ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಶಾಕ್, ಸುಪ್ರೀಂಕೋರ್ಟ್ ಮೊರೆ ಹೋದ ಲೋಕಾಯುಕ್ತ, ಎಲ್ಲರ ಚಿತ್ತ ಕೋರ್ಟ್ ನತ್ತ
ಪುತ್ರನ ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜಾಮೀನು ಪಡೆದುಕೊಂಡಿರುವ ಬಿಜೆಪಿ ಮಾಡಾಳ್ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಬಿಗ್ ಶಾಕ್ ಕೊಟ್ಟಿದ್ದು, ವಿರೂಪಾಕ್ಷಪ್ಪ ಭವಿಷ್ಯ ಇಂದು ನಿರ್ಧಾರವಾಗಲಿದೆ.
ನವದೆಹಲಿ/ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ(BJP MLA Madal Virupakshappa) ಹೈಕೋರ್ಟ್ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ತಡೆ ನೀಡುವಂತೆ ಲೋಕಾಯುಕ್ತ(Karnataka Loyayukta) ಸುಪ್ರೀಂ ಕೋರ್ಟ್(Supreme Court) ಮೊರೆ ಹೋಗಿದೆ. ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಕರ್ನಾಟಕ ಹೈಕೋರ್ಟ್, ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ಲೋಕಾಯುಕ್ತ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿಸಲ್ಲಿಸಿದ್ದು, ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇಂದು (ಮಾರ್ಚ್ 14) ಮಧ್ಯಾಹ್ನ 2ಗಂಟೆ ನಂತರ ಅರ್ಜಿ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಅಷ್ಟೊಂದು ಹಣ ಪತ್ತೆಯಾಗಿದ್ದರೂ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಸಿಕ್ಕಿದ್ದೇಕೆ? ಇಲ್ಲಿವೆ ಕಾರಣಗಳು
ಲೋಕಾಯುಕ್ತ ಪರ ವಕೀಲರಿಗೆ ಸುಪ್ರೀಂಕೋರ್ಟ್ ತರಾಟೆ
2ನೇ ಬಾರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ ಪ್ರಸ್ತಾಪ ಮಾಡಲಾಯಿತು. ಅರ್ಜಿ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ನ್ಯಾಯಮೂರ್ತಿ ಸಂಜಯ್ ಕೌಲ್ ಕೋಪಗೊಂಡಿದ್ದು, ಅರ್ಜಿಯಲ್ಲಿ ತುರ್ತು ವಿಚಾರಣೆ ಮಾಡುವಂತಹದ್ದು ಏನಿದೆ? ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕಾ ಎಂದು ಪ್ರಶ್ನಿಸಿದರು. ಇದಕ್ಕೆ ಲೋಕಾಯುಕ್ತ ಪರ ವಕೀಲ ಪ್ರತಿಕ್ರಿಯಿಸಿ, ಮಾಡಾಳ್ ವಿರೂಪಾಕ್ಷಪ್ಪ ಹಾಲಿ ಶಾಸಕರಾಗಿದ್ದಾರೆ. ಅಪಾರ ಪ್ರಮಾಣ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಮೂರ್ತಿ ಸಂಜಯ್ ಕೌಲ್ ಪ್ರಶ್ನೆಗೆ ಉತ್ತರಿಸಿದರು.
ಈ ಮೊದಲು ಲೋಕಾಯಿಕ್ತ ಪರ ವಕೀಲರು ಸಿಜೆ ಚಂದ್ರಚೂಡ್ ಪೀಠದಲ್ಲಿ ಪ್ರಸ್ತಾಪಿಸಿದ್ದರು. ಸಾಂವಿಧಾನಿಕ ಪೀಠದಲ್ಲಿರುವ ಹಿನ್ನೆಲೆ ನ್ಯಾ.ಕೌಲ್ ಪೀಠದಲ್ಲಿ ವಿಚಾರಣೆ ನಡೆಸಲು ಸಿಜೆಐ ಚಂದ್ರಚೂಡ್ ಸೂಚಿಸಿದರು. ಅದರಂತೆ ನ್ಯಾ.ಕೌಲ್ ಪೀಠಮಧ್ಯಾಹ್ನದ ನಂತರ ವಿಚಾರಣೆ ನಡೆಸುವುದಾಗಿ ಹೇಳಿತ್ತು.
ವಿರೂಪಾಕ್ಷಪ್ಪ ಅವರು ತನಿಖಾ ಅಧಿಕಾರಿಗೆ ಸಹಕರಿಸದ ಕಾರಣ ಅವರನ್ನು ಕಸ್ಟಡಿಯಲ್ಲಿಡುವ ಅಗತ್ಯವಿದೆ ಎಂದು ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವ ವಿಶೇಷ ರಜೆ ಅರ್ಜಿಯಲ್ಲಿ (SLP) ಹೇಳಿದ್ದಾರೆ. ಇತ್ತೀಚೆಗೆ ಅವರ ವಿಚಾರಣೆ ವೇಳೆ ಅವರು ತಮ್ಮ ತೋಟದ ಮನೆಯಲ್ಲಿ ಮತ್ತು ಮಗನ ಖಾಸಗಿ ಕಚೇರಿಯಲ್ಲಿ ಹಣದ ಮೂಲದ ಬಗ್ಗೆ ಯಾವುದೇ ಸಮರ್ಪಕ ದಾಖಲೆಗಳನ್ನು ನೀಡದೇ ನುಣುಚಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಲೋಕಾಯುಕ್ತ ಅರ್ಜಿಯಲ್ಲಿ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಾಡಾಳ್ ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದುಗೊಳಿಸುತ್ತಾ ಅಥವಾ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುತ್ತಾ ಎಂದು ಕುತೂಹಲ ಮೂಡಿಸಿದ್ದು, ಇದೀಗ ಎಲ್ಲರ ಚಿತ್ತ ಸುಪ್ರೀಂಕೋರ್ಟ್ನತ್ತೆ ನೆಟ್ಟಿದೆ.
ಪ್ರಕರಣ ಹಿನ್ನೆಲೆ
ಮಾರ್ಚ್ 2ರಂದು ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಬೆಂಗಳೂರು ಜಲಮಂಡಳಿಯ ಚೀಫ್ ಅಕೌಂಟಿಂಗ್ ಆಫೀಸರ್ ಮಾಡಾಳ್ ಪ್ರಶಾಂತ್ ಅವರು 40 ಲಕ್ಷ ರೂ. ಹಣವನ್ನು ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಈ ವೇಳೆ ಪ್ರಶಾಂತ್ ಅವರಿಗೆ ಹಣ ಕೊಡಲು ಬಂದ ವ್ಯಕ್ತಿಗಳು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ಸಂಬಂಧಪಟ್ಟ ಹಣವಾಗಿದೆ ಎಂದು ಹೇಳಿದ್ದರು. ಬಳಿಕ ಲೋಕಾಯುಕ್ತ ಅಧಿಕಾರಿಗಳು ವಿರುಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ನಿವಾಸದ ಮೇಲೆ ದಾಳಿ ಮಾಡಿತ್ತು. ಬೆಂಗಳೂರಿನ ಮನೆ, ಕಚೇರಿ, ಚನ್ನೇಶಪುರ ಗ್ರಾಮದ ಮನೆಯಲ್ಲಿ ಕಾರ್ಯಚರಣೆ ನಡೆಸಿತ್ತು, ಈ ವೇಳೆ ಕೋಟಿ ಕೋಟಿ ಹಣ, ಚಿನ್ನ, ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿದ್ದವು.
ಇನ್ನು ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ 6 ದಿನಗಳ ಕಾಲ ಸಿಗದೇ ಕಣ್ಮರೆಸಿಕೊಮಡಿದ್ದ ಮಾಡಾಳ್ ವಿರುಪಾಕ್ಷಪ್ಪ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿದ್ದರು. ಆದ್ರೆ, ಲೋಯುಕ್ತರ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿಲ್ಲ ಎಂದು ತಿಳಿದುಬಂದಿದೆ.
Published On - 12:34 pm, Tue, 14 March 23