ಬೆಂಗಳೂರು: ಬೆಳಗಾವಿ (Belagavi) ಗಡಿ ಪ್ರದೇಶದ ಗ್ರಾಮಗಳಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ (Maharashtra) ಸರ್ಕಾರ 865 ಗ್ರಾಮಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಏಪ್ರಿಲ್ 3ರಂದು ನಿರ್ಣಯ ಕೈಗೊಂಡಿತ್ತು. ಈಗಾಗಲೇ ಅಂತ್ಯೋದಯ ಆಹಾರ ಯೋಜನೆಯ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಕೈಗೊಂಡಿರುವ ಉಪಕ್ರಮ) ಫಲಾನುಭವಿಗಳಾಗಿರುವ ಜನರು, ಆದ್ಯತಾ ಗುಂಪಿನ ಕುಟುಂಬಗಳು, ಅನ್ನಪೂರ್ಣ ರೇಶನ್ ಕಾರ್ಡ್ದಾರರು ಮಾಹಾತ್ಮ ಜ್ಯೋತಿ ರಾವ್ ಫುಲೆ ಜನ ಆರೋಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರದ ನಿರ್ಣಯ ಉಲ್ಲೇಖಿಸಿದೆ.
ಬೆಳಗಾವಿ, ಕಾರವಾರ, ಕಲಬುರ್ಗಿ ಮತ್ತು ಬೀದರ್ ಗಡಿ ವ್ಯಾಪ್ತಿಯ 865 ಗ್ರಾಮಗಳನ್ನು ಆರೋಗ್ಯ ಯೋಜನೆಯಡಿ ಸೇರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶದ ಪ್ರಕಾರ, ಈ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳು ಸರ್ಕಾರದಿಂದ ಗುರುತಿಸಲ್ಪಟ್ಟ 996 ರೀತಿಯ ಚಿಕಿತ್ಸೆಗಳಿಗೆ ವರ್ಷಕ್ಕೆ 1.50 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ವಿಮೆಯನ್ನು ಪಡೆಯಲಿವೆ.
ಮಹಾರಾಷ್ಟ್ರ ಸರ್ಕಾರವು ರಾಜ್ಯದ ಹಲವಾರು ಆಸ್ಪತ್ರೆಗಳನ್ನು ಗುರುತಿಸಿದ್ದು, ಅವುಗಳಲ್ಲಿ ಜನರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ ವಿರೋಧಿಸಿದರೂ ಬೆಳಗಾವಿ ಗಡಿ ಪ್ರದೇಶದಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸಿಯೇ ಸಿದ್ಧ; ಮಹಾರಾಷ್ಟ್ರ ಶಾಸಕ
ಬೆಳಗಾವಿ ಗಡಿ ವಿಚಾರದಲ್ಲಿ ಉಭಯ ರಾಜ್ಯಗಳ ನಡುವೆ ಸಂಘರ್ಷ ಇದ್ದು, ಇದೀಗ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಮತ್ತಷ್ಟು ವಿವಾದಕ್ಕೆ ಕಾರಣವಾಗಲಿದೆ. ಬೆಳಗಾವಿ ಗಡಿ ಪ್ರದೇಶದಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಹಮ್ಮಿಕೊಂಡಿರುವ ಆರೋಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ ತಡೆಯಲು ಮುಂದಾದರೂ ನಾವದನ್ನು ಹೇಗಾದರೂ ಮಾಡಿ ಜಾರಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಮಹಾರಾಷ್ಟ್ರದ ಶಾಸಕ ಶಂಭುರಾಜ್ ದೇಸಾಯಿ ಇತ್ತೀಚೆಗೆ ಹೇಳಿದ್ದರು.
ಬೆಳಗಾವಿ ಗಡಿ ಪ್ರದೇಶದಲ್ಲಿ ಮರಾಠಿ ಮಾತನಾಡುವ ಜನರಿಗಾಗಿ ಮಹಾರಾಷ್ಟ್ರ ಸರ್ಕಾರ ಹಮ್ಮಿಕೊಂಡಿರುವ ಆರೋಗ್ಯ ಯೋಜನೆ ಕರ್ನಾಟಕದಲ್ಲಿ ರಾಜಕೀಯ ಜಿದ್ದಾಜಿದ್ದಿ, ವಾಕ್ಸಮರಕ್ಕೆ ಕಾರಣವಾಗಿತ್ತು. ಕರ್ನಾಟಕದ ಮಹಾರಾಷ್ಟ್ರದ ಗಡಿಭಾಗದ ಹಳ್ಳಿಗಳಲ್ಲಿ ವಿವಿಧ ಯೋಜನೆಗಳ ಜಾರಿಗೆ ಮಹಾರಾಷ್ಟ್ರ ಸರ್ಕಾರ ₹54 ಕೋಟಿ ಮಂಜೂರು ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದು ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ನಡೆ. ನಾಡಿನ ಹಿತಕ್ಕೆ ಜೀವ ಪಣಕ್ಕಿಟ್ಟು ಹೊರಡಲು ನಾವು ಸಿದ್ಧ. ಕನ್ನಡಿಗರ ಸ್ವಾಭಿಮಾನ, ಕನ್ನಡದ ನೆಲ ಬಲಿ ಕೊಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿ ಪ್ರದೇಶಕ್ಕೆ ಅನುದಾನ ಬಿಡುಗಡೆ ಮಾಡಿದರೆ ನಾನ್ಯಾಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ್ದರು. ಜತೆಗೆ, ನಾವೂ ಕೂಡ ಮಹಾರಾಷ್ಟ್ರದಲ್ಲಿರುವ ಫಂಡರಪುರ, ತುಳಜಾಪುರಕ್ಕೆ ಹೋಗುವ ಕರ್ನಾಟಕದವರಿಗೆ ಹಣ ಬಿಡುಗಡೆ ಮಾಡುತ್ತೇವೆ. ಅವರು ಯಾವ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ. ಮಹಾರಾಷ್ಟ್ರದ ಹಸ್ತಕ್ಷೇಪವನ್ನು ಯಾವ ರೀತಿಯಲ್ಲಿ ತಡೆಗಟ್ಟಬೇಕು ಎಂಬುದರ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಹೇಳಿದ್ದರು.
Published On - 8:17 pm, Tue, 4 April 23