನಲ್ಲಿ ಆರೋಪಿ ನಂ 1 ವಿರುದ್ಧ ಸಾಕ್ಷ್ಯವಿಲ್ಲವೆಂದು ಹೇಳಿದ್ದರು. ತನಿಖೆ ವೇಳೆ ಬಂಧಿಸುವ ಅಗತ್ಯವಿಲ್ಲವೆಂದೂ ಹೇಳಿದ್ದರು. ಹೀಗಾಗಿಯೇ ಮಧ್ಯಂತರ ಜಾಮೀನು ನೀಡಲಾಗಿತ್ತು ಎಂದು ಹೈಕೋರ್ಟ್ ನ್ಯಾ. ಕೆ. ನಟರಾಜನ್ ಸ್ಪಷ್ಟನೆ ನೀಡಿದರು. ನಂತರ, ಇಂದಿನ ವಿಚಾರಣೆಯ ಆದೇಶವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ