
ಚಿತ್ರದುರ್ಗ, ಅಕ್ಟೋಬರ್ 21: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಮುಖ್ಯ ಶಿಕ್ಷಕ ಕ್ರೌರ್ಯ ಮೆರೆದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ ನಡೆದಿತ್ತು. ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿ ಮೇಲೆ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ. ಈ ಕೇಸ್ಗೆ ಈಗ ಟ್ವಿಸ್ಟ್ ಸಿಕ್ಕಿದೆ. ಘಟನೆಯಿಂದ ನೊಂದ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ವಿಚಾರವನ್ನ ಸ್ಥಳೀಯರು ಬಹಿರಂಗಪಡಿಸಿದ್ದಾರೆ.
ವಿದ್ಯಾರ್ಥಿ ಮೇಲೆ ಹಲ್ಲೆ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸಂಸ್ಕೃತ ಪಾಠ ಶಾಲೆಗೆ ಮುತ್ತಿಗೆ ಹಾಕಿದ್ದು, ಇಓ ಗಂಗಾಧರಪ್ಪ ಅವರನ್ನು ತರಾಟೆಗೆ ಪಡೆದಿದ್ದಾರೆ. ಶಿಕ್ಷಕ ವಿರೇಶ್ಗೆ ಸಂಸ್ಕೃತ ಬರಲ್ಲ, ಶಾಲೆಯಲ್ಲಿ ಇರಲ್ಲ. ಬದಲಾಗಿ ಪೂಜೆ , ವಾಮಾಚಾರ ಮಾಡಲು ಹೋಗುತ್ತಾನೆ. ಮಕ್ಕಳ ಮೇಲೆ ನಿರಂತರ ಕ್ರೌರ್ಯ ಮೆರೆಯುತ್ತಿದ್ದಾನೆಂದು ಆರೋಪಿಸಿದ್ದಾರೆ. ಫೆ10, 2025ರಂದು ಈ ಪ್ರಕರಣ ನಡೆದಿದ್ದು, ನೊಂದ ಬಾಲಕ ಕೆರೆ ಬಳಿಗೆ ತೆರಳಿ ಆತ್ಮಹತ್ಯೆಗೆ ಮುಂದಾಗಿದ್ದ. ಆಟೋದವನೊಬ್ಬ ಆತನನ್ನು ರಕ್ಷಿಸಿದ್ದಾನೆ. ಬಳಿಕ ಕೂಡ್ಲಗಿ ತಾಲೂಕಿನ ಅಪ್ಪೇನಹಳ್ಳಿಯಿಂದ ಅಜ್ಜಿ ಬಂದು ಮೊಮ್ಮಗನನ್ನು ಕರೆದೊಯ್ದಿದ್ದಾಳೆ. ಸದ್ಯ ಬಾಲಕ ಗುಡಿಕೋಟೆ ಗ್ರಾಮದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಎಲ್ಲ ಸೇರಿ ಪ್ರಕರಣ ಹೊರಬರದಂತೆ ಮುಚ್ಚಿ ಹಾಕಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಘಟನೆ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕೂಡ ಪ್ರತಿಕ್ರಿಯಿಸಿದ್ದಾರೆ. ಇದು ಖಾಸಗಿ ಸಂಸ್ಕೃತ ಶಾಲೆಯಾಗಿದ್ದು, ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತದೆ. 9 ವರ್ಷದ ಬಾಲಕನ ಮೇಲೆ ಮುಖ್ಯ ಶಿಕ್ಷಕ ಹಲ್ಲೆ ಮಾಡಿದ್ದು ಅಕ್ಷಮ್ಯ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೇರೆ ಬೇರೆ ಶಾಲೆಗಳಿಂದ ಯಾವುದೇ ದೂರು ಬರದಿದ್ದರೂ ಎಲ್ಲ ಸಂಸ್ಕೃತ ಶಾಲೆಗಳ ಬಗ್ಗೆ ಗಮನಹರಿಸಲು ಹೇಳಿದ್ದೇವೆ ಎಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನಾಯಕನಹಟ್ಟಿ ಸಂಸ್ಕೃತ ಶಾಲೆಗೆ ಡಿಡಿಪಿಐ ಮಂಜುನಾಥ್ ಭೇಟಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡುತ್ತೇವೆ. ಸಂಸ್ಕೃತ ಶಾಲೆ ನಮ್ಮ ವ್ಯಾಪ್ತಿಗೆ ಬರಲ್ಲ, ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮದ ಜೊತೆಗೆ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗೆ ಸೂಕ್ತ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಶಿಕ್ಷಕ ವೀರೇಶ್ ಅಮಾನವೀಯ ವರ್ತನೆ ಬಗ್ಗೆ ಗೊತ್ತಾಗಿದ್ದು,ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದು ತಹಶೀಲ್ದಾರ್ ರೆಹನ್ ಪಾಷಾ ಕೂಡ ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸಿಸಿಟಿವಿ ಅಳವಡಿಸದೆ ಇರುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದಿದ್ದಾರೆ.
ಘಟನೆ ಬಗ್ಗೆ ಗುರು ತಿಪ್ಪೇಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ದೂರಿನ ಅನ್ವಯ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ವಿದ್ಯಾರ್ಥಿ ಮಢೇಲಿನ ಹಲ್ಲೆ ವಿಡಿಯೋ ವೈರಲ್ ಬಳಿಕ ನಾಪತ್ತೆಯಾಗಿದ್ದ ಶಿಕ್ಷಕನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:37 pm, Tue, 21 October 25