ಬೆಂಗಳೂರು, ನವೆಂಬರ್ 21: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಬುಧವಾರ ರಾತ್ರಿ ವೇಳೆಗೆ ಮತಗಟ್ಟೆ ಸಮೀಕ್ಷೆಗಳೂ ಹೊರಬಿದ್ದಿವೆ. ಮಹಾವಿಕಾಸ್ ಅಘಾಡಿಯನ್ನು ಹಿಂದಿಕ್ಕಿ ಬಿಜೆಪಿ ಮೈತ್ರಿಕೂಟ ಮಹಾಯುತಿ ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆಗಳನ್ನು ಎಕ್ಸಿಟ್ಪೋಲ್ ಸಮೀಕ್ಷೆಗಳು ನುಡಿದಿವೆ. ಏತನ್ಮಧ್ಯೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕೆಲವು ವಿಶೇಷಗಳಿಗೂ ಸಾಕ್ಷಿಯಾಗಿದೆ.
ಬೆಳಗಾವಿ ಗಡಿ ಭಾಗದ ಪ್ರದೇಶಗಳ ಮತಗಟ್ಟೆಗಳಲ್ಲಿ ಇಡಲಾಗಿದ್ದ ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಹೆಸರುಗಳ ಮರಾಠಿ ಜತೆ ಕನ್ನಡದಲ್ಲಿಯೂ ಕಾಣಿಸಿದೆ! ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಇಂಥದ್ದೊಂದು ಕ್ರಮವನ್ನು ಕೈಗೊಂಡಿದೆ.
15 ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ ಯಂತ್ರಗಳಲ್ಲಿ ಕನ್ನಡ ಹಾಗೂ ಮರಾಠಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರದರ್ಶಿಸಲಾಗಿತ್ತು ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಲಾತೂರ್, ಮಂಗಳವೇಡ್, ಅಕ್ಕಲಕೋಟ, ಜತ್ತ್ ಮತ್ತು ದಕ್ಷಿಣ ಸೊಲ್ಲಾಪುರ ಸೇರಿದಂತೆ 15 ವಿಧಾನಸಭಾ ಕ್ಷೇತ್ರಗಳಲ್ಲಿ ಕನ್ನಡ ಮಾತನಾಡುವವರೇ ಹೆಚ್ಚು. ಮಹಾರಾಷ್ಟ್ರದ ಈ ಕ್ಷೇತ್ರಗಳಲ್ಲಿ ಕನಿಷ್ಠ 50 ರಿಂದ 60 ಲಕ್ಷ ಕನ್ನಡ ಮಾತನಾಡುವವರಿದ್ದು, ಹೆಚ್ಚಿನವರು ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಈ ಪ್ರದೇಶಗಳ ಮತಗಟ್ಟೆಗಳಲ್ಲಿ ಅಳವಡಿಸಿದ್ದ ಇವಿಎಂಗಳಲ್ಲಿ ಕನ್ನಡದಲ್ಲಿಯೂ ಅಭ್ಯರ್ಥಿಗಳ ಹೆಸರನ್ನು ಮುದ್ರಿಸಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ.
ಕನ್ನಡಿಗ ಮತದಾರರ ಮಹತ್ವವನ್ನು ಮನಗಂಡ ವಿವಿಧ ಪಕ್ಷಗಳ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಪ್ರಮುಖ ಕನ್ನಡಿಗ ನಾಯಕರನ್ನು ಸ್ಟಾರ್ ಪ್ರಚಾರಕರನ್ನಾಗಿ ಆಹ್ವಾನಿಸಿದ್ದರು ಎಂಬುದು ಗಮನಾರ್ಹ.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಇತ್ತೀಚೆಗೆ ಮಹಾರಾಷ್ಟ್ರದ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿ, ಕರ್ನಾಟಕ-ಮಹಾರಾಷ್ಟ್ರ ಗಡಿ ರೇಖೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಕೋರಿತ್ತು. ಅಚ್ಚರಿಯ ಸಂಗತಿಯೆಂದರೆ, ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಚುನಾವಣಾ ಭಾಷಣಗಳಲ್ಲಿ ಗಡಿ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಎಂಇಎಸ್ಬೇಡಿಕೆಗೆ ಸೊಪ್ಪುಹಾಕಿರಲಿಲ್ಲ. ಬದಲಾಗಿ ಕನ್ನಡ ಮತದಾರರನ್ನು ತಲುಪಲು ಕನ್ನಡದಲ್ಲಿ ಪೋಸ್ಟರ್, ಹ್ಯಾಂಡ್ ಬಿಲ್ ಗಳನ್ನು ಮುದ್ರಿಸಿದ್ದರು.
ಮಹಾರಾಷ್ಟ್ರದ ಹಲವು ಗಡಿ ಗ್ರಾಮಗಳಲ್ಲಿ ಕನ್ನಡ ಭಾಷಿಕರು ತಮ್ಮ ಬಗ್ಗೆ ಸರ್ಕಾರದ ನಿರಾಸಕ್ತಿಯನ್ನು ಖಂಡಿಸಿ ಚಳವಳಿಯನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೆ, ತಮ್ಮ ಗ್ರಾಮಗಳನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವ ಬಯಕೆಯನ್ನು ವ್ಯಕ್ತಪಡಿಸಿ ಪಂಚಾಯಿತಿಗಳಲ್ಲಿ ನಿರ್ಣಯಗಳನ್ನು ಸಹ ಮಾಡಿದ್ದರು. ಇದರ ಬೆನ್ನಲ್ಲೇ ಮಹರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕನ್ನಡ ಭಾಷಿಕರನ್ನು ಓಲೈಸಿದ್ದಾರೆ. ಕನ್ನಡ ಮಾತನಾಡುವ ಹಳ್ಳಿಗಳಲ್ಲಿ ಆದ್ಯತೆಯ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಚುನಾವಣಾ ಆಯೋಗವೂ ಕನ್ನಡಿಗರ ಹಿತದೃಷ್ಟಿಯಿಂದ ಕ್ರಮ ಕೈಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ